​Me….before you; after you

I was like a lonely pond amidst a jungle

calm..quiet..silent..like a dead dove

but it was before You

Who came along like a naughty breeze

Got to my core

Made me ripple by a single touch

Now my happy tears reflect only one image …and that’s you
I was like a cuppa water

Plain, sparkling, clear as crystal 

But thats before you

Who came along like the essence of addiction 

Got to my core

Changed me from beneath and

Thought me how to blossom 

Now im the most mesmerizing perfume 

By the fragrance of you
I was like a plain glass

No carvings on it… no decorations

but that’s before you

Who came along like mercury 

Got to my core

Like endless spirit to move me from within Blended so perfectly to become a dazzling mirror in which

Now I see myself and found 

Reflection of you 
What I meant to say is….

you spoiled me and you destroyed me

In every possible way 

And now when I turn back to see..

There’s no you, there’s no me

Left is just us for eternity 

ಹೂವರಳೋ ಪರಿಯಲಿ…

ಮಧ್ಯಾಹ್ನ ಮೂರರ ಸಮಯ. ಕರ್ರನೆ ಟಾರು ರಸ್ತೆ ಸುಸ್ತಾಗಿರೋ ಹಾವಿನಂತೆ ಊರಿನುದ್ದಕ್ಕೂ ಬಿದ್ದುಕೊಂಡಿತ್ತು. ಕಾರಿನ ಏಸೀ ಬಿಸಿ ಬಿಸೀ ಗಾಳಿ ಉಗುಳುತ್ತಾ ನಮ್ಮ ಸೆಕೆ ಹೆಚ್ಚಾಗಿಸೋ ಮೂಲಕ ಈ ಬಿಸಿಲ್ಹೊತ್ತಿನಲ್ಲಿ ಹೊರಬಂದಿದ್ದು ಕಾರಿಗೆ ಬಿಲ್ಕುಲ್ ಇಷ್ಟವಿಲ್ಲ ಅನ್ನೋದನ್ನ ಸೂಚಿಸ್ತಿತ್ತು.
  ಪತಿದೇವ್ರು ಸಾಧ್ಯವಾದಷ್ಟು ಹಳ್ಳ-ದಿಣ್ಣೆಗಳನ್ನ ಅವೋಯ್ಡ್ ಮಾಡ್ತಾ ರಸ್ತೆ ಮಾಡಿರೋ ಕಾಂಟ್ರಾಕ್ಟರ್, ಮಿನಿಷ್ಟರ್ಗಳಿಗೂ ರಸ್ತೆಯನ್ನ ಅಷ್ಟೊಂದು ತಿರುವಾಗಿಸಿರೋ ದೇವರುಗಳಿಗೂ  ಬೈತಾ ಬೈತಾ ಗಾಡಿ ಓಡ್ಸೋದ್ರಲ್ಲಿ ಬ್ಯುಝಿಯಿದ್ರು. ನಾನು ಈ ಸುಡು ಬೇಸಿಗೆಯಲ್ಲಿ ಪೂಜೆ-ಗೀಜೆ ಅಂತ ದೇವರನ್ನೂ ಗೋಳ್ಹೊಯ್ಕೊಂಡು ಊಟದ್ಮನೆ ಅನ್ನೋ ಹೆಸರ್ನಲ್ಲಿ ಸಾರ್ವಜನಿಕ ಟಾರ್ಚರ್ ಏರ್ಪಡಿಸೋ ನೆಂಟರನ್ನ ಬೈತಾ ಸಣ್ಣಗೆ ಏರ್ತಾಯಿದ್ದ ತಲೆನೋವಿನೊಂದಿಗೆ ಹೆಣಗ್ತಾಯಿದ್ದೆ. ಹಿಂದಿನ ಸೀಟ್ನಲ್ಲಿ ಕೂತು ಹಾಜ್ಮೋಲಾ ತಿಂತಿದ್ದ ಚಿಂಟು ಒಬ್ನೇ ಸದ್ಯದ ಸಿಚುಯೇಶನ್ನಲ್ಲಿ ಸಂತೋಷವಾದ್ದವ್ನು ಅನ್ಸುತ್ತೆ.
   ಹೊಸನಗರ ಬಸ್ ಸ್ಟ್ಯಾಂಡ್ ತಲುಪಿ ಕಾರ್ನಿಂದಿಳ್ದಾಗ ಏಸಿಯ ಗಾಳಿಗಿಂತ ಸಹಜವಾಗಿ ಬೀಸ್ತಿರೋ ಗಾಳಿನೇ ತಣ್ಣಗೆ, ಹಿತ ಅನ್ಸಿ ಮನ್ಸಿಗೆ ಸ್ವಲ್ಪ ಸಮಾಧಾನ ಆದ್ರೂ ‘ಬಸ್ಸು ಬರುತ್ತೋ ಇಲ್ವೋ, ಬಸ್ಸಲ್ಲಿ ಸೀಟು ಸಿಗುತ್ತೋ ಇಲ್ವೋ, ಭಾರದ ಕಿಟ್ ಬ್ಯಾಗ್ ಜೊತೆ ಚಿಂಟುನ ಕೂಡಾ ಮ್ಯಾನೇಜ್ ಮಾಡ್ಬೇಕಲ್ಲಾ’ ಅನ್ನೋ ಚಿಂತೆಗಳೆಲ್ಲಾ ನಿಧಾನಕ್ಕೆ ಕಾಡೋಕೆ ಶುರುವಾದ್ವು. “ಇದು ತೀರ್ಥಳ್ಳಿ ಬಸ್ಸಾ…ಇದು ತೀರ್ಥಳ್ಳಿ ಬಸ್ಸಾ”ಅಂತ ಹೋಗೋ ಬರೋ ಎಲ್ಲಾ ಬಸ್ಗಳ ಕಡೆನೂ ಕೈ ತೋರ್ಸಿ ಕರ್ಕರೆ ಮಾಡಿ ನನ್ಹತ್ರ ಬೈಸ್ಕೊಂತು ಚಿಂಟು.
   ಅಂತೂ “ತೀರ್ಥಳ್ಳಿ ಬಸ್ಸು” ಬಂತು. ನನ್ನ,ಚಿಂಟೂನ ಸರಿಯಾಗಿ ಒಂದ್ಸೀಟಲ್ಲಿ ಕೂರ್ಸಿ “ಚಿಂಟು ಜೋಪಾನ” ಅಂತ ಒಂದ್ಹತ್ಸಲ ಹೇಳಿ ವಾಪಸ್ ನೆಂಟರ ಮನೆ ಕಡೆ ಹೊರಟ್ರು ಹಬಿ…ಅದೇ….ಮನೆದೇವ್ರು
      ಇನ್ನೂ ಹೊರಟಿರದ ಬಸ್ನ ಕಿಟಕಿಯಾಚೆ ಸಾಲಾಗಿರೋ ಅಂಗಡಿಗಳ ಬೋರ್ಡು ಓದ್ತಾಯಿದ್ದ ಚಿಂಟು ಆ ಕ್ಷಣ ತುಂಬಾ ಮುದ್ದಾಗಿ ಕಂಡ. “ಅಬ್ಬಾ ಈ ಮಕ್ಕಳೇ! ನಾವಿಷ್ಟೊಂದು ಮುತುವರ್ಜಿಯಿಂದ ರೆಡಿಯಾಗ್ತೀವಿ. ಫೇಷಿಯಲ್ಲೂ ಫೇಸ್ಪ್ಯಾಕೂಂತ ಒದ್ದಾಡ್ತೀವಿ. ಥರಾವರಿ ಕೂದಲು ಕತ್ತರಿಸ್ಕೊಂಡು ಚನ್ನಾಗ್ಕಾಣೋಕೆ ಹೆಣಗಾಡ್ತೀವಿ. ಆದ್ರೆ ಪುಟ್ಮಕ್ಳು!? ಬಾಯಲ್ಲಿ ಹಲ್ಲಿಲ್ದಿದ್ರೂ ಚಂದ, ತಲೆಮೇಲೆ ಕೂದಲಿಲ್ದಿದ್ರೂ ಚಂದ, ಏನೇ ಮಾಡಿದ್ರೂ ಹೇಗೇ ಇದ್ರೂ ಚಂದ! ಅದ್ಹೇಗೆ” ಅಂತೆಲ್ಲಾ ಯೋಚಿಸ್ತಾ ಇದ್ದೆ. ಅಷ್ಟರಲ್ಲಿ ಖಾಲಿಯಿದ್ದ ನಮ್ಮೆದುರಿನ ಸೀಟಿಗೆ ಒಂದು ಮುದ್ದಾಗ ಪುಟ್ಟ ಹುಡುಗಿ ಅಪ್ಪ,ಅಮ್ಮ ಪುಟ್ಟ ತಮ್ಮನೊಂದಿಗೆ ಬಂದು ಕೂತಿತು.
   ಕಡೂಗಪ್ಪು ಬಣ್ಣದ ಹುಡುಗಿ ಅಷ್ಟೇ ಕಪ್ಪಾದ ಪುಟ್ಟದೆರಡು ಜಡೆ ಹಾರಿಸುತ್ತಾ ಉತ್ಸಾಹದಿಂದ ತನ್ನಮ್ಮನೊಂದಿಗೆ  ಮಾತ್ನಾಡ್ತಿದ್ದರೆ. ಬೇರೇನೂ ಕೆಲಸವಿಲ್ಲದ ನಾನೂ ಅಮ್ಮ-ಮಗಳ ಮಾತು ಕೇಳ್ತಾ ಕೂತೆ.

“ಮಗಳು- ಅಮ್ಮಾ ಸೆವೆನಪ್ಪು ಕೊಡೇ.
ಅಮ್ಮ- ಇಕಾ.. ಇದ್ನ ಕುಡಿ.
ಮಗಳು- ಅಮ್ಮಾ ನೀರು ಬೇಡ,ಸೆವೆನಪ್ಪೇ ಬೇಕು,ಕೊಡೇ.
ಅಮ್ಮ- ಥತ್….ಇಕ,ಒಂದೇ ಸಲ ಖಾಲಿ ಮಾಡುದ್ರೆ ಗುದ್ದಿಬಿಡ್ತೀನ್ನೋಡು ತಾಟಗಿತ್ತಿ….”

ಸೆವೆನಪ್ಪು ಕುಡ್ದು ಹುಡುಗಿ ಮತ್ತೆರ್ಡು ನಿಮ್ಷ ಸುಮ್ಮನಿತ್ತು. ಬಸ್ಸಿನ ಒಳಗೂ ಹೊರಗೂ ನೋಡೀ ನೋಡೀ ಮತ್ತೆ ಅಮ್ಮನೊಟ್ಟಿಗೆ ಮಾತಿಗಿಳೀತು.

“ಮಗಳು- ಅಮ್ಮಾ ಬಸ್ಸು ಯಾಕೇ ಮುಂದಕ್ಕೇ ಹೋಗುವಲ್ತು?
ಅಮ್ಮ- ಬಸ್ಸು ಓಡ್ಸಕೆ ಡೈವರ್ ಬ್ಯಾಡನೇ. ಡೈವರ್ ಬರ್ತರೆ ತಡಿ.
ಮಗಳು- ಡೈವರ್ರು ಬಸ್ ನಿಲ್ಸಿ ಎತ್ತಾಗೋಗೋನಮ್ಮ?
ಅಮ್ಮ- ಊಟಮಾಡ್ಕಬರಕೆ ಕಣೇ, ಈಗ ಬರ್ತಾರ್ ತಡ್ಕ.
ಮಗಳು- ಓಓಓ!!! ಓ ಓ ಓ… ಡೈವರ್ರಿಗೆ ಮಾತ್ರ ಅಷ್ವಾಗದಂತಾ! ಒಬ್ರೇ ಹೋಗ್ಯಾರಲ್ಲ, ನಮಿಗೆಲ್ಲ ಊಟ ಬ್ಯಾಡಂತಾ ಹಂಗಾರೆ!
ಅಮ್ಮ- ಹ್ಹ ಹ್ಹ ಹ್ಹ.. ನಮಿಗೆಲ್ಲ ಅವ್ರ್ಯಾಕಮ ಊಟ ಹಾಕುಸ್ತಾರೆ, ಊಟ ಬೇಕಾರೆ ನಾವೇ ಕೊಂಡ್ಕೊಂಡು ತಿನ್ಬೇಕು ಓಟ್ಲಾಗೆ..
ಮಗಳು- ಹೋಓಓ ಅಷ್ಟೇಯಾ!…. ಸರಿ ಸರಿ ಸರಿ. ಅಮಾ ಸೆವೆನಪ್ಪು ಕೊಡೇ… ”

