ಮಧ್ಯರಾತ್ರೀಲೀ….

ಓಹ್! ಆ ದಿನಗಳೇ ಚೆನ್ನಾಗಿತ್ತಪ್ಪ. ವಾರಕ್ಕೆ ಆರೇದಿನ ಸ್ಕೂಲು. ಅದರಲ್ಲೂ ಐದುದಿನಗಳು ಒಂದೇ ರೀತಿಯ ಯೂನಿಫಾರ್ಮ್. ಆರನೇ ದಿನ ನಮ್ಮಾಯ್ಕೆಯ ಅಥವಾ ನಮ್ಹತ್ರ ಇರೋ (ಒಂದೋ ಎರ್ಡೋ ಇರ್ತಿತ್ತಷ್ಟೇ) ಬಣ್ಣದ ಬಟ್ಟೆ, ಮತ್ತು ಅರ್ಧ ದಿನ ಸ್ಕೂಲಿನ ಅನುಕೂಲ. ತೀರಾ ಹೊರೆಯೆನಿಸದ ಹೋಮ್ವರ್ಕು.ಬೇಸಿಗೆಯಲ್ಲೂ ದಸರಾ ಸಮಯದಲ್ಲೂ ಭರಪೂರ ರಜೆಯ ಮಜಾ.ಈಗಿನ ಮಕ್ಕಳಂತೆ ದಿನಕ್ಕೊಂದು ಬಗೆ ಸಮವಸ್ತ್ರ, ಪಠ್ಯದಷ್ಟೇ ಕಟ್ಟುನಿಟ್ಟಿನಲ್ಲಿ ಕಲಿಯಲೇಬೇಕಾದ ಪಠ್ಯೇತರ ಚಟುವಟಿಕೆಗಳೂ, ಎಡವಿಬಿದ್ದರೆ ಅಸೈನ್ಮೆಂಟೂ, ಪ್ರೋಜೆಕ್ಟೂ, ಇಂಟರ್ನಲ್ಸೂ, ದೊಡ್ಡ ಪರೀಕ್ಷೆ ಮುಗಿದಮೇಲೂ ಪ್ರಾಪ್ತಿಯಾಗದ ದೊಡ್ಡ ರಜೆ, ಸಿಕ್ಕ ಚೂರೂಪಾರು ರಜೆಯಲ್ಲಿ ಸಮ್ಮರ್ ಕ್ಯಾಂಪೂ …. ಊಹೂ ಇದ್ಯಾವ್ದೇ ರಗಳೆಗಳಿಲ್ದೆ ಸುಖವಾಗಿ ಕಳೆದ ವಿದ್ಯಾರ್ಥಿ ಜೀವನ ನನ್ನದು.
      ಈಗಿನಷ್ಟು ಭಾರೀ ಓದುಗಳೂ ಹೊರೆ ಹೋಮ್ವರ್ಕುಗಳೂ ಇಲ್ಲದ್ದರಿಂದ ಬಿಡುವಿನ ವೇಳೆ ತುಂಬಾ ತುಂಬಾ ಇರೋದು. ಟಿವಿ, ಕಂಪ್ಯೂಟರ್ರೂ ಇನ್ನೂ ತಮ್ಮ ಪ್ರಭಾವಬೀರದ ದಿನಗಳವು. ಆಡುವ ಎಳೇಪ್ರಾಯ ಹಿಂದೆ ಸರಿದಂತೆ ನಾನೂ, ನನ್ನದೇ ವಯೋಮಾನದ ಹೆಚ್ಚಿನ ಮಕ್ಕಳೂ ತುಂಬಾ ಚಿಕ್ಕ ಪ್ರಾಯದಲ್ಲೇ ಪಠ್ಯೇತರ ಪುಸ್ತಕ ಕೈಗಂಟಿಸಿಕೊಂಡಿದ್ದೆವು.
       ನಾನಂತೂ ಮೂರನೇ ತರಗತಿಯಲ್ಲಿರುವಾಗಲೇ ತ್ರಿವೇಣಿಯವರ,ಉಷಾ ನವರತ್ನರಾವರ ಸಾಮಾಜಿಕ, ಪ್ರೇಮ  ಕಾದಂಬರಿಗಳನ್ನೋದುತ್ತಿದ್ದೆ. ಏಳರ ಹೊತ್ತಿಗಾಗಲೇ ತೆಲುಗು ಕಾದಂಬರಿಗಳ ಗೀಳು. ಹೈಸ್ಕೂಲ್ ಹೊಸ್ತಿಲ್ಲಲ್ಲಿ ಕಾರಂತರು, ಭೈರಪ್ಪನವರೂ, ಕುವೆಂಪು, ಪೂಚಂತೇ ಎಲ್ಲರೂ ಮನಸ್ಸನ್ನಾವರಿಸಿಯಾಗಿತ್ತು. ತರಂಗ, ತುಷಾರಾ,ಹಾಯ್ ಬೆಂಗಳೂರಿನಂಥ ನಿಯತಕಾಲಿಕಗಳೂ ಜೊತೆಗಿದ್ದವು.
