ತಪ್ಪು ಮಾಡದವ್ರ್ ಯಾರವ್ರೇ.. ತಪ್ಪೇ ಮಾಡದವ್ರ್ ಎಲ್ಲವ್ರೆ

ಈಗ್ಗೆ ಇಪ್ಪತ್ತು ವರ್ಷಗಳಷ್ಟು ಹಿಂದಿನ ಮಾತಿದು. ಮೊಬೈಲ್ ಅಲ್ಲ ಲ್ಯಾಂಡ್ ಫೋನ್(ಸ್ಥಿರ ದೂರವಾಣಿ) ಕೂಡಾ ಅಲ್ಲೋ ಇಲ್ಲೋ ಒಂದೊಂದು ಮನೆಗಳಲ್ಲಿ ಮಾತ್ರ ಇದ್ದ, ರೇಡಿಯೋ ಇನ್ನೂ ತನ್ನ ವರ್ಚಸ್ಸು ತಕ್ಕಮಟ್ಟಿಗೆ ಉಳಿಸಿಕೊಂಡಿದ್ದ  ದಿನಗಳು. ಮನೆಯ ಮುದ್ದಿನ ಮಗಳಾಗಿ, ಅಜ್ಜ-ದೊಡ್ಡಮ್ಮಂದಿರ ಅಕ್ಕರೆಯ ಮೊಮ್ಮಗಳಾಗಿ ತುಂಬಾ ಸಮೃದ್ಧವಾಗಿದ್ದ ಬಾಲ್ಯ ನಂದು.
    ಮಕ್ಕಳಿಂದ ಸದಾ ಸೀರಿಯಸ್ನೆಸ್ ಒಂದನ್ನೇ ಅಪೇಕ್ಷಿಸಿದ ನನ್ನಜ್ಜ ಮೊಮ್ಮಕ್ಕಳಿಂದ ತುಂಬಾ ಚಟುವಟಿಕೆ, ತುಂಟತನಗಳನ್ನು ಬಯಸಿ, ಆನಂದಿಸುತ್ತಿದ್ದರು. ಮಕ್ಕಳು ಹೊರಗಿನ ತಿಂಡಿ, ಚಾಕ್ಲೇಟ್ ಇತ್ಯಾದಿ ತಿನ್ನದೇ ಆರೋಗ್ಯವಾಗಿ ಬೆಳೆಯಲಿ ಎಂದು ಅಪ್ಪನ ಆಸೆಯಾದರೆ; ‘ಕಲ್ಲು ತಿಂದು ಅರಗಿಸಿಕೊಳ್ಳೊ ವಯಸ್ಸಿದು, ಚಾಕ್ಲೇಟೊಂದು ಯಾವ್ಲೆಕ್ಕ, ತಿನ್ಲಿ ಪಾಪ’ಅನ್ನೊದು ಅಜ್ಜನ ಅಭಿಪ್ರಾಯ.
     ತಿಂಡಿ, ಚಾಕ್ಲೇಟ್ ತರೋ ಅಜ್ಜ ಅದನ್ಯಾವತ್ತೂ ನನ್ಕೈಗೆ ಕೊಟ್ಟಿದ್ದಿಲ್ಲ. ನಾನಾಗೇ ಅವರ ಸರಕುಗಳ ಮಧ್ಯ ಹುಡುಕಿ ಕಳ್ಳತನದಲ್ಲಿ ತಿಂದು, ಏನೂ ಗೊತ್ತಿಲ್ಲದಂತಿರೋದೂ, ಆಮೇಲವ್ರು ‘ಅಯ್ಯೋ ನನ್ ಚಾಕ್ಲೆಟ್ ಕದ್ಲೂ’ ಅಂತ ಸುಮ್ನೆ ತಗಾದೆ ತೆಗ್ಯೋದೂ ನಮ್ಮಿಬ್ಬರ ನಡುವಿನ ಆಟದಂತಾಗಿ ಹೋಗಿತ್ತು.