ಇಷ್ಟು ಕೇಳಿದ ನಾನು ನಗು ತಡೀಲಾರ್ದೇ ಗಮನ ಬೇರೆಡೆ ಹರಿಸೋ ಹೊತ್ತಿಗೆ ಪಕ್ಕದಲ್ಲಿದ್ದ ಚಿಂಟು “ಅಮ್ಮಾ, ತೀರ್ಥಳ್ಳಿ ಯಾವಾಗ ಬರುತ್ತೆ” ಅಂದ. ಇವ್ನ ಪ್ರಶ್ನೆಗಳಿಂದ ಸಧ್ಯಕ್ಕೆ ತಪ್ಪಿಸ್ಕೊಂಡ್ರೇ ಸಾಕು ಅನ್ನೋ ಅಭಿಪ್ರಾಯದಲ್ಲಿ ನಾನು,” ನೀನೊಂದು ನಿದ್ರೆ ಮಾಡು, ಏಳೋಷ್ಟೊತ್ತಿಗೆ ತೀರ್ಥಳ್ಳಿ ಬಂದೇಬಿಟ್ಟಿರುತ್ತೆ” ಅಂದೆ. ಅದನ್ನೇ ಸಿನ್ಸಿಯರ್ರಾಗಿ ನಂಬಿದ ಚಿಂಟು ತಕ್ಷಣ ನನ್ನ ಕಾಲ್ಮೇಲೆ ತಲೆಯಿಟ್ಟು ಕಣ್ಮುಚ್ಚಿ ಮಲಗೋ ಪ್ರಯತ್ನ ಶುರುಮಾಡಿದ.
     ಡ್ರೈವರ್ರಿನ್ನೂ ಬಂದಿರಲಿಲ್ಲ. ಬಸ್ಸು ಹೊರಡದೇ ಗಾಳಿ ಬರೋ-ಸೆಕೆ ಕಡಿಮೆಯಾಗೋ ಚಾನ್ಸೂ ಇರ್ಲಿಲ್ಲ. ಆದರೂ ಒಂದಂತೂ ಸ್ಪಷ್ಟವಾಯ್ತು; ಮುಗ್ಧತೆಯನ್ನೇ ಉಂಡುಡೋ ಮುದ್ದು ಮನಸ್ಸಿನ ಮಕ್ಕಳಿಗೆ ಬೇರೆ ಅಲಂಕಾರವಾದ್ರೂ ಯಾಕೆ ಬೇಕು. ಅದೆ ಅವರ ಶಕ್ತಿ, ಅದೇ ಅವರ ಸೌಂದರ್ಯ.

ನಮ್ಮದಲ್ಲದ ನಮ್ಮ ನಗರ

“ಪಾಪ ಬೆಂಗ್ಳೂರು.prostitutes ಥರಾ.. we use it but it’ll never becomes our own 😜 ”

ಮಾತಿನ ಮಧ್ಯ ಬಂದ ಸಾಲಿದು. ಹೇಳಿದ್ದು ನಾನಾ, ರವೀಂದ್ರನಾ ಅನ್ನೋದು ನೆನಪಾಗ್ತಿಲ್ಲ. ಆ ಮಾತು ಇಬ್ಬರದ್ದೂ ಅಲ್ಲದೇ ಬೇರೆಲ್ಲೋ ಓದಿದ್ದಿರಬಹುದು. ಆ ಕ್ಷಣಕ್ಕೆ ಆ ಮಾತು ನಮ್ಮದಾಗಿದ್ದು  ಸುಳ್ಳಲ್ಲ.
  Prostitutes ಅನ್ನೋದು ಖಾರದ ಪದ ಅನಿಸೋದಾದರೆ ಪ್ರೇಯಸಿ/ ಪ್ರಿಯಕರ ಅಂದ್ಕೊಳ್ಳೋಣ ಬೇಕಾದ್ರೆ. “ಹುಟ್ಟಿದ ಊರನು ಬಿಟ್ಟು ಬಂದಾ ಮೇಲೆ ಇನ್ನೇನು ಬಿಡುವುದು ಬಾಕಿಯಿದೆ” ಅಂತ ‘ವೆಂಕಟ್’ ಹಾಡ್ತಿದ್ರೆ ‘ಎಂಥಾ ಸಿನಿಕರ ಸಹವಾಸನಪ್ಪ’ ಅಂತಾ ರೇಡಿಯೋ ಸ್ಟೇಷನ್ ಬದಲಾಯಿಸ್ತೀನಿ ನಾನು. ಕಾರಣ ಇಷ್ಟೇ-ಹುಟ್ಟಿದ ಊರನ್ನು ನಾವ್ಯಾರೂ ಬಿಟ್ಟೇಯಿಲ್ಲ; ಅಸಲಿಗೆ ಬಿಡೋದು ನಮಗೆ ಬರೋದೂ ಇಲ್ಲ. ಹಾಗಾದ ಕಾರಣಕ್ಕೇ ನಮಗೆಲ್ಲಾ ನಗರಜೀವನ ಬರೀ ಮಾಯೆಯಾಗಿ, ಆ ಹೊತ್ತಿನ ಹಸಿವು ತೀರಿಸೋ ಹೋಟೆಲ್ಲಾಗಿ, ಬೇಕೆಂದಾಗ ಬೇಕಾದ ಕಂಫರ್ಟ್ ನೀಡೋ ಪ್ರೇಯಸಿ/ಪ್ರಿಯನಾಗಿ ದಕ್ಕಿದೆಯೇ ಹೊರತೂ ಅಕ್ಕರೆಯ ಅವ್ವನಾಗಲ್ಲ…ಆಸರೆಯ ಅಪ್ಪನಾಗಲ್ಲ.
  ಇರುಳಲ್ಲಿ ಚಂದವಾಗಿ ಕಾಣೋ ಟ್ರಾಫಿಕ್ ಲೈಟ್ಸ್ ಹಗಲಲ್ಲ್ಲಿ ಟ್ರಾಫಿಕ್ ಜ್ಯಾಮ್ ಎನಿಸಿಕೊಂಡು ನಮ್ಮೂರ ಸೀದಾ ಸಾದಾ ಸಂಚಾರವನ್ನು ನೆನಪಿಸ್ತವೆ. ಪಾರ್ಕ್ ವಾಕ್ ಮಾಡುವಾಗ ನಮ್ಮೂರ ಹುಲ್ಲುಹಾಸಿನ, ಕಾಲುಹಾದಿಯ ನಡಿಗೆಯನ್ನ ಮಿಸ್ ಮಾಡ್ಕೋಳ್ತೀವಿ. ಜಗಮಗಿಸೋ ಶಾಪಿಂಗ್ ಮಾಲ್ಗಳು ಕೈ ಬೀಸಿ ಕರೆದಾಕ್ಷಣ ಕಂಡದ್ದು ಕೊಂಡು ಸಂಭ್ರಮಿಸೊ ನಾವುಗಳೇ ಏನೇ ಒಳ್ಳೆಯ ಕೆಲಸ ಕಾರ್ಯ ಕೈಗೂಡಿದರೂ ಮೊದಲು ಭಕ್ತಿಯಿಂದ ನೆನೆಯೋದು ಅದೇ ಹುಟ್ಟೂರಿನ ದೇವರನ್ನಷ್ಟೇ. ಊರ ಜಾತ್ರೆ, ಆ ಸಂಭ್ರಮ, ಸಡಗರಕ್ಕಾಗಿ ಕಾತರದಿಂದ ಕಾಯೋ ನಮಗೆ ಸ್ಥಳೀಯ ದೇವರುಗಳ ಹಬ್ಬ ಬರಿದೇ ಸೌಂಡ್ ಸಿಷ್ಟಂನ ಹಾಡುಗಳ ಅಬ್ಬರ-ಕಿರಿಕಿರಿಯಾಗುಳಿಯುತ್ತದೆ.
  ಪಾಪದ ಬೆಂಗಳೂರು ನಮ್ಮನ್ನು ನಿಜಕ್ಕೂ ಪ್ರೀತಿಸುತ್ತದೆ. ಎಷ್ಟೇ ಕಸ ಚೆಲ್ಲಿ ಕೊಳಕಾಗಿಸಿದರೂ, ಕೆರೆ ನುಂಗಿ ಮಹಲುಗಳನ್ನೆಬ್ಬಿಸಿದರೂ, ಹಸಿರ ಕಸಿದು ಟಾರ ಹೊಯ್ದರೂ ಮುನಿಯದೇ ನಮಗಾಗಿ ಹಿಗ್ಗಿ ಹಿರಿದಾಗುತ್ತಾ, ನಿರಂತರವಾಗಿ ಬದಲಾಗುತ್ತಾ, ಹೊಸ ಹೊಸ ಬಣ್ಣಗಳೊಂದಿಗೆ ಒನಪು ಒಯ್ಯಾರ ಹೆಚ್ಚಿಸಿಕೊಳ್ಳುತ್ತಾ ನಮ್ಮನ್ನು ಆಕರ್ಷಿಸಲು ಪ್ರಯತ್ನಿಸುತ್ತದೆ. ಕ್ಷಣಕಾಲ ಅದರಲ್ಲಿ ಯಶಸ್ವಿಯೂ ಆಗಿ ಬೀಗುತ್ತದೆ. ಹಾಗಂತ ಸಂಭ್ರಮಪಡುತ್ತಾ ನಮ್ಮನ್ನು ಆವರಿಸತೊಡಗುತ್ತದೆ. ಅದೇ ಮುಳುವಾಗಿ ನಮಲ್ಲಿ ಆಗಷ್ಟೇ ಚಿಗುರಿದ್ದ ಪ್ರೀತಿ ಮತ್ತೆ ರಿಪೇರಿಯಾಗದ ಮೊಬೈಲಿನಂತೆ ಕೆಟ್ಟು ಕೂರುತ್ತದೆ; ಮನಸ್ಸು ಮತ್ತದೇ ತವರೂರ ನೆನಪಲ್ಲಿ ಮರುಗುತ್ತದೆ.
   ಬದುಕು ಅರಸಿ ಬೆಂಗಳೂರು ತಲುಪಿದವರೇ ಮತ್ತೈದು ವರ್ಷದಲ್ಲಿ ನಗರ ಜೀವನ ನಮ್ಮನ್ನ ಹಿಂಡಿಹಾಕುತ್ತಿದೆ ಎಂದು ನಿಟ್ಟುಸಿರಾಗುತ್ತೇವೆ. ಜನರ ಮಧ್ಯೆ ಕಳೆದುಹೋಗಿ ಖುಷಿಪಟ್ಟ ಅದೇ ಮನವೇ ‘bloody crowd’ ಎಂದು ಬೇಸರಿಸುತ್ತದೆ. ಹೀಗೆ ದೊಡ್ಡ ಊರಿನ ಬಗ್ಗೆ ಬರೆಯುತ್ತಿದ್ದೀನಿ, ನಿಮಗೆ ಗೊತ್ತಿರೋದೇನಾದ್ರೂ ಹೇಳ್ರೋ ಅಂತ ಗೆಳೆಯರ ಬಳಗದಲ್ಲಿ ಕೇಳಿದ್ದಕ್ಕೆ ಪ್ರೀತಿಯ ರೇಣಕ್ಕ ಮಾಸಿಕ  ಒಂದರ ಲೇಖನ ತೋರಿಸಿದರು. ಲೇಖನದ heading “ಬೆಂಗಳೂರು ಬಿಡಲು ೨೫ ಕಾರಣಗಳು”! ವಿಪರ್ಯಾಸ ಏನೆಂದರೆ, ಆ ಕಾರಣಗಳ ಸೃಷ್ಟಿಕರ್ತರು ಯಾರು ಎಂದು ಹುಡುಕಹೊರಟರೆ ಖಂಡಿತವಾಗಿ ಅದರಲ್ಲಿ ನಾವೆಲ್ಲರೂ culpritಗಳೇ.
ಒಂದಷ್ಟು ಬುದ್ಧಿವಂತರು ‘ಇಲ್ಲಪ್ಪ, ಇದೆಲ್ಲ ಸರಿಹೋಗೋಂಥದ್ದಲ್ಲ’ ಎಂದು ಮತ್ತೆ ಹಳೇ ಊರಿಗೇ ತೆರಳಿ ನೆಮ್ಮದಿ ಹೊಂದುತ್ತಾರೆ. ಮತ್ತೊಂದಷ್ಟು ಜನ ಧೈರ್ಯವಂತರು ‘ಈಸಬೇಕು, ಇದ್ದು ಜೈಸಬೇಕು’ ಎನ್ನುತ್ತಾ ಹೊಂದಿಕೊಂಡುಬಿಡುತ್ತಾರೆ. ಅವೆರಡೂ ಮಾಡಲಾಗದೇ ಉಳಿದವರ ಪಾಡು ಭಗವಂತನೇ ಬಲ್ಲ. ಇಲ್ಲಿರಲಾರದೇ ಅಲ್ಲಿಗೆ ಹಿಂದಿರುಗಲಾಗದೇ ಒದ್ದಾಡುತ್ತಾ ಸಾಗುತ್ತಾರೆ. ಸೌಕರ್ಯ,ಸವಲತ್ತು,ಅವಕಾಶಗಳ ಆಸೆಯನ್ನೂ ಬಿಡರು; ಹುಟ್ಟೂರಿನ ಮೇಲಿರುವ ಮಮತೆಯನ್ನೂ ಬಿಡರು. ಈ ಇಬ್ಬಂದಿತನದಲ್ಲೇ ವೃತ್ತಿಜೀವನವನ್ನು ಶಹರದಲ್ಲಿ ಕಳೆದು ಕಡೆಗಿನ್ನೇನು ಇಷ್ಟು ದಿನ ಸಾಕಿ ಸಲಹಿದ ಪ್ರೇಯಸಿಯನ್ನೇ ಹೆಂಡತಿಯೆಂದು ಕರೆದು ಸಂಸಾರ ಮುಂದುವರೆಸೋಣ ಎಂದುಕೊಳ್ಳುವಷ್ಟರಲ್ಲಿ ಎಲ್ಲ ಊರುಗಳ ಬಾಬತ್ತೂ ಮುಗಿದು ಪರಲೋಕದ ಹಾದಿ ಕಾಣುತ್ತಿರುತ್ತದೆ. ಬಹುಶಃ ಅಂತವರೆಡೆಗೆ ಬೆಂಗಳೂರು ಪ್ರೀತಿ,ಕರುಣೆ ತುಂಬಿದ ಕಣ್ಗಳಿಂದ ನೋಡಿ ನಕ್ಕೀತು.
  ಒಳ್ಳೆಯ (atleast in our assumptions) ಓದಿಗೆ, ದೊಡ್ಡ ಸಂಬಳದ ನೌಕರಿಗೆ, ಐಶಾರಾಮದ ಬದುಕಿಗೆ ಬೆಂಗಳೂರು ಬೇಕು ನಮಗೆಲ್ಲಾ, ಅದೇ ‘ನಿಮ್ಮ ಊರು ಯಾವುದು’ ಎಂಬ ಪ್ರಶ್ನೆ ಎದುರಾದಾಗ ಮಾತ್ರ ನಮ್ಮ ಕೈಗಳು ಹುಡುಕುವುದು ಆ ಹಳೇ ಬಿಟ್ಟುಬಂದೂರನ್ನೇ. ಬೆಂಗಳೂರು ಮಾತ್ರವಲ್ಲ, ಹೆಸರನ್ನಷ್ಟೇ ಬದಲಾಯಿಸಿದರೆ ಬಹುಶಃ ಎಲ್ಲಾ ಶಹರದ ಬಗ್ಗೆಯೂ ಊರು ಬಿಟ್ಟು ಅದನ್ನಪ್ಪಿರುವವರ ಅಭಿಪ್ರಾಯ ಇದೇ ಇದ್ದೀತು.
    ಆದರೆ ನಮ್ಮ ಈ ಅತಿ ಭಾವುಕತೆಯನ್ನು ಬೆಂಗಳೂರು ಅಥವಾ ಇನ್ನಾವುದೇ ನಗರ ಇನ್ನೂ ಹೆಚ್ಚುದಿನ ಸಹಿಸಲಾರವು. ಅವುಗಳು ವಯಸ್ಸಾಗಿ ಸಾಮರ್ಥ್ಯ ಕುಗ್ಗಿ ಕುಸಿಯುವ ಮೊದಲು ನಾವೂ ಅವನ್ನಷ್ಟು ಪ್ರೀತಿಸಬೇಕಿದೆ. ಸಾಧ್ಯವಾದಷ್ಟು ಸ್ವಚ್ಚವಾಗಿಟ್ಟುಕೊಳ್ಳಬೇಕಿದೆ. ಪ್ರಾದೇಶಿಕ ವಿಷೇಶಗಳನ್ನು ಕಾಪಿಡಬೇಕಿದೆ. ನಮಗಾಗಿ ಬೆಳೆದ ನಗರಗಳನ್ನು ನಾವೇ ಬೆಳಗಿಸಬೇಕಿದೆ. ಮತ್ತು ಅವುಗಳೊಂದಿಗೆ ನಾವೂ ಬೆಳೆಯಬೇಕಿದೆ…… ಓಹ್ ಕ್ಷಮಿಸಿ, ಮುಗ್ಧ ಮಗುವಿನಂತೆ ಗಾಢ ನಿದ್ರೆಯಲ್ಲಿದೆ ನಮ್ಮ  ಮಹಾನಗರ… ಸದ್ದಿಲ್ಲದೇ ನಾನೂ ಒಂದಷ್ಟು ನಿದ್ರೆ ತೆಗೆಯುವೆ. ಬೆಳಗಾಗೋ ಮೊದಲೇ vehicles ಗಲಾಟೆ ಶುರುವಾದರೆ ನಿದ್ರೆಯಿಲ್ಲದೇ ಮತ್ತೆ ಯಥಾಪ್ರಕಾರ ಬೆಂಗಳೂರನ್ನೇ ಗೊಣಗಬೇಕಾದೀತು😄
       -ಕಾಲಕ್ಷೇಪ
     ೨.೦9 am, 4th/ Tue/ 16