    ಓದು ಬರಬರುತ್ತಾ ನನಗೆಂಥಾ ಗೀಳಾಗಿತ್ತೆಂದರೆ ಬುಧವಾರ ಅಪ್ಪ ತರಂಗ ತರಲು ಮರೆತರೆ ಮನೆ ರಣರಂಗವಾಗುತ್ತಿತ್ತು. ಬೇಕೆನಿಸಿದ ಪುಸ್ತಕ ತಕ್ಷಣಕ್ಕೆ ಕೈಗೆಟುಕದೇ ಹೋದರೆ ತಲೆ ಚಿಟ್ಟು ಹಿಡಿದಂತಾಗುತ್ತಿತ್ತು. ಓದಿರುವ ಪುಸ್ತಕಗಳನ್ನೇ ಮತ್ತೆ ಮತ್ತೆ ಓದುತ್ತಿದ್ದೆ .ಪುಸ್ತಕ ಹಿಡಿದು ಕುಳಿತೆನೆಂದರೇ ಸಾಕು; ಪರಿಚಯ ಇಲ್ಲದ ಹೊಸಬರು “ಆಹಾ, ಎಂಥಾ ತದಾತ್ಮ” ಎಂತಲೂ ಮನೆಮಂದಿ “ಥೂ, ಆ ಬುಕ್ಕೊಂದು ಕೈಲಿದ್ರೆ ಲೋಕ ಮುಳುಗಿದ್ದು ಗೊತ್ತಾಗಲ್ವನೇ ” ಎಂದೂ ಹೇಳುತ್ತಿದ್ದರೂ ಅದರ ಪರಿವೆಯೇ ಇಲ್ಲದೆ ನನ್ನದೇ ಕಲ್ಪನಾ ಲೋಕದಲ್ಲಿರುತ್ತಿದ್ದೆ.
     ಒಮ್ಮೆ ಹೀಗಾಯ್ತು. ಹೈಸ್ಕೂಲ್ ದಸರಾರಜೆಯ ಸಮಯ ಯಾವಾಗಿನಂತೆ ನಾನು ನನ್ನಜ್ಜನ ಮನೆಗೆ ಹೊರಟಿದ್ದೆ. ಬಟ್ಟೆಬರೆ ಜೊತೆ ಒಂದೆರಡು ಪುಸ್ತಕಗಳನ್ನೂ ಗಂಟುಕಟ್ಟಿದ್ದೆ. ಅಜ್ಜನ ಊರೋ ಅದೊಂದು ಕುಗ್ರಾಮ.ಇಡೀ ಊರಿಗೆ ಅಜ್ಜನದ್ದೂ ಸೇರಿ ಎರಡೋ ಮೂರೋ ಮನೆಗಳಷ್ಟೇ ಇದ್ದಿದ್ದು. ಅದೂ ಒಂದರಿಂದ ಇನ್ನೊಂದು ಕಣ್ಣಿಗೆ ಕಾಣದಷ್ಟು ದೂರದಲ್ಲಿ.
ನಿಲ್ದಾಣದಲ್ಲಿ ಬಸ್ಸಿಳಿದು ನೇರ ಕಾಲುಹಾದಿಯಲ್ಲಿ ಒಂದರ್ಧ ಕಿಲೋಮೀಟರ್ ಗೇರು ತೋಪು, ಕುರುಚಲು ಕಾಡಿನಿಂದ ಸುತ್ತುವರಿದ ರಸ್ತೆ ಹಿಡಿದು ನಡೆದರೆ ಸೊಂಪಾದ ಸುವಿಸ್ತಾರವಾದ ಅಜ್ಜನ ಅಡಿಕೆ ತೋಟ, ತೋಟಕ್ಕಂಟಿದಂತೇ ಮನೆ ಮತ್ತದರ ಎದುರಲ್ಲೇ ದನಕರುಗಳ ಕೊಟ್ಟಿಗೆ, ಮನೆಯ ಪ್ರೀತಿಯ ನಾಯಿ ‘ಸೋನಿ’ಗೊಂದು ಗೂಡು, ಅಡಿಕೆ ಒಲೆ.ಮನೆಯಿಂದ ಸ್ವಲ್ಪ ದೂರದಲ್ಲಿ ಪ್ರತ್ಯೇಕವಾಗಿದ್ದ ಬಾವಿಕಟ್ಟೆ, ಸ್ನಾನ ಮತ್ತು ಶೌಚದ ಕೋಣೆಗಳು.ತೀರಾ ಆಡಂಬರವಾಗೇನೂ ಇಲ್ಲದಿದ್ದರೂ ಹಳೆಯ ಮನೆಯಾದ್ದರಿಂದ ವಿಶಾಲವಾದ ಜಗುಲಿ, ಹಜಾರ, ಒಳಕೋಣೆಗಳ ದೊಡ್ಡ ಮನೆಯೇ ಅದು. 