      ಹೀಗಿರುವಾಗ ಬ್ಯಾಂಕ್ ಉದ್ಯೋಗಿಯಾದ ನನ್ನಪ್ಪನಿಗೆ ದೂರದೊಂದು ಹಳ್ಳಿಗೆ ವರ್ಗವಾಗಿ ಅಮ್ಮ, ಅಣ್ಣ, ನಾನು ಎಲ್ಲರೂ ಆ ಊರಿನಲ್ಲೇ ಇರೋಹಾಗಾಯ್ತು. ಹಳ್ಳಿ ಅದೆಷ್ಟು ಪುಟ್ಟದಿತ್ತೆಂದ್ರೇ ಅದಕಿದ್ದಿದ್ದೇ ನಾಲ್ಕೋ ಐದೋ ಬೀದಿಗಳು. ಬೇಗನೇ ಹೊಸ ಜಾಗಕ್ಕೆ ಹೊಂದಿಕೊಂಡ ನಾನು ಸ್ಕೂಲು, ಗೆಳತಿಯರ ಮನೆ, ಅಪ್ಪನ ಬ್ಯಾಂಕ್ ಹೀಗೆ ಸಂಪೂರ್ಣ ಸ್ವಚ್ಛಂದವಾಗಿ ತಿರುಗಾಡಿಕೊಂಡಿದ್ದ ಸೊಗಸಾದ ದಿನಗಳವು….ಆಹ್!                   
  ಹಾಗೆ ತಿರುಗಾಡೋ ದಿನಗಳಲ್ಲೇ ಕಣ್ಣಿಗೆ ಮೋಡಿಮಾಡಿ ತನ್ನೆಡೆ ಸೆಳೆದುಕೊಂಡಿದ್ದು ಒಂದು ಪುಟ್ಟ ಗೂಡಂಗಡಿ. ಸುಮ್ಮನೇ ಕುತೂಹಲಕ್ಕೆ ಹತ್ತಿರ ಹೋದೆ ಅಷ್ಟೇ. ಕೊಬ್ಬರಿ ಮಿಠಾಯಿ, ಶುಂಠಿ ಪೆಪ್ಪರ್ಮೆಂಟ್, ಹತ್ತಿ ಮಿಠಾಯಿ, ಬೆಣ್ಣೆ ಮುರುಕು, ಹುಣಸೆಯ ಕುಟ್ಟುಂಡೆ, ಪಾನ್ ಪಸಂದ್, ಕಠ್ಟಾಮೀಠಾ, ಜೀರಿಗೆ ಪೆಪ್ಪರ್ಮೆಂಟ್, ಸಕ್ಕರೆ ಅಚ್ಚು, ಬಣ್ಬಣ್ಣದ ಲಾಲಿಪಾಪ್ಗಳೂ… ಓಹ್, ಕೊನೆಮೊದಲಿಲ್ಲದ ಸ್ವರ್ಗವೇ ಇಲ್ಲಿ ಗಾಜಿನ ಡಬ್ಬಿಗಳಲ್ಲಿ ತುರುಕಿಡಲ್ಪಟ್ಟಿವೆ.
         ಅಪ್ಪನ ‘ಕುರುಕು ತಿಂಡಿ ವಿರೋಧಿ’ ತತ್ವಕ್ಕೂ, ಗೂಡಂಗಡಿಯ ಸ್ವರ್ಗಕ್ಕೂ ಘರ್ಷಣೆ ಶುರುವಾಯ್ತು ನನ್ನ ಮನಸ್ಸಿನಲ್ಲಿ. ಗೆದ್ದಿದ್ದು ಗೂಡಂಗಡಿಯೆ ಎಂದು ಬೇರೆ ಹೇಳಬೇಕಿಲ್ಲ ತಾನೇ. ಹೆಚ್ಚೇನೂ ಬೇಡ, ಎಲ್ಲಾ ತಿಂಡಿಗಳನ್ನೂ ಒಂದೊಂದು ಸಾರಿ ಮನಸಾ ಸವಿಯಬೇಕೆಂದಷ್ಟೇ ಆಗಿತ್ತು ನನ್ನಾಸೆ.