ಬಾಯ್ಫ್ರೆಂಡ್ ಜೊತೆಗೆ ಒಂದಿಡೀ ಮಧ್ಯಾಹ್ನ

ಅದೆಷ್ಟ್ ಸಲಿ ಹೇಳಿದೆ ಕಣೋ ಅಪ್ಪಂಗೆ,ಯಾವ್ದಾದ್ರೂ ದಿಕ್ಕುದಶಿಯಿಲ್ದಿರ ಬಡಪಾಯಿನೇ ಹುಡುಕಿ ಮನಿಅಳಿಯನ್ ಮಾಡ್ಕಳಿ, ನಿಮ್ಮೊಬ್ರುನೇ ಇಲ್ಬಿಟ್ ನಾ ಸಿಟಿಗಿಟಿಗೆಲ್ಲಾ ಹೋಗುವ್ಳಲ್ಲಾಂತ. ಅಪ್ಪ ಕೇಳ್ಬಕಲ. ಅವ್ರಿಗೆ ಅವ್ರದ್ದೇ ವಿಚಿತ್ರ ಥಿಯರಿ ನೋಡು… “ನಾನಂತೂ ಅಡ್ಕೆ ಸುಲ್ತ, ಕರಾವು ನಂಬ್ಕ್ಯಂಡು ಇಲ್ಲೇ ತ್ವಾಟುದ್ಬುಡ್ದಲ್ಲೇ ಗೂಟ ಹ್ವಡ್ಕುಂಡ್ ಕೂತ್ಬಿಟ್ಟೆ ಹ್ಯಣೇ,ನೀನೂ ಇದ್ನೇ ನಂಬ್ಕ್ಯಂಡ್ರೆ ಬಾಳ್ಮೆ ಸಾಗುದ್ಲ. ನಿಮ್ಮಮ್ಮ ಕಂತೆ ವಗ್ದು ಹ್ವಾದಾಗ್ಲಿಂದ ಒಬ್ನೇ ಪಾಡ್ಪಟ್ಟು ನಿನ್ನ ಗಿಣಿ ಹಂಗೆ ಸಾಕಿದ್ದು ಈಗ ನನ್ನಂಗೇ ಅಡ್ಕೆ ಚೊಗ್ರಲ್ಲಿ ಮೀಯೋನಿಗೆ ಕ್ವಡುಕ್ಕ?ನಿನ್ವೋದಿಗೆ, ನಿನ್ಬಣ್ಣುಕ್ಕೆ ಬ್ಯಂಗ್ಳೂರ್ ಕಡೆ ಟಾಪ್ಗೇರ್ ಗಂಡ್ಯಾವ್ದಾರಾ ಸಿಕ್ಕೀತು. ಅಡ್ಕೆ ಕೊಯ್ಲು, ಕೊಟ್ಗೆ ಕೆಲ್ಸ, ಬರೋರ್ಹೋಗೋರ್ ಚಾಕ್ರಿ ಯಾವ್ದೂ ಇಲ್ದೆ ಸುಖ್ವಾಗಿರ್ತೀ”ಅಂದ್ಬಿಟ್ಟಿದ್ರು.
    ಅಪ್ಪನ ಸುಖಜೀವ್ನದ್ ಕಲ್ಪನೆಗೂ ನಂದಕ್ಕೂ ಭಾಳಾ ಅಂತ್ರ ಉಂಟಲ್ಲಾ… ಅದೇ ಕಷ್ಟ ಆಗಿದ್ನೋಡು.ಹೇಳಿದ ಒಂದೇ ವಾರ್ದಲ್ಲಿ ಸಾಫ್ಟ್ ವೇರ್… ಅಲ್ಲಲ್ಲ, ಟಾಪ್ಗೇರ್ ಅಳಿಯನ್ನ ಹುಡ್ಕಿ ತಂದೇ ಬಿಟ್ರು. “ಲಡ್ಡೂ” ಭಾಳಾ ಒಳ್ಳೇವ್ನೇ. ಪರದೇಶ ವಾಸ, ದೊಡ್ಡ ಸಂಬ್ಳ, ಈ ಅಪಾರ್ಟ್ಮೆಂಟು, ಎಲ್ಲಾ ಚೆನ್ನಾಗೇಯಿದೆ. ನಾನು ಸುಖವಾಗೇ ಇದ್ದೀನಿ. ಆದ್ರೂ ಅದೇನೋ ಮಿಸ್ಸಿಂಗ್!  ಉತ್ಸಾಹನೇ ಇಲ್ದಂಗೆ…ಬೋರಿಂಗ್ ಬೋರಿಂಗು.
    ಲಡ್ಡೂಗೆ ಹಾಗಂತ ಹೇಳಿದ್ರೆ ಇಷ್ಟಗ್ಲ ನಕ್ಕುಬಿಟ್ಟ ಕಣೋ. ಹೋಪ್ಲೆಸ್ ಫೆಲೋ ಅವ. ಏನಂತಾನೆ ಗೊತ್ತಾ, ಮನೇಲಿ ಕೂತೂ ಕೂತೂ ನಾನು ಹೀಗೆ “ಹುಚ್ಹುಚ್ಚಾಗಿ”! ಫೀಲಾಗ್ದಿದೀನಂತೆ. “ಬ್ಯಾಂಗ್ಲೂರ್ಗೆ ಹೋದ್ಮೇಲೆ ಕೆಲ್ಸಕ್ಕೆ ಸೇರ್ಬಿಡು ಬೇಬ್. ಎಮ್ಸೀಯೇಗೆ ಸಕತ್ ಸ್ಕೋಪಿದೆ you know. ಆಗ ನನ್ಹಂಗೇ ನಿಂಗೂ ಉಸ್ರಾಡೋಕೂ ಟೈಮಿರಲ್ಲ. ಲೋನ್ಲೀ ಫೀಲಾಗೋದಿಲ್ಲ.ಇಬ್ರ ಸ್ಯಾಲ್ರೀ ಇದ್ರೆ ಫ್ಯೂಚರ್ ಸೂಪರ್” ಅಂತಾನೆ.. ದಡ್ಡ ಮುಂಡೇಗಂಡ ಅಂತ ಮನ್ಸಲ್ಲೇ  ಬಯ್ಕೊಂಡು ಸುಮ್ನಾಗ್ತೀನಿ. ಇಲ್ಲಿ ಪ್ರೆಸೆಂಟೇ ನೀರಸ,ನಿರಾಸಕ್ತವಾಗಿ ಸವ್ದೋಗ್ತಾಯಿದೆ. ಅವ್ನಿಗೆ ಫ್ಯೂಚರ್ ಪ್ಲಾನಿನ ಚಿಂತೆ. 
   ನಿಜ ಹೇಳ್ಬೇಕಂದ್ರೆ, ಲಡ್ಡೂದೇನೂ ತಪ್ಪಿಲ್ಲ. ನಂಗೇ ಏನೋ ಆಗಿದೆ. ಓದು ಮುಗ್ಸಿ ಒಂದ್ವರ್ಷ ಮನೇಲಿದ್ನಲ್ಲಾ  ಆಗ ಮನೆಲಿದ್ದಿದ್ದು ನಾನು-ಅಪ್ಪ; ಈಗ ನಾನೂ-ಲಡ್ಡು. ಆಗ ಇಲ್ಲದ ಬೇಜಾರು, ಒಂಟಿತನ ಈಗ್ಯಾಕೆ ಅನ್ನೋದು ನಂಗೂ ಅರ್ಥಾಗಲ್ಲ ಮಾರಾಯ. ಅದೆಷ್ಟೆಲ್ಲಾ ಮಾತುಗಳಿದ್ವು ನನ್ನೊಳಗೆ. ಈಗ್ಯಾಕೆ ಹೀಗೊ ಕಾಣೆ.. ನಮ್ಮನೆ, ತೋಟ, ಕೊಟ್ಗೆಲಿರೋ ಪುಣ್ಯ, ಮೇಧ, ಮೇಧನ ಪುಟ್ಕರು ಚುಕ್ಕೀ..ಎಲ್ರುನ್ನೂ ತುಂಬಾ ಮಿಸ್ಮಾಡ್ತಿದ್ದೀನಿ ಅನ್ಸುತ್ತೆ. ಅದ್ಕೇ ನೋಡು,”ಪೂರಾ ಗಂಭೀರ ಆಗ್ಬಿಟ್ಟಿದ್ದೀ ಚಿನ್ನಿ” ಅಂತ ಲಡ್ಡೂ ಕೂಡಾ ಬೈತಾನೆ.
     ಇವತ್ತೂ ಹಾಗೇ ಆಯ್ತು. ಬೆಳಗ್ಗೆ ಹನ್ನೊಂದಕ್ಕೆಲ್ಲಾ ಕೆಲ್ಸ ಮುಗ್ಸಿ ಕೂತಿದ್ದೆ. ಲಡ್ಡು ಬಂದು ತೃಪ್ತಿಯಾಗಿ ಉಂಡು ಮತ್ತೆ ಆಫೀಸ್ ಸೇರಿದ. ಗಡಿಯಾರದ ಮುಳ್ಳು ಶತಸೋಮಾರಿ ಕಣೋ, ಮುಂದಕ್ಕೇ  ಹೋಗ್ಲಿಲ್ಲ. ನಂಗೂ ತಾಳ್ಮೆ ಹಾರಿ ಹೋಯ್ತು. ಈ ಹಾಳಾದ ಮಧ್ಯಾಹ್ನ ಅದೆಷ್ಟ್ ಹೊತ್ತು ಹಿಂಗೇ ಬೋರಿಂಗಾಗಿ ಕದಲದೇ ಬಿದ್ದಿರುತ್ತೋ ನೋಡೇಬಿಡೋಣ  ಅಂತ ಸೋಫಾಮೇಲೆ ಸತ್ಹಂಗೆ ಬಿದ್ಗೊಂಡಿದ್ದೆ.ಮುಂದಿನ ಬಾಗ್ಲು ಹಾರುಹೊಡ್ದಿದ್ದು ಗೊತ್ತಿತ್ತು ನಂಗೆ; ಆದ್ರೂ “ಏನಾದೀತು ಮಹಾ, ಕಳ್ಳ ಬಂದ್ರೆ ಕದಿಯೋಕೇನಿದೆ ಇಲ್ಲಿ, ಅಟ್ಲೀಷ್ಟ್ ಕಳ್ಳ ಬಂದಿದ್ದ ಅನ್ನೋ ವಿಷ್ಯನಾದ್ರೂ ಬಿಟ್ಹೋದಾನು ಸಂಜೆ ಮಾತಿಗೆ. ಬರ್ಲಿ” ಅನ್ನೋ ಉಡಾಫೆ.
    ಮೆಲ್ಲಗೆ ಬಾಗ್ಲು ತಳ್ದಾಗ ಗಾಳಿ ಬೀಸ್ತೇನೋ ಅಂದ್ಕೊಂಡು ತಿರುಗ್ನೋಡ್ತೀನಿ; ನೀನು! ಹೇಳ್ದೇಕೇಳ್ದೇ ಸೀದಾ ಮನೆಯೊಳಗೆ ಬಂದ್ಬಿಟ್ಟಿದೀಯ!! ಆಶ್ಚರ್ಯ, ಸಿಟ್ಟು ಒಟ್ಟೊಟ್ಗೇ ಆಯ್ತು ಕಣೋ.. ಬೈಯ್ದು ಓಡ್ಸಿಬಿಡೋಣಾಂತ ಅಂದ್ಕೊಂಡವ್ಳು ಅದ್ಯಾಕೋ ಸುಮ್ನೆ ಒಂದ್ನಿಮ್ಷ ನಿನ್ಕಣ್ಗಳ್ನ ಹಾಗೇ ನೋಡ್ದೆ. ಅಬ್ಬಾ!!!!!! ಲವ್ ಎಟ್ ಫಷ್ಟ್ ಸೈಟು ಅಂದ್ರೇನೋ ಇವತ್ತು ಗೊತ್ತಾಯ್ತು ಮಾರಾಯಾ. ನಿಜಾ ಹೇಳು, ನಿಂಗೂ ನನ್ಮೇಲೆ ಹಂಗೇ ಲವ್ವಾಗಿದೆ ಅಲ್ವಾ.ಅದ್ಕೇ ತಾನೇ ಇಷ್ಟ್ಹೊತ್ತೂ ನಾ ಹೇಳಿದ್ನೆಲ್ಲ ಸುಮ್ನೇ ಕೂತ್ಕೊಂಡು ಕೇಳ್ಸ್ಕೊಳ್ತಾಯಿರೋದು.