     ಮೊದಲಾದರೆ  ಆಡುತ್ತಾ ಕುಣಿಯುತ್ತಾ ದೊಡ್ಡ ಮನೆ,ಅಂಗಳದ ತುಂಬಾ ಗಲಾಟೆ ಗದ್ದಲ ಮಾಡುತ್ತಾ ರಜೆಯನ್ನು ಮೋಜಾಗಿ ಕಳೆಯಬಹುದಿತ್ತು. ಆದರೀಗ ಹೈಸ್ಕೂಲ್ ಓದೋ ದೊಡ್ಡ ಹುಡುಗಿ ಎನಿಸಿಕೊಂಡಿದ್ದೀನಲ್ಲಾ…. ಗಂಭಿರವಾಗಿರಲೇ ಬೇಕಾದ ಅನಿವಾರ್ಯ. ಸರಿ, ಹೋದಾಕ್ಷಣ ನಾನು ಒಯ್ದಿದ್ದ ಬ್ಯಾಗನ್ನೊಂದುಕಡೆ ಎಸೆದೆ. ಮನೆಯವರೊಂದಿಗೆ ಸಾಧ್ಯವಾದಷ್ಟು ಹರಟಿ, ತೋಟ,ಕೊಟ್ಟಿಗೆಗೆಲ್ಲಾ ಒಮ್ಮೆ ಹೊಕ್ಕುಬಂದೆ. ಹೊಸದಾಗಿ ಸ್ವೀಕರಿಸಿದ್ದ ಗಾಂಭೀರ್ಯ ಧೀಕ್ಷೆ ಅಷ್ಟೇನೂ ಆಕರ್ಷಕವಾಗಿರಲಿಲ್ಲ.ಆಡಬಹುದಾದ ಮಾತುಗಳೆಲ್ಲಾ ಮುಗಿದಂತೆನಿಸಿ ಅಜ್ಜನೂರು ಮೊದಲ ದಿನಕ್ಕೇ ‘ಯಮ ಬೋರಿಂಗ್’ಅನಿಸತೊಡಗಿತು.    
    ದೊಡ್ಡ ಮನೆಯ ಯಾವುದೋ ಒಂದು ಮೂಲೆಯಲ್ಲಿ ಪುಸ್ತಕ ಹಿಡಿದು ಕುಳಿತರೆ  ಜಗತ್ತನ್ನು ನಾನೂ; ನನ್ನನ್ನು ಜಗತ್ತೂ ಸುಲಭವಾಗಿ ಮರೆತುಬಿಡಬಹುದಾಗಿತ್ತು. ಸಧ್ಯಕ್ಕೆ ಹೊತ್ತುಕಳೆಯಲು ಅದೇ ಉತ್ತಮ ಎಂದುಕೊಂಡ ನಾನು ಮಧ್ಯಾನ ಊಟದ ನಂತರ ಮನೆಯಿಂದ ಕೊಂಡೊಯ್ದಿದ್ದ “ಕಾಡಿನ ಕಥೆಗಳು” ಹಿಡಿದು ಕುಳಿತೆ.
        ಕುಳಿತದ್ದೊಂದೇ ನೆನಪು. ಪುಸ್ತಕದಲ್ಲಿ ಅದ್ಯಾವ ಮಟ್ಟಿಗೆ ಕಳೆದುಹೋದೆನೆಂದರೆ ಮಧ್ಯದಲ್ಲಿ ಯಾರೋ ಸಂಜೆಯ ಕಷಾಯ ತಂದುಕೊಟ್ಟಿದ್ದೂ,ರಾತ್ರೆಯ ಊಟಕ್ಕೆ ಕರೆದದ್ದೂ ಮಸುಕು ಮಸುಕಾಗಿ ನೆನಪಿದೆ. ಅದೇನು ಕುಡಿದೆನೋ ತಿಂದೆನೋ ಒಂದೂ ನೆನಪಿಲ್ಲ. ಮತ್ತೆ ಪುಸ್ತಕ ಹಿಡಿದು ಕುಳಿತವಳಿಗೆ ಅಜ್ಜನೋ ಇನ್ಯಾರೋ ಒಬ್ಬರು ಹತ್ತಿರ ಬಂದು ಮಲಗುವ ಸಮಯವಾಯ್ತು ಅಂತೇನೋ ಹೇಳಿದ್ದರೂ ‘ಇನ್ನೊಂದೇ ಪೇಜ್.. ಬೇಗ ಮುಗಿಸಿ ಮಲಗ್ತೀನಿ’ ಎಂದು ಹಾಗೇ ಓದು ಮುಂದುವರೆಸಿದ್ದೆ.