        ಅಪ್ಪನನ್ನೊ ಅಮ್ಮನನ್ನೋ ಕೇಳೋದು ವ್ಯರ್ಥ ಪ್ರಯತ್ನ ಎನ್ನೋದು ಹೇಗೂ ಗೊತ್ತಿದ್ದ ವಿಷಯ.ಪಾಕೆಟ್ಮನಿ ಅನ್ನೋದು ಆಗಿನ್ನೂ ಚಾಲ್ತಿಗೆ ಬರುತ್ತಿದ್ದ ,ಮಧ್ಯಮವರ್ಗಕ್ಕೆ ಲಗ್ಝುರಿ ಎನಿಸಿಕೊಂಡ ದಿನಗಳವು.ನಮ್ಮಲ್ಲಂತೂ ಆ ಅಭ್ಯಾಸ ಇರಲಿಲ್ಲ. ಅಗತ್ಯ ವಸ್ತುಗಳೆಲ್ಲಾ  ಅಪ್ಪ ಅಮ್ಮನೇ ಕೊಂಡು ಕೊಡುತ್ತಿದ್ದ ಕಾರಣ ನಮಗೂ ಅಲ್ಲಿಯವರೆಗೆ ದುಡ್ಡನ್ನು ಹೊಂದೋ ಅಗತ್ಯವೇ ಇರಲಿಲ್ಲ. ಆದರೆ ಈಗ ಅಗತ್ಯ,ಅನಿವಾರ್ಯ, ಅತ್ಯಾಸೆ ಎಲ್ಲವೂ ಒಟ್ಟಾಗಿತ್ತು. ಅಜ್ಜನ ಚಾಕ್ಲೇಟ್ ಕದ್ದ ಅನುಭವವೂ ಜೊತೆಗಿತ್ತು. ಸರಿ, ದಿನಾ ಒಂದೋ ಎರಡೋ ರೂಪಾಯಿಗಳನ್ನ ಕದಿಯೋ ಕೆಲಸ ಶುರು ಮಾಡಿದೆ.
        ದಿನಾ ಗೆಳತಿ ಮನೆಗೆ ಅನ್ನೋದು, ಗೂಡಂಗಡಿಗೆ ಹೋಗೋದು.ನಮೂನೆ ಸಿಹಿತಿಂಡಿ ತಿನ್ನೋದು. ಸೂಕ್ಷ್ಮಮತಿ ಅಮ್ಮನಿಗೆ ನನ್ನ ನಾಲಿಗೆ ಬಣ್ಣವಾಗಿರೋದೂ, ಬಾಯಿಂದ ತಿಂಡಿಯ ಘಮ ಹೊಮ್ಮೋದೂ, ಇಷ್ಟಿಷ್ಟೇ ದುಡ್ಡು ಇಟ್ಟಲ್ಲೇ ಮಾಯವಾಗೋದೂ ಗೊತ್ತಾಗ್ತಿತ್ತು. ಗಂಭೀರವಾಗಿ ನೀತಿಕಥೆ ಓದೋ ಮಗಳು ಕಳ್ಳತನ ಕೂಡಾ ಮಾಡಬಹುದು ಎಂಬ ಕಲ್ಪನೆ ಇಲ್ಲದ ಕಾರಣ ನನ್ನ ಈ ಸಣ್ಣ “ಅಡ್ವೆಂಚರ್” ಯಾವುದೇ ತಡೆಯಿಲ್ಲದೆ ಒಂದಷ್ಟು ದಿನ ನಡೆಯಿತು.