     ಅದ್ಸರೀ ಇಷ್ಟ್ಹೊತ್ತೂ ನಾ ಮಾತಾಡಿದ್ದು ನಿಂಗರ್ಥ ಆಯ್ತಾ? ಹೇಗರ್ಥ ಆಗುತ್ತೆ? ಈ ಪರದೇಶದಲ್ಲಿ ವಾಸ ಮಾಡೋ ಕೆಂಚ ನೀನು. ನಾನೋ ಕನ್ನಡ ಬಿಟ್ಟು ಬೇರೆ ಮಾತಾಡ್ಲಿಲ್ಲ ಈ ಇಡೀ ಮಧ್ಯಾಹ್ನ.ಆದ್ರೂ ಸುಮ್ನೇ ಕೇಳ್ಸ್ಕೊಳ್ತಾಯಿದೀಯಲಾ… ಥ್ಯಾಂಕ್ಸು ಕಣೋ. ಹೀಗೆ ಮಾತಾಡೋಕೊಂದು ಜೊತೆ ಕಿವಿ ಬೇಕಿತ್ತು ನೋಡು ನಂಗೆ. ಅದ್ಕೇ ಇಷ್ಟ್ದಿನ ಬೇಜಾರು, ಬೋರು ಅಂತ ಲಡ್ಡೂ ತಲೆ ತಿಂದಿದ್ದು. ಅವ್ನಾದ್ರೂ ಎಷ್ಟೂಂತ ಮಾತಿಗ್ಸಿಗ್ತಾನೆ; ಮಾತ್ಹೊಡಿತಾ ಕೂತ್ರೆ ಕೆಲ್ಸದ್ಗತಿಯೇನು ಅಲ್ವ. ಇರು, ಮಾತಾಡಿ ಮಾತಾಡಿ ನಂಗೆ ಬಾಯರಿಕೆ ಆಗ್ತಿದೆ. ಒಂದು ದೊಡ್ಡ ಬಟ್ಲು ಹಾಲು ತರ್ತೀನಿ ತಣ್ಣುಗೆ.ನಾನರ್ದ- ನೀನರ್ಧ ಕುಡ್ಯೋಣ-ಓಕೇ?
    ಕೆಂಚೂ ಮೈ ಲವ್, ಪೂರಾ ಅಪರಿಚಿತ್ರು ನಾವು. ಆದ್ರೂ ಹಿಂಗೆ ಮನೆಗೆ ನುಗ್ಗಿ ಸೋಫಾಮೇಲೆ ಮೈಗೆ ಮೈ ಒತ್ತಿ ಕೂತಿದೀಯಲ್ಲಾ ಅದೆಷ್ಟು ಧೈರ್ಯ ಕಣೋ ನಿಂಗೆ! ನಿನ್ಮಾತು ಹಾಗಿರ್ಲೀ, ಗಂಡನ್ನ ಆಫೀಸ್ಗೆ ಕಳ್ಸಿ ಯಾರೋ ಅಪರಿಚಿತ್ರ ಹತ್ರ ಲವ್ವು-ಮಣ್ಣು- ಮಶಿ ಅಂತಿದ್ದೀನಲ್ಲಾ ನಂಗೆಂಥಾ ಹುಚ್ಚು ಧೈರ್ಯ ಹೇಳು…
     ಈಗ ಲಡ್ಡೂ ಬಂದ್ರೆ ಏನನ್ಬೋದು ಕಣೋ? ಸಿಟ್ಟಾಗ್ತಾನಾ? ಖಂಡಿತಾ ಆಗ್ತಾನೆ ಅನ್ಸುತ್ತೆ. ಆದ್ರೂ… ನಿನ್ಮುಖ ನೊಡಿದ್ರೆ ಎಂಥಾ ಕಲ್ಮನಸ್ನೋರಿಗೂ ಪ್ರೀತಿ ಬರ್ಬೇಕು ಹಾಗಿದೀಯ. ಅತ್ಲಾಗೆ ಹಸ್ರೂ ಅಲ್ಲ,ಇತ್ಲಾಗೆ ಬೂದೂ ಅಲ್ಲ ಅನ್ನೋ ಬಣ್ಣದ ಕಣ್ಗಳಂತೂ ಮೋಡಿ ಮಾಡ್ಬಿಟ್ಟಿವೆ ನನ್ನ. ಆ ಕೆಂಚು ಕೂದ್ಲು ಅದೆಷ್ಟು ಒಪ್ಪುತ್ತೆ ಗೊತ್ತಾ ನಿಂಗೆ.. ಆ ಮೀಸೆ ಅಂತೂ… ಸಕತ್ ಕ್ಯೂಟು. ನಿನ್ನ ನಡಿಗೇನೇ ನಡಿಗೆ ಕಣೋ; ಸಿನಿಮಾ ಸ್ಟಾರ್ ಅಂಬ್ರೀಷವ್ರ ಥರ.. ಆಹ್!! ಸೂಪರ್ ಸೂಪರ್ ಸೂsssssಪರ್.
    ಹೀಗೆ ನಾನಿನ್ನ ಹೊಗ್ಳೋದ್ನ ಕೇಳಿದ್ರೆ ಲಡ್ಡೂಗೇನನ್ಸ್ಬಹುದು ಹೇಳೋ. ನಿನ್ನ ಮನೆಯಿಂದ ಓಡುಸ್ತಾನಾ (ಛೆ, ಅಳು ಬರ್ತಿದೆ ಕಣೋ ಯೋಚ್ನೆ ಮಾಡಿದ್ರೇನೇ) ಹಾಗೇನಾದ್ರೂ ಓಡ್ಸಿದ್ರೆ ಸುಮ್ನೇ ಹೋಗ್ಬಿಡು ಕಣೋ, ಜಾಸ್ತಿ ಗಲಾಟೆ ಮಾಡ್ಬೇಡ ಆಯ್ತಾ.. ಮತ್ಯಾವಾಗ್ಲಾದ್ರೂ ಲಡ್ಡೂ ಇಲ್ದಾಗ ನನ್ನೋಡೋಕೆ ಬಾ..ಬರ್ತೀಯಲಾ ಮತ್ತೆ? ನಮ್ಮೂರ್ಕಥೆಗಳೆಲ್ಲಾ ನಿಂಗೆ ಹೇಳ್ಬೇಕು ಗೊತ್ತಾ. ಒಂದೂ ಮಾತಾಡ್ದೇ ಹೀಗೆ ನಾ ಬಡ್ಬಡಾಯ್ಸೋದೆಲ್ಲಾ ಕೇಳ್ಸ್ಕೊಳೋರು ಇನ್ಯಾರು ಸಿಗ್ತಾರೆ ಹೇಳು ನಂಗೆ.
     ಅರೆ! ಲಡ್ಡೂ ಬಗ್ಗೆ ಮಾತಾಡ್ತಿದ್ರೆ ಅವ್ನೇ ಬಂದ ನೋಡೋ! ನೂರು ವರ್ಷ ಆಯಸ್ಸು. ಆಹಾ ನನ್ತಾಳಿ ಭಾಗ್ಯನೇ..ಈಗಿನ್ನೂ ಆಫಿಸ್ಗೋಗಿದ್ದ, ಏನಾಯ್ತೋ ಏನೋ ನೋಡ್ತೀನಿರು..
……..
ನಾನು : ಓಯ್ ಲಡ್ಡೂ, ಇದ್ಯಾಕೋ ವಾಪಾಸ್ ಬಂದೆ? ಹುಷಾರಿಲ್ವಾ?ತಲೆ ನೋಯ್ತುಂಟಾ?
ಲಡ್ಡೂ: ಪ್ರೆಸೆಂಟೇಷನ್ ಕೊಡ್ವೇಕೂಂತ ಹೇಳಿದ್ನಲಾ ಚಿನ್ನೀ, ಆಕ್ಷಿ.. ಪೆನ್ ಡ್ರೈವ್, ಆಕ್ಷೀ… ಮನೇಲೇ, ಆಕ್ಷೀ… ಬಿಟ್ಟೋಗಿದ್ದೆ, ಆಕ್ಷೀ…. ವ್ಹಾಟ್ ದ ಹೆಲ್, ಆಕ್ಷೀ…. ಇದ್ಯಾಕೆ,ಆಕ್ಷೀ… ಇಷ್ಟು ಸೀನ್ ಬರ್ತಿದೆ ನಂಗೆ, ಆಕ್ಷೀ…. ಅಯ್ಯೋ… ಆಕ್ಷೀ..
ನಾನು : ತಗೋ ಪೆನ್ ಡ್ರೈವ್, ನಾನಾಗ್ಲೇ ನೋಡಿ ಎತ್ತಿಟ್ಟಿದ್ದೆ. ಇಗೋ, ಇವತ್ತೊಬ್ಬ “ಬಾಯ್ಫ್ರೆಂಡು” ಸಿಕ್ಕಿದಾನೆ ನಂಗೆ ನೋಡು ಬಾ.
ಲಡ್ಡೂ : ಆಕ್ಷೀssssss ಅಯ್ಯೋ, ಅಮ್ಮಾ… ಲೇ,ಚಿನ್ನೀ..ಆಕ್ಷೀsss ನಿಂಗೆ ಬಾಯ್ಫೆಂಡು ಮಾಡ್ಕೊಳಕೆ,ಆಕ್ಷೀ….ಬೇರ್ಯಾರೂ,ಆಕ್ಷೀ… ಸಿಗ್ಲಿಲ್ವೇನೇ.. ಥೂ..ಖರ್ಮ..ಆಕ್ಷೀss..ನಂಗೆ ಬೆಕ್ಕಂದ್ರೆ ಸಕತ್ ಎಲರ್ಜೀ ಬೇಬ್.. ಇವತ್ತು ಆಕ್ಷೀ..ಪ್ರೆಸೆಂಟೇಷನ್ ಕಥೆ, ಆಕ್ಷೀsss… ಅಷ್ಟೇ… ತಲೇನೇ ಕಳ್ಚಿ ಬೀಳ್ತಾಯಿದೆ,ಆಕ್ಷೀ.. ಓಡ್ಸು ಡಿಯರ್ ಅದ್ನ ಮನೆಯಿಂದ..ಆಕ್ಷೀ..  ಅಳೋಕೂ ನಗೋಕೂ ಹಿಂದೆ-ಮುಂದೆ ನೋಡ್ಬೇಕು..ಆಕ್ಷೀ…ಈ ದೇಷ್ದಲ್ಲಿ… ಇನ್ನು ನೀನು, ಆಕ್ಷೀss ಯಾರ್ದೋ ಮನೆ ಬೆಕ್ಕುನ ಕೂಡ್ಹಾಕೊಂಡಿರೊದು ಅವ್ರಿಗೆ ಗೊತ್ತಾದ್ರೆ,ಆಕ್ಷೀsssss.. ಸ್ಯೂ ಮಾಡ್ತಾರೆ ಸ್ಯೂ,ಆಕ್ಷೀss ಗೊತ್ತುಂಟಾ… ಸಧ್ಯ ತಾನಾಗೇ ಹೊರಗ್ಹೋಗ್ತಾಯಿದೆ. ಆಕ್ಷೀss ನಾನೂ ಹೊಗ್ತೀನ್ ಚಿನ್ನಿ ಆಫೀಸ್ಗೆ..ಆಕ್ಷೀsss.. ಥೂ..ತಲೇನೇ ಉದ್ರೋಗ್ತಾಯಿದೆ ಸೀನೀ ಸಿನೀ.. ಆಕ್ಷೀsss.ಡಷ್ಟಿಂಗ್ ಮಾಡು ಪ್ಲೀಸ್… ಬಾಯ್..ಆಕ್ಷೀsss
ನಾನು :ಲಡ್ಡೂ…… ಹೋಗೇಬಿಟ್ನಲೋ… ಛೇ.. ಚಂದ ಇದ್ದ ಕಣೋ… ಸರಿ ನೀ ಹೋಗಪ್ಪ ಆಫೀಸ್ಗೆ, ಹೋಗ್ತಾ ಹಂಗೇ ವಾಲ್ಮಾರ್ಟ್ಗೋಗಿ ಮೆಡ್ಸಿನ್ ತಗೋಳೋ ಪ್ಲೀಸ್.. ಸಾರಿ ಕಣೋ.. ಹುಶಾರೂ…
ಬಾಯ್ ಲಡ್ಡೂ…. ಗುಡ್ಬಾಯ್ ಕೆಂಚೂ… ಲವ್ಯೂ ಕಣ್ರೋ…