  ಪುಸ್ತಕ ಪೂರ್ಣ ಮುಗಿದಾಗ ಮಧ್ಯರಾತ್ರಿ ಎರಡರ ಸಮಯ. ಪುಸ್ತಕದ ರೋಮಾಂಚಕತೆ, ನಿದ್ರೆಯ ಸೆಳೆತ ಎಲ್ಲಾ ಒಟ್ಟಾಗಿ ತಲೆ ಭಾರವಾಗಿತ್ತು. ಬೇಗನೆ ಮಲಗಿಬಿಡೋಣ ಎಂದು ಹೊರಟರೆ ಆಗಲೇ ಶುರುವಾದ್ದು ಅಸಲೀ ಸಮಸ್ಯೆ. ಮಲಗೋ ಮೊದಲು ಬಚ್ಚಲಿಗೆ ಹೋಗಬೇಕಾಗಿದೆ ಮತ್ತು ಹೋಗಲೇಬೇಕಾಗಿದೆ.ಆದರೆ ಹೇಗೆ!? ಬಚ್ಚಲುಕೋಣೆ ಮನೆಯಿಂದ ಹೊರಗೆ ಪ್ರತ್ಯೇಕವಾಗಿದೆಯಷ್ಟೇ, ನೂರು ಭಯಗಳು ಮನಸ್ಸನ್ನಾವರಿಸಿದವು.
       ಮನೆಯ ಹತ್ತಿರದಲ್ಲೇ ಎಲ್ಲೋ ಕೂಗುತ್ತಿರೋ ಗೂಬೆ, ಕಾಡಿನ ಜೀರುಂಡೆಗಳ ಝೇಂಕಾರ, ಅಟ್ಟದ ಮೇಲಿನ ಇಲಿ-ಹೆಗ್ಗಣಗಳ ಓಡಾಟದ ಸರ-ಬರ ಶಬ್ದ, ಅಲ್ಲೆಲ್ಲೋ ದೂರದಲ್ಲಿ ಬಾವಲಿಗಳು ಪಟಪಟನೇ ರೆಕ್ಕೆ ಬಡಿಯೋ ಶಬ್ದ…ಹೌದೋ ಅಲ್ಲವೋ ಎಂಬಂತೆ ಕೇಳೋ ನರಿಗಳ ಊಳಿಡುವಿಕೆ…. ಒಂದೋ ಎರಡೋ. ಓದಿನಲ್ಲಿ ಮುಳುಗಿದ್ದಷ್ಟು ಹೊತ್ತೂ ಇಹದ ಪರಿವೇ ಇರಲಿಲ್ಲ ನನಗೆ.ಈಗ ಒಮ್ಮಿಂದೊಮ್ಮೆಗೇ ಸುತ್ತಲಿನ ಪ್ರತಿ ಶಬ್ದವೂ ಕಿವಿ ತಮಟೆಯ ಬಳಿಯಲ್ಲೇ ಮೊಳಗಿದಂತಾಗಿ ಭಯ ಹುಟ್ಟಿಸಿದವು.
     ಎಷ್ಟೇ ಭಯವಾದರೂ ಸರಿ ಮಲಗೋ ಮೊದಲು ಮಾಡಬೇಕಾದ ಕೆಲಸ ಮಾಡಲೇಬೇಕು, ಇಲ್ಲದ್ದಲ್ಲಿ ನಿದ್ರೇಯೂ ಸರಿಯಾಗಿ ಬಾರದು. ಮನೆವರೆಲ್ಲಾ ಗಡದ್ದು ನಿದ್ರೆಯಲ್ಲಿದ್ದರು.  ಯಾರನ್ನಾದರೂ ಎಬ್ಬಿಸಿ ಜೊತೆಗೆ ಕರೆದುಕೊಂಡು ಹೋಗಬಹುದಿತ್ತು, ಆದರೆ ಮತ್ತದೇ ಮಾಮೂಲಿ ವರಸೆಯ “ಯಂತಾ ಹೆದ್ರಿಕೆ, ಅಲ್ಲೆಂತ ಗುಮ್ಮ ಉಂಟಾ, ಹೋಗು ಮಾರಾತಿ” ಎಂದೋ”ಇಷ್ಟೊತ್ತಂಕಾ ಓದಿದ್ದಾ, ಕಣ್ಣೆಂತಕ್ಕೆ ಬರುತ್ತೆ ಹುಡ್ಗಿ, ಹೇಳಿದ್ದೊಂದೂ ಕೇಳಲ್ಲಪ” ಎಂದೋ ಬೈದಾರು ಎಂಬ ಅಳುಕು.
     ಹೆಚ್ಚು ಹೊತ್ತು ಇದನ್ನೆಲ್ಲಾ ಯೋಚಿಸುತ್ತಾ ಕೂರುವಂತಿರಲಿಲ್ಲ. ನಿದ್ರೆಯಿಲ್ಲದೇ ತಲೆ ಸಿಡಿಯುತ್ತಿತ್ತು. ಪೂರ್ಣ ಬೆಳಗಾಗೋ ಮೊದಲು ಸ್ವಲ್ಪವಾದರೂ ನಿದ್ರೆ ಮಾಡಲೇಬೇಕಿತ್ತು. ನಿದ್ರೆ ಬರಬೇಕೆಂದರೆ ನಾನೀಗ ಕತ್ತಲ ಹಿತ್ತಿಲಿನ ಬಚ್ಚಲಿಗೆ (ಜಲಬಾಧೆ ನಿವಾರಣೆಗೆ) ಹೋಗಲೇಬೇಕಿತ್ತು.