       ಕಳ್ಳತನ, ಹೇಳಿದ ಸುಳ್ಳುಗಳು ಹೆಚ್ಚು ದಿನ ಮುಚ್ಚಿಡೋದು ಎರಡೂ ಕಷ್ಟದ ಕೆಲಸಗಳು. ಕಡೆಗೂ ಇದಕ್ಕೆಲ್ಲಾ ಒಂದಂತ್ಯ ಬಂದೇ ಬಿಡ್ತು. ಚಿಲ್ಲರೆ ಕಾಯಿನ್ಗಳೊಂದಿಗೆ ರೆಡ್ ಹ್ಯಾಂಡಾಗೇ ಸಿಕ್ಕಿಬಿದ್ದೆ. ನಂಗಿನ್ನೂ ನೆನ್ಪಿದೆ. ಒಂದೈದು ನಿಮಿಷಗಳು ಶಾಕ್ನಲ್ಲಿದ್ದೆ. ನಾನೆಷ್ಟು ಶಾಕ್ನಲ್ಲಿದ್ನೋ ಅಷ್ಟೇ ಶಾಕ್ ಅಪ್ಪ ಅಮ್ಮನ ಮುಖದಲ್ಲೂ ಇತ್ತು ಅನ್ನಿಸುತ್ತೆ. ಶಾಕ್ ಕಳೆದ ಮೇಲೆ ಮುಂದೇನಾಗತ್ತೋ ಅಂತ ತುಂಬಾ ಭಯವಾಗ್ತಿತ್ತು.
         ಸ್ವಲ್ಪ ಹೊತ್ತು ಸುಮ್ಮನಿದ್ದ ಅಪ್ಪ ನಿಧಾನವಾಗಿ ದುಡ್ಡು ಕದ್ದ ಕಾರಣ ಕೇಳಿದ್ರು. ನನ್ನ ತಿಂಡಿ ಪುರಾಣ ಕೇಳಿ ಮನದಲ್ಲೇ ಏನೇನೋ ಚಿಂತೆ ಮಾಡ್ತಿದ್ರು. “ತಿಂಡಿಗೆ ಆಸೆಪಡೋದು ತಪ್ಪಲ್ಲ ಪುಟ್ಟಿ, ಆದ್ರೆ ಅದೆಲ್ಲ ಕ್ಲೀನಾಗಿರುತ್ತಾ, ಆರೋಗ್ಯಕ್ಕೆ ಒಳ್ಳೆದಾ ಅನ್ನೋದಷ್ಟೇ ನಮ್ಗೆ ಯೋಚ್ನೆ. ದುಡ್ಡು ತೆಗ್ದಿದ್ದು……..ಹೂ.. ತಪ್ಪು ಅಂತ ಗೊತ್ತಿದ್ದೂ ಮಾಡಿದೀಯ. ನಿಂಗೆ ಶಿಕ್ಷೆ ಕೊಟ್ಟು ಏನುಪ್ಯೋಗ, ಇನ್ನಾದ್ರೂ ನೀ ಹಿಂಗೆಲ್ಲ ಮಾಡಲ್ಲ ಅಂದ್ಕೊಂತಿನಿ.ದುಡ್ಡಿಡೋ ಜಾಗ ಬದ್ಲಾಯ್ಸಲ್ಲ ನಾನೀಗ. ನಿನ್ನ ನಂಬಬೇಕು ಅನ್ನೋ ನಿರ್ಧಾರ ಬದ್ಲಾಗೋ ಹಾಗ್ಮಾಡ್ಬೇಡ.” ಅಂತಷ್ಟೇ ಹೇಳಿದ್ರು.
          ಹೇಳಿದ ಅಪ್ಪ, ಅದಕ್ಕೆ ಸಾಕ್ಷಿಯಾದ ಅಮ್ಮ ಆ ಘಟನೆನ ಪೂರ್ತಿ ಮರ್ತೇಬಿಟ್ಟಿರಬೇಕು. ನಾನು ಮಾತ್ರ ಯಾವ್ದೊಂದನ್ನೂ ಮರೆತಿಲ್ಲ. ಮತ್ತೆ ಇನ್ಯಾವತ್ತೂ ಕದಿಯೋ ಯೋಚನೆ ಕೂಡಾ ಬರ್ಲಿಲ್ಲ ನನ್ತಲೆಗೆ. ಡಿಯರ್ ಅಪ್ಪಾ; ನಿಮ್ಮ ನಂಬಿಕೆಯೇ ನನಗೆ ನೀವಿತ್ತ ಶ್ರೀರಕ್ಷೆ.