     

ಏನೆಂದು ಹೆಸರಿಡಲಿ; ಈ ಚೆಂದ ಅನುಭವಕೆ…

ಅದು ನನ್ನ ಹೈಸ್ಕೂಲಿನ ಕಡೆಯ ದಿನಗಳು! ಹುಳುವೊಂದು ಚಿಟ್ಟೆಯಾಗೋ ಕಾಲ. ಸದ್ದಿಲ್ಲದೆ ಸಣ್ಣದಾಗಿ ಹುಟ್ಟುತ್ತಿರುವ ಬದಲಾವಣೆಯ ಅಲೆ ನನ್ನೊಳಗೆ.ಪ್ರತಿದಿನವೂ ಹೊಸ ದಿನದಂತೆ ಸಂತೋಷ, ಭಯ, ಉದ್ವೇಗ…. ಊಹೂ..ಇದೆಲ್ಲವನ್ನೂ ಮೀರಿದ ಅದೆಂಥದೋ ಥ್ರಿಲ್  ;ಒಟ್ಟಾರೆ ಎಲ್ಲಾ ಫೀಲಿಂಗ್’ಗಳ ಸಂತೆ ಮನದೊಳಗೆ.
    ಪ್ರಮಾಣ ಮಾಡಿ ಹೇಳ್ತೀನಿ ಈ ಎಲ್ಲಾ ಫಿಲಿಂಗ್ ಸಂತೆಗೂ ಹತ್ತಿರದಲ್ಲೇ ಕುಳಿತು ಹೆದರಿಸುತ್ತಿದ್ದ ಬೋರ್ಡ್ ಎಗ್ಜಾಂ ಎಂಬ ಗುಮ್ಮಕ್ಕು ಚೂರೂ ಸಂಬಂಧವಿಲ್ಲ.ಯುವ ಪ್ರಪಂಚಕ್ಕಿನ್ನೂ ಕಾಲಿಡದ, ಆದರೆ ದೊಡ್ಡಹುಡುಗಿ ಎನಿಸಿಕೊಂಡ ನನಗಾಗ ಸಿಕ್ಕಷ್ಟೇ ಸ್ವಾತಂತ್ರ್ಯ ಉಪಯೋಗಿಸಿಕೊಂಡು ಗೆಳತಿಯರೊಂದಿಗೆ ಮಾತು,ಹಾಡು, ಸಿನಿಮಾ, ಪಾನಿಪುರಿ ಎಂದು ಮೋಜು ಮಾಡೋದಷ್ಟೇ ಗುರಿಯಾಗಿತ್ತೇ ಹೊರತು ವ್ಯಾಸಂಗ, ಮುಂದಿನ ಜೀವನ ಇವೆಲ್ಲ ಯಃಕಶ್ಚಿತ್ ವಿಷಯಗಳು ಬೇಕಾಗೇ ಇರಲಿಲ್ಲ.
     ಹೀಗೆ ಕುಣಿದಾಡ್ತಿದ್ದ  ದಿನಗಳಲ್ಲೇ ಇದ್ದಕ್ಕಿದ್ದಂತೆ ಒಮ್ಮೆ ಎಷ್ಟೇ ಪ್ರಯತ್ನಪಟ್ಟರೂ, ತಲೆಕೊಡವಿದರೂ ನಿವಾರಿಸಿಕೊಳ್ಳು ಆಗದಷ್ಟು ಬಲವಾಗಿ “ಯಾರೋ ನೋಡ್ತಿದ್ದಾರೆ… ನನ್ನನ್ಯಾರೋ ಗಮನಿಸ್ತಿದ್ದಾರೆ” ಎಂಬ ಭಾವ ಕಾಡಲು ಶುರುವಾಯ್ತು.
    ಬಹುಶಃ ಹುಡುಗಿಯೊಬ್ಬಳ ಹದಿವಯಸ್ಸು ಈ ಸಾಲಿನಿಂದ ಮುಕ್ತವಾಗಿರೋದು ಸಾಧ್ಯವೇ ಇಲ್ಲವೇನೋ. ನೋಡುತ್ತಿರೋದು ಅದ್ಯಾರೇ ಆಗಲಿ, ಅದೆಷ್ಟೇ ದೂರದಿಂದಲೇ ಆಗಲಿ ಸಿಕ್ಸ್ತ್ ಸೆನ್ಸೋ, ಇಂಟ್ಯೂಶನೋ ಅದೆಂಥದೋ ಒಂದು ಒಳಮನಸ್ಸಿನ ಜಾಗೃತ ಭಾಗ ಈ ನೋಡುವಿಕೆಯನ್ನು ಥಟ್ಟನೆ ಗುರುತಿಸಿ ಬಿಡುತ್ತದೆ. ಹಾಗಾದಾಗಲೇ ನಾವು ಹುಡುಗಿಯರು ಕಣ್ಣಲ್ಲೇ ಸುತ್ತಲಿನ ಜಾಗ ಸರ್ವೇ ಮಾಡೋದೂ, ಮೆಲ್ಲಗೆ ತಲೆ ಸವರಿ ಕೂದಲು ನೀಟಾಗಿಸಿಕೊಳ್ಳೋದೂ,ಮೆಲ್ಲಗೆ ಮಿಸುಕಾಡಿ ಬಟ್ಟೆ-ದುಪ್ಪಟ್ಟಾ ಸರಿಪಡಿಸಿಕೊಳ್ಳೋದೂ ಮಾಡುತ್ತೇವೆ.
     ಸ್ಕೂಲಿನಿಂದ ಮನೆಗೆ ಬರೋ ದಾರಿಯ ಒಂದು ನಿಶ್ಚಿತ ತಿರುವಿನಲ್ಲಿ ನನಗಾಗಿ ಪ್ರತಿದಿನವೂ ಕಾಯುತ್ತಿದ್ದ ಕಣ್ಗಳ ಅರಿವು ನನಗಿತ್ತು. ನನಗೆ ಗೊತ್ತು ಅನ್ನೋ ವಿಷಯ ಆ ರೋಮಿಯೋಗೂ ಗೊತ್ತಿತ್ತು. ಆದರೂ ಈ ಕಣ್ಣಾಮುಚ್ಚಾಲೆಗೊಂದು ಇತಿಶ್ರೀ ಹಾಡೋ ಬದಲು ಕಾಲ ಹಾಗೇ ನಿಂತುಬಿಡಲಿ ಎಂದೇ ಬಯಸುತ್ತಿದ್ದೆನಲ್ಲಾ ನಾನು! ಬಹುಶಃ ಅವನೂ ಕೂಡಾ …
     ಕಡೆಗೂ ಒಮ್ಮೆ ‘ಈಗಷ್ಟೇ ಜೀವಂತ ಕಪ್ಪೆ ನುಂಗಿದಂಥಾ’ ಮಖಭಾವ ಹೊತ್ತು ನನ್ನೆದುರು ನಿಂತ ಅವನ ಅದೆಷ್ಟು ತರಾಟೆಗೆ ತೆಗೆದುಕೊಂಡಿದ್ದೆನಲ್ಲಾ ನಾನು.
      “ಏನ್ರೀ, ಪತ್ತೇದಾರಿಕೆ ಮಾಡ್ತಿದ್ದೀರಾ ನನ್ನ ಬಗ್ಗೆ” ಎಂದು ಸ್ವಲ್ಪ ಗತ್ತಿನಿಂದಲೇ ಕೇಳಿದ್ದ ನನಗೆ “ಮದುವೆ ಆಗೋಣಾಂತ” ಎಂದು ಮೆಲ್ಲನುತ್ತರಿಸಿ ಬೆಚ್ಚಿಬೀಳಿಸಿದ್ದನಲ್ಲಾ ಮಹಾಶಯ!
“ಇದೇನ್ರಿ ಹೊಸಥರ, ಎಲ್ಲರೂ ಲವ್ವೂ ಡೇಟೂ ಅಂದ್ರೆ ನೀವು ಸೀದಾ ಛತ್ರ ಬುಕ್ ಮಾಡೇ ಬಂದಂತಿದೆ” ಎಂದು ಗಾಬರಿ ಬೆರೆತ ಧ್ವನಿಯಲ್ಲಿ ಕೇಳಿದರೇ ಮತ್ತಷ್ಟು ಹೆದರುತ್ತಾ
” ನಿ ನಿ ನೀವೊಪ್ಪಿದರೇ ಮಾತ್ರಾ ರೀ” ಎಂದವನು ತೊದಲಿದ್ದನ್ನು ನೋಡಿ “ಪರವಾಗಿಲ್ಲ, ಈ ಪ್ರಾಣಿ ಕೂಡಾ ನನ್ನಷ್ಟೇ ಹೆದರಿದೆ” ಎಂದು ಒಂದುಕ್ಷಣ ಮನಸ್ಸಿನಲ್ಲೇ ಸಮಾಧಾನಪಟ್ಟಿದ್ದೆ.
     ನನಗದು ಮೊದಲನೇ ಪ್ರೇಮ ನಿವೇದನೆ ಎಂಬ ಉದ್ವೇಗ ಒಂದು ಕಡೆಯಾದರೆ ಪರಿಚಿತರು ಯಾರಾದರೂ ನೋಡಿಬಿಟ್ಟರೆ ಗತಿಯೇನೋ ಎಂಬ ಅಳುಕು ಇನ್ನೊಂದೆಡೆ.  “ಊಹೂ” ಎಂದಷ್ಟೇ ಹೇಳಿ ಬೆನ್ನು ತಿರುಗಿಸಿ ಓಡುತ್ತಾ ಮನೆಗೆ ಬಂದುಬಿಟ್ಟಿದ್ದೆ.
      ಅಬ್ಬಾ…… ನಡೆದ್ದು ಇಷ್ಟೇ ಚಿಕ್ಕ ಘಟನೆ.ಆದರೆ ನನ್ನ ಬಿಪಿ ನಾರ್ಮಲ್ಲಾಗೋಕೆ ಅದೆಷ್ಟೋ ಹೊತ್ತಾಗಿತ್ತಲ್ಲ! ಸದಾ ದೇವಸ್ಥಾನದ ಗಂಟೆಯಂತೆ ಏನಾದರೊಂದು ಮಾತನಾಡುತ್ತಿರೋ ಹುಡುಗಿ ಹೀಗ್ಯಾಕೆ ಸುಮ್ಮನಿದೆ ಎಂದು ಮನೆಮಂದಿಗೆಲ್ಲಾ ಗಾಬರಿ. ಸುಮ್ಮನೇ ತಲೆನೋವಿನ ಕಾರಣ ಹೇಳಿ ಊಟವನ್ನೂ ಮಾಡದೆ ಮಲಗಿಬಿಟ್ಟಿದ್ದೆ.ರಾತ್ರೆ ಕನಸಲ್ಲೆಲ್ಲಾ ಬರೀ ರೋಮಿಯೋ.
……..
      ಇದೆಲ್ಲಾ ನಡೆದು ವರ್ಷಗಳೇ ಕಳೆದಿವೆ. ಜೀವನ ಬಹಳಷ್ಟು ತಿರುವುಗಳನ್ನು ಕಂಡಾಗಿದೆ, ಇನ್ನೂ ಕಾಣುತ್ತಲೇ ಇದೆ. ಅಂದು ಬೆಚ್ಚಿಬೀಳಿಸಿದ್ದ ರೋಮಿಯೋನ ಹೆಸರು, ವಿಳಾಸವಿರಲೀ ಮುಖಚಹರೆ ಕೂಡಾ ನೆನಪಿಲ್ಲ. ಆದರೂ ಇಂದಿಗೂ ಆ ದಾರಿಯ ಆ ತಿರುವಿನಲ್ಲಿ ನಡೆಯಬೇಕೆಂದರೆ ಅವನನ್ನು, ಅವನಿತ್ತ ರೋಮಾಂಚನವನ್ನೂ ನೆನೆಯದೇ ಇರಲಾಗುವುದೇ ಇಲ್ಲ. ಹಾಗೆಂದು ಅವನೆಡೆಗೆ ಪ್ರೇಮಭಾವವೂ ಇಲ್ಲ. ಓಹ್…… ಏನೆಂದು ಹೆಸರಿಸಲು; ಈ ಚೆಂದ ಅನುಭವಕೆ..
……………………….
ಉಡಿಯ ಅಡಿಯಲ್ಲೆಲ್ಲೋ ಮರೆಯಾಗಿದ್ದ ಹಳೇ ಬರಹ ಇದು. ನನ್ನ ಗುರುಸ್ವರೂಪಿ ಮಿತ್ರರೊಬ್ಬರು “ಏನನ್ನಾದರೂ ಕೀಟಲೆಯಾಗಿ,ತರಲೆಯಾಗಿ ಬರೆಯಲು ಪ್ರಯತ್ನಿಸುತ್ತೀಯಾ” ಎಂದಾಗ ಬರೆದದ್ದಿದು. ಈಗ ಪ್ರೀತಿಯ ತಮ್ಮ ನಿಸರ್ಗ ಬರೆದ ಫೇಸ್ಬುಕ್ ಸ್ಟೇಟಸ್ನಲ್ಲಿ  ಇತಂದೇ ಕಥೆಯೊಂದರ ಮತ್ತೊಂದು ಕೋನದ ನಿರೂಪಣೆ ನೋಡಿ ಈ ಬರಹದ ನೆನಪಾಗಿ ಇಲ್ಲಿ ತಂದು ಚೆಲ್ಲಿದ್ದೇನೆ. ಆರಿಸಿಕೊಳ್ವಿರಾ 🙂