      ಅಂಜುತ್ತಾ ಅಳುಕುತ್ತಾ ಹಿತ್ತಿಲ ಬಾಗಿಲು ತೆಗೆದು ಹೊರಗಡಿಯಿಟ್ಟೆ. ಹೇಗೋ ಬಚ್ಚಲ ಕೆಲಸ ಪೂರೈಸಿ ಬಾವಿಕಟ್ಟೆಯ ಬಳಿ ಕಾಲು ತೊಳೆದು ಮನೆಯ ಸುರಕ್ಷಿತತೆಯ ಕಡೆ ಆತುರವಾಗಿ ನಡೆಯುತ್ತಾ ನೋಡುತ್ತೇನೆ; ದೂರದಲ್ಲಿ ಎರಡು ಮಿಣುಕು ಬೆಳಕುಗಳು!  ಒಂದೇ ಅಂತರದಲ್ಲಿ ಎರಡು ಮಿಣುಕು ಹುಳುಗಳು ಹಾರುತ್ತಿವೆಯೇನೋ ಎಂದು ಕಡೆಗಣಿಸುತ್ತಿದ್ದೆನೇನೋ, ಆದರೆ ಬೆಳಕುಗಳು ಮೆಲ್ಲಗೆ ನನ್ನೆಡೆಗೆ ಚಲಿಸುತ್ತಿವೆ! ಓಹ್ ಮಿಣುಕು ಹುಳಗಳಲ್ಲ ಅವು,ಎರಡು ಕಣ್ಣುಗಳು! ಜೊತೆಗೇ ಮೆಲ್ಲನೆ ಗುರುಗುಡುವ ಶಬ್ದವೂ ಬರುತ್ತಿದೆ. ಹುಣ್ಣಿಮೆ ಬೆಳಕಿನಲ್ಲಿ ಯಾವುದೋನಾಲ್ಕು ಕಾಲಿನ ಪ್ರಾಣಿ ನನ್ನೆಡೆ ಬರುತ್ತಿರುವುದು ಅಸ್ಪಷ್ಟವಾಗಿ ಕಂಡಿತು. ನಿತ್ತಲ್ಲೇ ಹೌಹಾರಿದೆ! 
        “ಪ್ರಾಣಿ ಯಾವುದಿರಬಹುದು, ಇಷ್ಟು ರಾತ್ರಿಯಲ್ಲಿ ಅಜ್ಜನ ಮನೆಯಂಗಳದಲ್ಲಿ ಏನು ಮಾಡುತ್ತಿರಬಹುದು”,ಊಹೂ….. ಇವೆಲ್ಲಾ ತಾಳ್ಮೆ, ವಿವೇಕಯುಕ್ತ ಯೋಚನೆಗಿಂತಾ ಭಯದ ಶಕ್ತಿಯೇ ಹೆಚ್ಚು. ಅಷ್ಟು ಹೊತ್ತೂ ಓದಿದ ಪುಸ್ತಕದಲ್ಲಿನ “ರುದ್ರಪ್ರಯಾಗದ ನರಭಕ್ಷಕನೇ” ನನ್ನನ್ನು ಬೇಟೆಯಾಡಲು ಬಂದಿದೆ ಎಂದು ಬಲವಾಗಿ ಅನಿಸಿತು. ತಡಮಾಡದೇ ದೊಡ್ಡ ಧ್ವನಿಯಲ್ಲಿ ಕೂಗುತ್ತಾ ಮನೆಯ ಹಿತ್ತಲ ಬಾಗಿಲಿನ ಕಡೆಗೆ ಓಡಲು ಶುರುಮಾಡಿದೆ. ಆ ಪ್ರಾಣಿಯೂ ಗುರುಗುಡುತ್ತಾ ವೇಗ ಹೆಚ್ಚಿಸಿಕೊಂಡು ನನ್ನ ಹಿಂದೆಯೇ ಬಂತು. ನಾನು ಮನೆಯ ಬಾಗಿಲ ಬಳಿ ಬರೋದರೊಳಗೆ ಕೂಗಿ ಮಾಡಿದ ಗದ್ದಲಕ್ಕೆ ಮಲಗಿದ್ದ ಅಜ್ಜ, ಅಜ್ಜಿ, ಅಮ್ಮ ಎಲ್ಲರೂ ದಡಬಡಿಸಿ ಎದ್ದು ನಾನಿದ್ದಲ್ಲಿಗೇ ಬಂದರು.