             ………………………………….
      ಉಪ್ಪs ತಿಂದs ಮ್ಯಾಲೆ ನಿರs ಕುಡಿಯಲೇ ಬೇಕು.
ತಪ್ಪs ಮಾಡಿದಮ್ಯಾಲ ಶಿಕ್ಷೆ ಅನುಭವಿಸಲೆ ಬೇಕು..
   ,ಹೌದಾ! ನಿಜಾನಾ? ಅನ್ನಿಸುತ್ತದೆ ಈ ಹಾಡು ಕೇಳಿದಾಗಲೆಲ್ಲ. ಉಪ್ಪು ನೀರಿನ ವಿಷಯದಲ್ಲಿ ಯಾವ ಅನುಮಾನ ಕೂಡ ಇಲ್ಲ ನಂಗೆ. ಆದ್ರೆ ತಪ್ಪಿಗೆಲ್ಲಾ ಬರೀ ಶಿಕ್ಷೆಯೊಂದೇ ಅಂತಿಮ ಅಲ್ಲ. ತಪ್ಪಿಗೆ ಶಿಕ್ಷೆ ಕೊಡೋ ಮೂಲ ಉದ್ದೇಶ ತಪ್ಪಿನ ಬಗೆಗೆ ಅರಿಕೆ ಮೂಡ್ಸೋದೂ, ಪಶ್ಚಾತಾಪ ಹಾಗೂ ಪ್ರಾಯಶ್ಚಿತ ಮಾಡ್ಕೊಳೋವಂತೆ ಮನಪರಿವರ್ತಿಸೋದೂ ಆಗ್ಬೇಕೇ ಹೊರತು ಬರಿಯ ಕಾಟಾಚಾರದ ಕ್ರಮದಂತೆ ಒಂದು ಶಿಕ್ಷೆ ಅಂತ ಕೊಡೋದೂ, ಹೊಡಿ-ಬಡಿ-ಕೊಲ್ಲುಗಳಂಥಾ ಶಿಕ್ಷೆಗಳೂ ಯಾವ ಉಪ್ಯೋಗನೂ ಇಲ್ಲ ಅಂತ ನನ್ನಭಿಪ್ರಾಯ. 
      ಶಿಕ್ಷೆ ನಮ್ಮಲ್ಲಿ ಭಯ ಮೂಡಿಸೋದು, ಆ ಮೂಲಕ ತಪ್ಪು ದಾರಿಗೆ ಹೋಗದಂತೆ ತಡೆಯೋದೂ ಒಂದು ಹಂತದವರೆಗೆ ಒಳ್ಳೆಯದೇ. ಆದರೆ ಅದು ತಾತ್ಕಾಲಿ ಅಷ್ಟೇ.ಮನಸ್ಸಿಗೆ ಹೇರಿರೋ ಭಯ ಇಲ್ಲವಾದಾಗ ಮತ್ತದೇ ತಪ್ಪು ಮಾಡೋ ಆಸೆ ನಮ್ಮಲ್ಲುಂಟಾದ್ರೆ ಅಲ್ಲಿಗೆ ಭಯಪಡಿಸೋ ಶಿಕ್ಷೆಯ ಉದ್ದೇಶ ವ್ಯರ್ಥವಾದಂತೇ. ಅದರ ಬದಲು ತಪ್ಪು ಅಂತ ಕೆಲವು ಕೆಲಸಗಳನ್ನು ಯಾಕೆ ಕರೀತೀವೋ, ಅದನ್ನು ಮಾಡೋದರಿಂದ ನಮಗೂ, ಇತರರಿಗೂ ಯಾವರೀತಿ ತೊಂದರೆ,ಅನಾನುಕೂಲ ಆಗಬಹುದೋ ಅನ್ನೋದನ್ನ ಎಳವೆಯಿಂದಲೇ ಮಕ್ಕಳಿಗೆ ತಿಳಿಹೇಳೋದು, ನಾವೂ ಸಾಧ್ಯವಾದಷ್ಟು ಸೂಕ್ತ ಮಾರ್ಗದಲ್ಲಿ ಜೀವಿಸಿ ಕಿರಿಯರಿಗೆ ಮಾದರಿಯಾಗೋದು ಉತ್ತಮ ಅಲ್ಲವೇ…