ಪತ್ರ-ಚಿತ್ರ

ಕವಿಹೃದಯಿ ಗೆಳೆಯ ಗುರುಪ್ರಸಾದ್ ಕಂಡಂತೆ;ಒಂದು ಪ್ರೇಮಕಥೆ..

ಮೌನದೊಳಗಣ ಮಾತು

“ತೀರ್ಥರೂಪ ಸ್ವರೂಪರಾದ ತಂದೆಯವರಿಂದ ನಿಮ್ಮ ಮಗ ಬೇಡಿಕೊಳ್ಳುವ ಆಶೀರ್ವಾದಗಳು. ನಾನು ಕ್ಷೇಮವಾಗಿದ್ದೇನೆ, ನೀವು ಸೌಖ್ಯವಾಗಿರುವಿರೆಂದು ನಂಬುತ್ತೇನೆ”. ಈ ರೀತಿಯ ಒಕ್ಕಣೆಯಿರುವ ಪತ್ರಗಳನ್ನು ದಸರಾ ರಜೆಯನ್ನೋ ಅಥವಾ ಅಂತಿಮ ಪರೀಕ್ಷೆ ಮುಗಿದ ನಂತರ ಸಿಗುತ್ತಿದ್ದ ದೊಡ್ಡರಜೆಯೆಂದು ನಾವು ಕರೆಯುತ್ತಿದ್ದ ಆ ರಜಾದಿನಗಳನ್ನು ಕಳೆಯಲು ಅಜ್ಜಿಮನೆಗೆ ಹೋದಾಗ ಮನೆಗೆ ಬರೆಯುತ್ತಿದ್ದುದು ಈವಾಗ ನೆನಪುಗಳಷ್ಟೆ. ಹೊಸ ಮನೆ ಕಟ್ಟಿಸಿದಾಗ ಹಳೆಮನೆಯ ಮೂಲೆಯಲ್ಲಿ ಸರಿಗೆಯಲ್ಲಿ ನೇತಾಡುತ್ತಿದ್ದ ಇನ್ ಲ್ಯಾಂಡ್ ಲೆಟುರಗಳಲ್ಲಿ ಹೂತ ರಾಶಿ ನೆನಪುಗಳನ್ನು ಹಾಗೇ ಹೊತ್ತು ತಂದು ಹೊಸ ಕೋಣೆಯ ಮೂಲೆಗೆ ನೇತುಹಾಕಿದ್ದೆ. ಮಡಚಿಟ್ಟ ತಿಳಿನೀಲಿ ಆಗಸದ ತುಣುಕುಗಳಂತಿದ್ದ ಪತ್ರಗಳೊಳಗೆ ಅಜ್ಜ, ಅಜ್ಜಿಯರೆಂಬ ನಕ್ಷತ್ರಗಳೂ, ತವರುಮನೆಯಿಂದ ಅಮ್ಮನ ಕೈಯ ಪಡಿಯಚ್ಚುಗಳೂ ಇದ್ದವು. ತರಚಿದ ಗಾಯದ ಅವಲತ್ತುಗಳು,ಅಜ್ಜಿ ಕೊಡಿಸಿದ ಬಟ್ಟೆಗಳು ತಿಂಡಿಗಳ ವಿವರಣೆಗಳು ಪುಟ್ಟ ಲೋಕದ ಅಕ್ಷರ ತೊದಲುಗಳು.ಪತ್ರಲೋಕದ ಕೌತುಕ ಬಾಲ್ಯಕ್ಕೆ ಕೊನೆಯಾದುದು ಹೇಗೆ..? ಎಲ್ಲಿ ನಿಂತಿತು ಆ ಅಕ್ಷರಬಂಧ..?

20151130_205534

ಇವೆಲ್ಲ ನೆನಪಾದದ್ದು “ನಿಂದೆ ಪ್ರಿಯ ಮೊಯ್ದೀನ್”(ನಿನ್ನ ಪ್ರೀತಿಯ ಮೊಯ್ದೀನ್), ಅನ್ನೋ ಮಲಯಾಳಂ ಪ್ರಣಯಕಾವ್ಯವನ್ನು ತೆರೆಯ ಮೇಲೆ ನೋಡಿದಾಗ.ಅದರಲ್ಲೇನು ಬಾಲ್ಯವಿರಲಿಲ್ಲವಾದರೂ, ಅಸಹಜವೆನ್ನುವಂತೆ ಮನಸ್ಸು ಬಾಲ್ಯಕ್ಕೋಡಿತ್ತು.

ನಮ್ಮ ತಲೆಮಾರುಗಳವರ್ಯಾರು ಅನುಭವಿಸಲಾಗದ ಎದೆ ತುಡಿತಗಳನ್ನು ಲೇಖನಿಯ ಹನಿಗಳಾಗಿಸಿ ಪ್ರೇಮಿಸಿದ ಆ ಒಂದು ಕಾಲಘಟ್ಟದ ಕಲ್ಪನೆಗಳಿವೆ ಮನದಲ್ಲಿ. ಕುಡಿನೋಟಕ್ಕಾಗಿ ಕಾಯುವ, ಆ ನೋಟಕ್ಕೆ ಮಾರುಹೋಗುವ ಪ್ರಣಯದುಬ್ಬರದ ಕಾಲ. ಲೆಕ್ಕವಿಲ್ಲದಷ್ಟು ಹರಿದ ಹಾಳೆಗಳ ಕೊನೆಗೆ ಮೂಡುವ, ಮನದ ಭಾವನೆಗಳು ಕಲ್ಪನೆಯ ಕುಸುರಿಯಲ್ಲರಳಿ ಪದವಾದ ಪ್ರೇಮದೋಲೆ. ಇಷ್ಟದ ಜೀವಕೆ ಅದನ್ನು ಕೊಡಲು ಪಡುವ ಪಾಡು. ಮತ್ತೆ ಪತ್ರ ಮುಖಾಂತರವೇ ಪಕ್ವವಾಗುವ ಅಥವಾ ಕಳೆದುಹೋಗುವ ಪ್ರೀತಿ..ಇಂದಿನ ನಗರಗಳ…

View original post 280 more words

ಮಧ್ಯರಾತ್ರೀಲೀ….