       ಭಯದಲ್ಲಿ ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ ನಾನು. ಹೇಳಬೇಕಾದ ಅಗತ್ಯ ಕೂಡಾ ಇರಲಿಲ್ಲ. ಗಲಾಟೆ ಕೇಳಿ ಬಂದವರಲ್ಲೊಬ್ಬರು ಹಿತ್ತಲ ಕರೆಂಟ್ ದೀಪದ ಸ್ವಿಚ್ ಹಾಕಿದ್ದರು. ಜಗ್ಗನೆ ಹೊಮ್ಮಿದ  ಬೆಳಕಿನಲ್ಲಿ  ನನ್ನ ಕಾಲ ಬುಡದಲ್ಲೇ ಬಾಲವಾಡಿಸುತ್ತಾ ನಿಂತಿತ್ತು ‘ಮನೆಯ ಮುದ್ದಿನ ನಾಯಿ-ಸೋನಿ’.
       “ಊಫ್! ಇದಕ್ಕಾಗಿ ಇಷ್ಟು ಹೆದರಿದೆನಾ, ಇಷ್ಟು ಪಾಪದ ನಾಯಿಮರಿಯನ್ನು ನರಭಕ್ಷಕ ಹುಲಿ,ಚಿರತೆಗೆ ಹೋಲಿಸಿ ಭಯಪಟ್ಟೆನಾ” ಎಂದು ನನ್ನ ತಲೆಗೆ ನಾನೇ ಮೊಟಕಿಕೊಂಡೆ. ಹಿತ್ತಲ ದೀಪ ಹಾಕದೇ ಬಚ್ಚಲವರೆಗೂ ಹೋದ ಪೆದ್ದುತನಕ್ಕೆ, ನಾಯಿಯನ್ನು ಹುಲಿಯೆಂದುಕೊಂಡ ಪುಕ್ಕಲುತನಕ್ಕೆ, ಬೆಳಗಿನ ಜಾವದತನಕ ನಿದ್ರೆಗೆಟ್ಟು ಕಥೆಪುಸ್ತಕ ಓದಿದ್ದಕ್ಕೆ ನನಗೂ, ಅಂಥಾ ತಲೆಕೆಡುವ, ಭಯ ಹುಟ್ಟಿಸುವ ಪುಸ್ತಕ ಬರೆದದ್ದಕ್ಕೆ “ಜಿಮ್ ಕಾರ್ಬೆಟ್” ಹಾಗೂ “ಪೂರ್ಣ ಚಂದ್ರ ತೇಜಸ್ವಿ”ಯವರಿಗೂ ಅಮ್ಮ ಮತ್ತು ಅಜ್ಜನಿಂದ ಮಧ್ಯರಾತ್ರಿಯಲ್ಲಿ  ಮಹಾಮಂಗಳಾರತಿ(ಬೈಗುಳ) ಅವ್ಯಾಹತವಾಗಿ ನಡೆಯಿತು.
       ಇಷ್ಟೆಲ್ಲಾ ನಡೆಯುವಾಗ ಘಂಟೆ ಮೂರರ ಸಮೀಪ ಬಂದಿತ್ತು.ಹಾಸಿಗೆ ಸೇರಿದಮೇಲೂ ಎಷ್ಟೋ ಹೊತ್ತಿನವರೆಗೂ ಜೋರಾಗಿ ಹೊಡೆದುಕೊಳ್ಳುತ್ತಿದ್ದ ಹೃದಯ ಯಾವಾಗ ಸಹಜವಾಯ್ತೋ, ನಿದ್ರೆ ಯಾವ ಘಳಿಗೆಯಲ್ಲಾವರಿಸಿತೋ ಒಂದೂ ತಿಳಿಯದು.
     ಅಂದು ಅಮ್ಮ ಬೈದ ಪ್ರತಿ ಬೈಗುಳವೂ ಜಿಮ್ ಕಾರ್ಬೆಟ್ರಿಗೂ ಪೂಚಂತೇಯವರಿಗೂ ಸಂದ ಗೌರವವೆಂದೇ
ಭಾವಿಸಿ ಓದುವ ಹವ್ಯಾಸವನ್ನು ಬಿಡದೇ ಮುಂದುವರಿಸಿದ್ದೇನೆ; ಮುಂದುವರೆಸುತ್ತಲೇ ಇದ್ದೇನೆ.ಏನೇ ಆಗಲಿ,ಏನೇ ಹೋಗಲಿ; ಓದಿನ ಬಂಡಿ ಬರದಲಿ ಸಾಗಲಿ. ಸರಿ ತಾನೇ?