5 thoughts on “ತಪ್ಪು ಮಾಡದವ್ರ್ ಯಾರವ್ರೇ.. ತಪ್ಪೇ ಮಾಡದವ್ರ್ ಎಲ್ಲವ್ರೆ

  1. ನಿಜ. ಶಿಕ್ಷೆ ಕಠಿಣವಾದಷ್ಟೂ ಬೆಳೆಯುವ ಮಕ್ಕಳಲ್ಲಿ ಹಟಮಾರಿತನ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಬದಲಿಗೆ ತಮ್ಮ ತಪ್ಪುಗಳ ಅರಿವು ಮಾಡಿಕೊಟ್ಟು, ಅವರಲ್ಲಿ ಕೀಳಿರಿಮೆ ಉಂಟಾಗದಂತೆ ಕಣ್ಣಿಟ್ಟು, ಇನ್ನೂ ಹೆಚ್ಚಿನ ನಂಬಿಕೆ, ಪ್ರೀತಿ, ವಿಶ್ವಾಸಗಳನ್ನು ತೋರಿಸುವ ಮೂಲಕ ಮಕ್ಕಳನ್ನು ಸರಿದಾರಿಗೆ ತರುವಲ್ಲಿ ಪೋಷಕರು ನಿಗಾವಹಿಸಬೇಕು. ಅದು ಮಕ್ಕಳ ಆತ್ಮವಿಶ್ವಾಸ ಹೆಚ್ಚಲು ಅನುಕೂಲಕ..😊

    Like

  2. ಈ ಪುಡಿ ತಿಂಡಿಯಾಸೆಗೆ ಮಾಡುವ ಕಳ್ಳತನದ ಪ್ರಸಂಗ ಬಹುತೇಕ ಎಲ್ಲರ ಬಾಲ್ಯದ ಸಾಮಾನ್ಯ ಅಂಶವೆಂದು ಕಾಣುತ್ತದೆ. ಹೇಳಿ ಕೇಳಿ ಶ್ರೀಕೃಷ್ಣನ ಬಾಲ ಲೀಲೆಯನ್ನು ಆರಾಧಿಸುವ ಪರಂಪರೆ ನಮ್ಮದಲ್ಲವೆ ? ಇದು ನನ್ನ ಅನುಭವವವೂ ಹೌದು – ನಿಮ್ಮ ರೀತಿಯೆ ನಮ್ಮ ಮನೆಯಲ್ಲೆ ಬೈಯದೆ, ಗಲಾಟೆ ಮಾಡದೆ ಸುಮ್ಮನಾಗಿಬಿಟ್ಟಿದ್ದು ಎಂತಹ ಪರಿಣಾಮ ಬೀರಿತೆಂದರೆ ಮತ್ತೆಂದು ಆ ಕೆಲಸಕ್ಕೆ ಕೈ ಹಾಕುವ ಆಲೋಚನೆಯೂ ಬರದಷ್ಟು! ಬಹುಶಃ ಶಿಕ್ಷೆ ಕೊಟ್ಟಿದ್ದರೂ ಆ ಪರಿಣಾಮ ಆಗುತ್ತಿರಲಿಲ್ಲವೇನೊ ?

    Liked by 1 person

ನಿಮ್ಮ ಟಿಪ್ಪಣಿ ಬರೆಯಿರಿ