ಓಹ್! ಆ ದಿನಗಳೇ ಚೆನ್ನಾಗಿತ್ತಪ್ಪ. ವಾರಕ್ಕೆ ಆರೇದಿನ ಸ್ಕೂಲು. ಅದರಲ್ಲೂ ಐದುದಿನಗಳು ಒಂದೇ ರೀತಿಯ ಯೂನಿಫಾರ್ಮ್. ಆರನೇ ದಿನ ನಮ್ಮಾಯ್ಕೆಯ ಅಥವಾ ನಮ್ಹತ್ರ ಇರೋ (ಒಂದೋ ಎರ್ಡೋ ಇರ್ತಿತ್ತಷ್ಟೇ) ಬಣ್ಣದ ಬಟ್ಟೆ, ಮತ್ತು ಅರ್ಧ ದಿನ ಸ್ಕೂಲಿನ ಅನುಕೂಲ. ತೀರಾ ಹೊರೆಯೆನಿಸದ ಹೋಮ್ವರ್ಕು.ಬೇಸಿಗೆಯಲ್ಲೂ ದಸರಾ ಸಮಯದಲ್ಲೂ ಭರಪೂರ ರಜೆಯ ಮಜಾ.ಈಗಿನ ಮಕ್ಕಳಂತೆ ದಿನಕ್ಕೊಂದು ಬಗೆ ಸಮವಸ್ತ್ರ, ಪಠ್ಯದಷ್ಟೇ ಕಟ್ಟುನಿಟ್ಟಿನಲ್ಲಿ ಕಲಿಯಲೇಬೇಕಾದ ಪಠ್ಯೇತರ ಚಟುವಟಿಕೆಗಳೂ, ಎಡವಿಬಿದ್ದರೆ ಅಸೈನ್ಮೆಂಟೂ, ಪ್ರೋಜೆಕ್ಟೂ, ಇಂಟರ್ನಲ್ಸೂ, ದೊಡ್ಡ ಪರೀಕ್ಷೆ ಮುಗಿದಮೇಲೂ ಪ್ರಾಪ್ತಿಯಾಗದ ದೊಡ್ಡ ರಜೆ, ಸಿಕ್ಕ ಚೂರೂಪಾರು ರಜೆಯಲ್ಲಿ ಸಮ್ಮರ್ ಕ್ಯಾಂಪೂ …. ಊಹೂ ಇದ್ಯಾವ್ದೇ ರಗಳೆಗಳಿಲ್ದೆ ಸುಖವಾಗಿ ಕಳೆದ ವಿದ್ಯಾರ್ಥಿ ಜೀವನ ನನ್ನದು.
      ಈಗಿನಷ್ಟು ಭಾರೀ ಓದುಗಳೂ ಹೊರೆ ಹೋಮ್ವರ್ಕುಗಳೂ ಇಲ್ಲದ್ದರಿಂದ ಬಿಡುವಿನ ವೇಳೆ ತುಂಬಾ ತುಂಬಾ ಇರೋದು. ಟಿವಿ, ಕಂಪ್ಯೂಟರ್ರೂ ಇನ್ನೂ ತಮ್ಮ ಪ್ರಭಾವಬೀರದ ದಿನಗಳವು. ಆಡುವ ಎಳೇಪ್ರಾಯ ಹಿಂದೆ ಸರಿದಂತೆ ನಾನೂ, ನನ್ನದೇ ವಯೋಮಾನದ ಹೆಚ್ಚಿನ ಮಕ್ಕಳೂ ತುಂಬಾ ಚಿಕ್ಕ ಪ್ರಾಯದಲ್ಲೇ ಪಠ್ಯೇತರ ಪುಸ್ತಕ ಕೈಗಂಟಿಸಿಕೊಂಡಿದ್ದೆವು.
       ನಾನಂತೂ ಮೂರನೇ ತರಗತಿಯಲ್ಲಿರುವಾಗಲೇ ತ್ರಿವೇಣಿಯವರ,ಉಷಾ ನವರತ್ನರಾವರ ಸಾಮಾಜಿಕ, ಪ್ರೇಮ  ಕಾದಂಬರಿಗಳನ್ನೋದುತ್ತಿದ್ದೆ. ಏಳರ ಹೊತ್ತಿಗಾಗಲೇ ತೆಲುಗು ಕಾದಂಬರಿಗಳ ಗೀಳು. ಹೈಸ್ಕೂಲ್ ಹೊಸ್ತಿಲ್ಲಲ್ಲಿ ಕಾರಂತರು, ಭೈರಪ್ಪನವರೂ, ಕುವೆಂಪು, ಪೂಚಂತೇ ಎಲ್ಲರೂ ಮನಸ್ಸನ್ನಾವರಿಸಿಯಾಗಿತ್ತು. ತರಂಗ, ತುಷಾರಾ,ಹಾಯ್ ಬೆಂಗಳೂರಿನಂಥ ನಿಯತಕಾಲಿಕಗಳೂ ಜೊತೆಗಿದ್ದವು.
    ಓದು ಬರಬರುತ್ತಾ ನನಗೆಂಥಾ ಗೀಳಾಗಿತ್ತೆಂದರೆ ಬುಧವಾರ ಅಪ್ಪ ತರಂಗ ತರಲು ಮರೆತರೆ ಮನೆ ರಣರಂಗವಾಗುತ್ತಿತ್ತು. ಬೇಕೆನಿಸಿದ ಪುಸ್ತಕ ತಕ್ಷಣಕ್ಕೆ ಕೈಗೆಟುಕದೇ ಹೋದರೆ ತಲೆ ಚಿಟ್ಟು ಹಿಡಿದಂತಾಗುತ್ತಿತ್ತು. ಓದಿರುವ ಪುಸ್ತಕಗಳನ್ನೇ ಮತ್ತೆ ಮತ್ತೆ ಓದುತ್ತಿದ್ದೆ .ಪುಸ್ತಕ ಹಿಡಿದು ಕುಳಿತೆನೆಂದರೇ ಸಾಕು; ಪರಿಚಯ ಇಲ್ಲದ ಹೊಸಬರು “ಆಹಾ, ಎಂಥಾ ತದಾತ್ಮ” ಎಂತಲೂ ಮನೆಮಂದಿ “ಥೂ, ಆ ಬುಕ್ಕೊಂದು ಕೈಲಿದ್ರೆ ಲೋಕ ಮುಳುಗಿದ್ದು ಗೊತ್ತಾಗಲ್ವನೇ ” ಎಂದೂ ಹೇಳುತ್ತಿದ್ದರೂ ಅದರ ಪರಿವೆಯೇ ಇಲ್ಲದೆ ನನ್ನದೇ ಕಲ್ಪನಾ ಲೋಕದಲ್ಲಿರುತ್ತಿದ್ದೆ.
     ಒಮ್ಮೆ ಹೀಗಾಯ್ತು. ಹೈಸ್ಕೂಲ್ ದಸರಾರಜೆಯ ಸಮಯ ಯಾವಾಗಿನಂತೆ ನಾನು ನನ್ನಜ್ಜನ ಮನೆಗೆ ಹೊರಟಿದ್ದೆ. ಬಟ್ಟೆಬರೆ ಜೊತೆ ಒಂದೆರಡು ಪುಸ್ತಕಗಳನ್ನೂ ಗಂಟುಕಟ್ಟಿದ್ದೆ. ಅಜ್ಜನ ಊರೋ ಅದೊಂದು ಕುಗ್ರಾಮ.ಇಡೀ ಊರಿಗೆ ಅಜ್ಜನದ್ದೂ ಸೇರಿ ಎರಡೋ ಮೂರೋ ಮನೆಗಳಷ್ಟೇ ಇದ್ದಿದ್ದು. ಅದೂ ಒಂದರಿಂದ ಇನ್ನೊಂದು ಕಣ್ಣಿಗೆ ಕಾಣದಷ್ಟು ದೂರದಲ್ಲಿ.
ನಿಲ್ದಾಣದಲ್ಲಿ ಬಸ್ಸಿಳಿದು ನೇರ ಕಾಲುಹಾದಿಯಲ್ಲಿ ಒಂದರ್ಧ ಕಿಲೋಮೀಟರ್ ಗೇರು ತೋಪು, ಕುರುಚಲು ಕಾಡಿನಿಂದ ಸುತ್ತುವರಿದ ರಸ್ತೆ ಹಿಡಿದು ನಡೆದರೆ ಸೊಂಪಾದ ಸುವಿಸ್ತಾರವಾದ ಅಜ್ಜನ ಅಡಿಕೆ ತೋಟ, ತೋಟಕ್ಕಂಟಿದಂತೇ ಮನೆ ಮತ್ತದರ ಎದುರಲ್ಲೇ ದನಕರುಗಳ ಕೊಟ್ಟಿಗೆ, ಮನೆಯ ಪ್ರೀತಿಯ ನಾಯಿ ‘ಸೋನಿ’ಗೊಂದು ಗೂಡು, ಅಡಿಕೆ ಒಲೆ.ಮನೆಯಿಂದ ಸ್ವಲ್ಪ ದೂರದಲ್ಲಿ ಪ್ರತ್ಯೇಕವಾಗಿದ್ದ ಬಾವಿಕಟ್ಟೆ, ಸ್ನಾನ ಮತ್ತು ಶೌಚದ ಕೋಣೆಗಳು.ತೀರಾ ಆಡಂಬರವಾಗೇನೂ ಇಲ್ಲದಿದ್ದರೂ ಹಳೆಯ ಮನೆಯಾದ್ದರಿಂದ ವಿಶಾಲವಾದ ಜಗುಲಿ, ಹಜಾರ, ಒಳಕೋಣೆಗಳ ದೊಡ್ಡ ಮನೆಯೇ ಅದು. 
     ಮೊದಲಾದರೆ  ಆಡುತ್ತಾ ಕುಣಿಯುತ್ತಾ ದೊಡ್ಡ ಮನೆ,ಅಂಗಳದ ತುಂಬಾ ಗಲಾಟೆ ಗದ್ದಲ ಮಾಡುತ್ತಾ ರಜೆಯನ್ನು ಮೋಜಾಗಿ ಕಳೆಯಬಹುದಿತ್ತು. ಆದರೀಗ ಹೈಸ್ಕೂಲ್ ಓದೋ ದೊಡ್ಡ ಹುಡುಗಿ ಎನಿಸಿಕೊಂಡಿದ್ದೀನಲ್ಲಾ…. ಗಂಭಿರವಾಗಿರಲೇ ಬೇಕಾದ ಅನಿವಾರ್ಯ. ಸರಿ, ಹೋದಾಕ್ಷಣ ನಾನು ಒಯ್ದಿದ್ದ ಬ್ಯಾಗನ್ನೊಂದುಕಡೆ ಎಸೆದೆ. ಮನೆಯವರೊಂದಿಗೆ ಸಾಧ್ಯವಾದಷ್ಟು ಹರಟಿ, ತೋಟ,ಕೊಟ್ಟಿಗೆಗೆಲ್ಲಾ ಒಮ್ಮೆ ಹೊಕ್ಕುಬಂದೆ. ಹೊಸದಾಗಿ ಸ್ವೀಕರಿಸಿದ್ದ ಗಾಂಭೀರ್ಯ ಧೀಕ್ಷೆ ಅಷ್ಟೇನೂ ಆಕರ್ಷಕವಾಗಿರಲಿಲ್ಲ.ಆಡಬಹುದಾದ ಮಾತುಗಳೆಲ್ಲಾ ಮುಗಿದಂತೆನಿಸಿ ಅಜ್ಜನೂರು ಮೊದಲ ದಿನಕ್ಕೇ ‘ಯಮ ಬೋರಿಂಗ್’ಅನಿಸತೊಡಗಿತು.    
    ದೊಡ್ಡ ಮನೆಯ ಯಾವುದೋ ಒಂದು ಮೂಲೆಯಲ್ಲಿ ಪುಸ್ತಕ ಹಿಡಿದು ಕುಳಿತರೆ  ಜಗತ್ತನ್ನು ನಾನೂ; ನನ್ನನ್ನು ಜಗತ್ತೂ ಸುಲಭವಾಗಿ ಮರೆತುಬಿಡಬಹುದಾಗಿತ್ತು. ಸಧ್ಯಕ್ಕೆ ಹೊತ್ತುಕಳೆಯಲು ಅದೇ ಉತ್ತಮ ಎಂದುಕೊಂಡ ನಾನು ಮಧ್ಯಾನ ಊಟದ ನಂತರ ಮನೆಯಿಂದ ಕೊಂಡೊಯ್ದಿದ್ದ “ಕಾಡಿನ ಕಥೆಗಳು” ಹಿಡಿದು ಕುಳಿತೆ.
        ಕುಳಿತದ್ದೊಂದೇ ನೆನಪು. ಪುಸ್ತಕದಲ್ಲಿ ಅದ್ಯಾವ ಮಟ್ಟಿಗೆ ಕಳೆದುಹೋದೆನೆಂದರೆ ಮಧ್ಯದಲ್ಲಿ ಯಾರೋ ಸಂಜೆಯ ಕಷಾಯ ತಂದುಕೊಟ್ಟಿದ್ದೂ,ರಾತ್ರೆಯ ಊಟಕ್ಕೆ ಕರೆದದ್ದೂ ಮಸುಕು ಮಸುಕಾಗಿ ನೆನಪಿದೆ. ಅದೇನು ಕುಡಿದೆನೋ ತಿಂದೆನೋ ಒಂದೂ ನೆನಪಿಲ್ಲ. ಮತ್ತೆ ಪುಸ್ತಕ ಹಿಡಿದು ಕುಳಿತವಳಿಗೆ ಅಜ್ಜನೋ ಇನ್ಯಾರೋ ಒಬ್ಬರು ಹತ್ತಿರ ಬಂದು ಮಲಗುವ ಸಮಯವಾಯ್ತು ಅಂತೇನೋ ಹೇಳಿದ್ದರೂ ‘ಇನ್ನೊಂದೇ ಪೇಜ್.. ಬೇಗ ಮುಗಿಸಿ ಮಲಗ್ತೀನಿ’ ಎಂದು ಹಾಗೇ ಓದು ಮುಂದುವರೆಸಿದ್ದೆ.