6 thoughts on “ಮಧ್ಯರಾತ್ರೀಲೀ….

  1. ಪೂಚಂತೆಯವರ ಕಥೆಗಳಷ್ಟೆ ಕುತೂಹಲ, ಕೌತುಕ ಹುಟ್ಟಿಸುವಂತೆ ಬರೆದ ಬರಹ ಸೂಪರ್ ಆಗಿದೆ..!

    ಬಾಲ್ಯದಲ್ಲಿ ನಮ್ಮದೆಲ್ಲ ಹೆಚ್ಚುಕಮ್ಮಿ ಒಂದೆ ಕಥೆ – ಬಹುಶಃ ಅದರಿಂದಲೆ ಈಗ ಕನ್ನಡ ಓದಿ ಬರೆವ ಈ ಹಂಬಲ, ಹವ್ಯಾಸ ಬಿಡದಂತೆ ಬೆನ್ನಿಗಂಟಿಕೊಂಡಿದ್ದು. ನಾನೂ ಬೀದಿಯ ಕೊನೆಯ ಅಂಗಡಿಯ ವಡೆ, ಪಕೋಡ ತರಲು ಹೊರಟರೆ ಆ ಕಟ್ಟಿಕೊಟ್ಟ ಪೇಪರಿನ ಸುದ್ದಿಯನ್ನೆ ಓದಿಕೊಂಡು ಬರುತ್ತಿದ್ದೆ ಉದ್ದಕ್ಕು.. ಸ್ಕೂಲಿನಲ್ಲಿ ಬೇರಾವ ಪುಸ್ತಕವನ್ನು ಮುಟ್ಟದಿದ್ದರು ಕನ್ನಡ ಮತ್ತು ಸಮಾಜ ಪುಸ್ತಕಗಳು ಸ್ಕೂಲ್ ಶುರುವಾದ ಒಂದೆ ತಿಂಗಳಲ್ಲೆ ಪೂರ್ತಿ ಓದಿ ಮುಗಿದುಹೋಗಿರುತ್ತಿತ್ತು..! ನಾ ಕಾದಂಬರಿ ಓದಿದ್ದು ಏಳನೆ ಕ್ಲಾಸಾದಮೇಲೆ – ಹಾಗಾಗಿ ನಿಮ್ಮಷ್ಟು ‘ಪಂಟರು’ ಅನ್ನೊಕ್ಕಾಗಲ್ಲವಾದರೂ, ಕಥೆಯ ಎಳೆಯೆಲ್ಲ ಒಂದೆ. ಇನ್ನು ಕಾಡಿನ ಕಥೆ ವಿಷಯದಲ್ಲೂ ನೀವೆ ವಾಸಿ.. ನಾನು ಮೈಸೂರಿನಂಥ ನಗರದಲ್ಲಿ ಬೆಂಕಿಪೆಟ್ಟಿಗೆಯ ಮನೆಯಂತಹ ರೂಮಿನಲ್ಲಿ ಓದಿ ಭ್ರಮೆಯಿಂದ ಹೆದರಿಕೊಂಡಿದ್ದೆ – ಕಿಟಕಿಯಿಂದ ಯಾವುದಾದರೂ ನರಭಕ್ಷಕ ಬಂದುಬಿಟ್ಟೀತಾ ಅಂತ..!

    ಚೆಂದದ ಬರಹಕ್ಕೆ ಅಭಿನಂದನೆಗಳು 😊

    Like

    1. ತೇಜಸ್ವಿಯ ತೇಜಸ್ಸೇ ಅಂಥದು ಅಲ್ವೇ .ಥ್ಯಾಂಕ್ಯೂ ಮತ್ತು ಸಾರೀ’ಗಳು. ನೆನ್ನೆ ನಿಮ್ಮ ಪೋಷ್ಟ್ (mens day)ಶೇರ್ ಮಾಡಿದ್ದೆ ಫೇಸ್ಬುಕ್ನಲ್ಲಿ. ಹಾಗಂತ ಮೆಸೇಜ್ ಮಾಡಿದ್ದೆ, send ಆದಂತಿಲ್ಲ , I hope its ok?

      Liked by 1 person

      1. ನಿಮ್ಮ ಮಾತು ನಿಜ – ನಾನು ಒಂದಕ್ಕಿಂತ ಹೆಚ್ಚು ಬಾರಿ ಮತ್ತೆ ಮತ್ತೆ ಓದಿರುವ ಪುಸ್ತಕಗಳು ಅಂದರೆ – ಪೂಚಂತೆಯವರದು ಮಾತ್ರ. ಅವರ ಪುಸ್ತಕಗಳನ್ನು ನೇರ ಪುಸ್ತಕ ಪ್ರಕಾಶನದಿಂದ ಪೋಸ್ಟಿನಲ್ಲಿ ತರಿಸಿಕೊಂಡು ಓದುವಷ್ಟು ಹುಚ್ಚು.. ಈಗ ವಿದೇಶದಲ್ಲಿರುವಾಗಲೂ ಹೊತ್ತು ತಂದದ್ದು ಹೆಚ್ಚಾಗಿ ಅವರ ಪುಸ್ತಕಗಳೆ 🙂

        ಅಯ್ಯೊ.. ನೀವು ನಿಮಗೆ ಚನ್ನಾಗಿದೆ ಅನಿಸಿದ್ದನ್ನು ಧಾರಾಳವಾಗಿ ಶೇರು ಮಾಡಿ – ನನ್ನದೇನು ಅಭ್ಯಂತರವಿಲ್ಲ – ಹೇಳಿಯೆ ಮಾಡಬೇಕೆಂಬ ನಿಯಮವಾದರೂ ಏಕೆ ? ಓದಿದವರೆಲ್ಲ ಖುಷಿಪಟ್ಟರೆ ತಾನೆ ಬರೆದದ್ದಕ್ಕೆ ಸಾರ್ಥಕ್ಯ? ಹಾಗೆಯೆ ತಪ್ಪುಒಪ್ಪುಗಳನ್ನು ಯಾರಾದರು ಗುರುತಿಸಿ ಹೇಳುವ ಅವಕಾಶವೂ ಸಿಕ್ಕಿದಂತಾಗುತ್ತದೆ. ನನಗೆ ಚೀನಾದಿಂದ ಫೇಸ್ಬುಕ್ ನೋಡಲು ಆಗುವುದಿಲ್ಲ, ಇಲ್ಲದಿದ್ದರೆ ನಾನೂ ಒಂದು ಲೈಕ್ ಹಾಕುತ್ತಿದ್ದೆ 🙂

        ಶೇರು ಮಾಡಿಕೊಂಡಿದ್ದಕ್ಕೆ ನಿಜಕ್ಕು ಧನ್ಯವಾದಗಳು !

        Liked by 2 people

  2. ಲೇಖನ ತುಂಬಾ ಚೆನ್ನಾಗಿದೆ… ನಾನೂ ಚಿಕ್ಕ ವಯಸ್ಸಿನಲ್ಲಿ ಈ ಪುಸ್ತಕಗಳ ಗೀಳು ಹಿಡಿಸಿಕೊಂಡವಳೇ. ಪೂಚಂತೇ ಅವರ ಪುಸ್ತಕಗಳು, ಮಲೆನಾಡಿನಲ್ಲಿ ಕಳೆದ ಬಾಲ್ಯ ಅದೇ ಸ್ವರ್ಗ ಅನ್ಸತ್ತೆ ಈಗ 😊 😊 😊

    Liked by 2 people

ನಿಮ್ಮ ಟಿಪ್ಪಣಿ ಬರೆಯಿರಿ