  ಪುಸ್ತಕ ಪೂರ್ಣ ಮುಗಿದಾಗ ಮಧ್ಯರಾತ್ರಿ ಎರಡರ ಸಮಯ. ಪುಸ್ತಕದ ರೋಮಾಂಚಕತೆ, ನಿದ್ರೆಯ ಸೆಳೆತ ಎಲ್ಲಾ ಒಟ್ಟಾಗಿ ತಲೆ ಭಾರವಾಗಿತ್ತು. ಬೇಗನೆ ಮಲಗಿಬಿಡೋಣ ಎಂದು ಹೊರಟರೆ ಆಗಲೇ ಶುರುವಾದ್ದು ಅಸಲೀ ಸಮಸ್ಯೆ. ಮಲಗೋ ಮೊದಲು ಬಚ್ಚಲಿಗೆ ಹೋಗಬೇಕಾಗಿದೆ ಮತ್ತು ಹೋಗಲೇಬೇಕಾಗಿದೆ.ಆದರೆ ಹೇಗೆ!? ಬಚ್ಚಲುಕೋಣೆ ಮನೆಯಿಂದ ಹೊರಗೆ ಪ್ರತ್ಯೇಕವಾಗಿದೆಯಷ್ಟೇ, ನೂರು ಭಯಗಳು ಮನಸ್ಸನ್ನಾವರಿಸಿದವು.
       ಮನೆಯ ಹತ್ತಿರದಲ್ಲೇ ಎಲ್ಲೋ ಕೂಗುತ್ತಿರೋ ಗೂಬೆ, ಕಾಡಿನ ಜೀರುಂಡೆಗಳ ಝೇಂಕಾರ, ಅಟ್ಟದ ಮೇಲಿನ ಇಲಿ-ಹೆಗ್ಗಣಗಳ ಓಡಾಟದ ಸರ-ಬರ ಶಬ್ದ, ಅಲ್ಲೆಲ್ಲೋ ದೂರದಲ್ಲಿ ಬಾವಲಿಗಳು ಪಟಪಟನೇ ರೆಕ್ಕೆ ಬಡಿಯೋ ಶಬ್ದ…ಹೌದೋ ಅಲ್ಲವೋ ಎಂಬಂತೆ ಕೇಳೋ ನರಿಗಳ ಊಳಿಡುವಿಕೆ…. ಒಂದೋ ಎರಡೋ. ಓದಿನಲ್ಲಿ ಮುಳುಗಿದ್ದಷ್ಟು ಹೊತ್ತೂ ಇಹದ ಪರಿವೇ ಇರಲಿಲ್ಲ ನನಗೆ.ಈಗ ಒಮ್ಮಿಂದೊಮ್ಮೆಗೇ ಸುತ್ತಲಿನ ಪ್ರತಿ ಶಬ್ದವೂ ಕಿವಿ ತಮಟೆಯ ಬಳಿಯಲ್ಲೇ ಮೊಳಗಿದಂತಾಗಿ ಭಯ ಹುಟ್ಟಿಸಿದವು.
     ಎಷ್ಟೇ ಭಯವಾದರೂ ಸರಿ ಮಲಗೋ ಮೊದಲು ಮಾಡಬೇಕಾದ ಕೆಲಸ ಮಾಡಲೇಬೇಕು, ಇಲ್ಲದ್ದಲ್ಲಿ ನಿದ್ರೇಯೂ ಸರಿಯಾಗಿ ಬಾರದು. ಮನೆವರೆಲ್ಲಾ ಗಡದ್ದು ನಿದ್ರೆಯಲ್ಲಿದ್ದರು.  ಯಾರನ್ನಾದರೂ ಎಬ್ಬಿಸಿ ಜೊತೆಗೆ ಕರೆದುಕೊಂಡು ಹೋಗಬಹುದಿತ್ತು, ಆದರೆ ಮತ್ತದೇ ಮಾಮೂಲಿ ವರಸೆಯ “ಯಂತಾ ಹೆದ್ರಿಕೆ, ಅಲ್ಲೆಂತ ಗುಮ್ಮ ಉಂಟಾ, ಹೋಗು ಮಾರಾತಿ” ಎಂದೋ”ಇಷ್ಟೊತ್ತಂಕಾ ಓದಿದ್ದಾ, ಕಣ್ಣೆಂತಕ್ಕೆ ಬರುತ್ತೆ ಹುಡ್ಗಿ, ಹೇಳಿದ್ದೊಂದೂ ಕೇಳಲ್ಲಪ” ಎಂದೋ ಬೈದಾರು ಎಂಬ ಅಳುಕು.
     ಹೆಚ್ಚು ಹೊತ್ತು ಇದನ್ನೆಲ್ಲಾ ಯೋಚಿಸುತ್ತಾ ಕೂರುವಂತಿರಲಿಲ್ಲ. ನಿದ್ರೆಯಿಲ್ಲದೇ ತಲೆ ಸಿಡಿಯುತ್ತಿತ್ತು. ಪೂರ್ಣ ಬೆಳಗಾಗೋ ಮೊದಲು ಸ್ವಲ್ಪವಾದರೂ ನಿದ್ರೆ ಮಾಡಲೇಬೇಕಿತ್ತು. ನಿದ್ರೆ ಬರಬೇಕೆಂದರೆ ನಾನೀಗ ಕತ್ತಲ ಹಿತ್ತಿಲಿನ ಬಚ್ಚಲಿಗೆ (ಜಲಬಾಧೆ ನಿವಾರಣೆಗೆ) ಹೋಗಲೇಬೇಕಿತ್ತು.
      ಅಂಜುತ್ತಾ ಅಳುಕುತ್ತಾ ಹಿತ್ತಿಲ ಬಾಗಿಲು ತೆಗೆದು ಹೊರಗಡಿಯಿಟ್ಟೆ. ಹೇಗೋ ಬಚ್ಚಲ ಕೆಲಸ ಪೂರೈಸಿ ಬಾವಿಕಟ್ಟೆಯ ಬಳಿ ಕಾಲು ತೊಳೆದು ಮನೆಯ ಸುರಕ್ಷಿತತೆಯ ಕಡೆ ಆತುರವಾಗಿ ನಡೆಯುತ್ತಾ ನೋಡುತ್ತೇನೆ; ದೂರದಲ್ಲಿ ಎರಡು ಮಿಣುಕು ಬೆಳಕುಗಳು!  ಒಂದೇ ಅಂತರದಲ್ಲಿ ಎರಡು ಮಿಣುಕು ಹುಳುಗಳು ಹಾರುತ್ತಿವೆಯೇನೋ ಎಂದು ಕಡೆಗಣಿಸುತ್ತಿದ್ದೆನೇನೋ, ಆದರೆ ಬೆಳಕುಗಳು ಮೆಲ್ಲಗೆ ನನ್ನೆಡೆಗೆ ಚಲಿಸುತ್ತಿವೆ! ಓಹ್ ಮಿಣುಕು ಹುಳಗಳಲ್ಲ ಅವು,ಎರಡು ಕಣ್ಣುಗಳು! ಜೊತೆಗೇ ಮೆಲ್ಲನೆ ಗುರುಗುಡುವ ಶಬ್ದವೂ ಬರುತ್ತಿದೆ. ಹುಣ್ಣಿಮೆ ಬೆಳಕಿನಲ್ಲಿ ಯಾವುದೋನಾಲ್ಕು ಕಾಲಿನ ಪ್ರಾಣಿ ನನ್ನೆಡೆ ಬರುತ್ತಿರುವುದು ಅಸ್ಪಷ್ಟವಾಗಿ ಕಂಡಿತು. ನಿತ್ತಲ್ಲೇ ಹೌಹಾರಿದೆ! 
        “ಪ್ರಾಣಿ ಯಾವುದಿರಬಹುದು, ಇಷ್ಟು ರಾತ್ರಿಯಲ್ಲಿ ಅಜ್ಜನ ಮನೆಯಂಗಳದಲ್ಲಿ ಏನು ಮಾಡುತ್ತಿರಬಹುದು”,ಊಹೂ….. ಇವೆಲ್ಲಾ ತಾಳ್ಮೆ, ವಿವೇಕಯುಕ್ತ ಯೋಚನೆಗಿಂತಾ ಭಯದ ಶಕ್ತಿಯೇ ಹೆಚ್ಚು. ಅಷ್ಟು ಹೊತ್ತೂ ಓದಿದ ಪುಸ್ತಕದಲ್ಲಿನ “ರುದ್ರಪ್ರಯಾಗದ ನರಭಕ್ಷಕನೇ” ನನ್ನನ್ನು ಬೇಟೆಯಾಡಲು ಬಂದಿದೆ ಎಂದು ಬಲವಾಗಿ ಅನಿಸಿತು. ತಡಮಾಡದೇ ದೊಡ್ಡ ಧ್ವನಿಯಲ್ಲಿ ಕೂಗುತ್ತಾ ಮನೆಯ ಹಿತ್ತಲ ಬಾಗಿಲಿನ ಕಡೆಗೆ ಓಡಲು ಶುರುಮಾಡಿದೆ. ಆ ಪ್ರಾಣಿಯೂ ಗುರುಗುಡುತ್ತಾ ವೇಗ ಹೆಚ್ಚಿಸಿಕೊಂಡು ನನ್ನ ಹಿಂದೆಯೇ ಬಂತು. ನಾನು ಮನೆಯ ಬಾಗಿಲ ಬಳಿ ಬರೋದರೊಳಗೆ ಕೂಗಿ ಮಾಡಿದ ಗದ್ದಲಕ್ಕೆ ಮಲಗಿದ್ದ ಅಜ್ಜ, ಅಜ್ಜಿ, ಅಮ್ಮ ಎಲ್ಲರೂ ದಡಬಡಿಸಿ ಎದ್ದು ನಾನಿದ್ದಲ್ಲಿಗೇ ಬಂದರು.
       ಭಯದಲ್ಲಿ ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ ನಾನು. ಹೇಳಬೇಕಾದ ಅಗತ್ಯ ಕೂಡಾ ಇರಲಿಲ್ಲ. ಗಲಾಟೆ ಕೇಳಿ ಬಂದವರಲ್ಲೊಬ್ಬರು ಹಿತ್ತಲ ಕರೆಂಟ್ ದೀಪದ ಸ್ವಿಚ್ ಹಾಕಿದ್ದರು. ಜಗ್ಗನೆ ಹೊಮ್ಮಿದ  ಬೆಳಕಿನಲ್ಲಿ  ನನ್ನ ಕಾಲ ಬುಡದಲ್ಲೇ ಬಾಲವಾಡಿಸುತ್ತಾ ನಿಂತಿತ್ತು ‘ಮನೆಯ ಮುದ್ದಿನ ನಾಯಿ-ಸೋನಿ’.
       “ಊಫ್! ಇದಕ್ಕಾಗಿ ಇಷ್ಟು ಹೆದರಿದೆನಾ, ಇಷ್ಟು ಪಾಪದ ನಾಯಿಮರಿಯನ್ನು ನರಭಕ್ಷಕ ಹುಲಿ,ಚಿರತೆಗೆ ಹೋಲಿಸಿ ಭಯಪಟ್ಟೆನಾ” ಎಂದು ನನ್ನ ತಲೆಗೆ ನಾನೇ ಮೊಟಕಿಕೊಂಡೆ. ಹಿತ್ತಲ ದೀಪ ಹಾಕದೇ ಬಚ್ಚಲವರೆಗೂ ಹೋದ ಪೆದ್ದುತನಕ್ಕೆ, ನಾಯಿಯನ್ನು ಹುಲಿಯೆಂದುಕೊಂಡ ಪುಕ್ಕಲುತನಕ್ಕೆ, ಬೆಳಗಿನ ಜಾವದತನಕ ನಿದ್ರೆಗೆಟ್ಟು ಕಥೆಪುಸ್ತಕ ಓದಿದ್ದಕ್ಕೆ ನನಗೂ, ಅಂಥಾ ತಲೆಕೆಡುವ, ಭಯ ಹುಟ್ಟಿಸುವ ಪುಸ್ತಕ ಬರೆದದ್ದಕ್ಕೆ “ಜಿಮ್ ಕಾರ್ಬೆಟ್” ಹಾಗೂ “ಪೂರ್ಣ ಚಂದ್ರ ತೇಜಸ್ವಿ”ಯವರಿಗೂ ಅಮ್ಮ ಮತ್ತು ಅಜ್ಜನಿಂದ ಮಧ್ಯರಾತ್ರಿಯಲ್ಲಿ  ಮಹಾಮಂಗಳಾರತಿ(ಬೈಗುಳ) ಅವ್ಯಾಹತವಾಗಿ ನಡೆಯಿತು.
       ಇಷ್ಟೆಲ್ಲಾ ನಡೆಯುವಾಗ ಘಂಟೆ ಮೂರರ ಸಮೀಪ ಬಂದಿತ್ತು.ಹಾಸಿಗೆ ಸೇರಿದಮೇಲೂ ಎಷ್ಟೋ ಹೊತ್ತಿನವರೆಗೂ ಜೋರಾಗಿ ಹೊಡೆದುಕೊಳ್ಳುತ್ತಿದ್ದ ಹೃದಯ ಯಾವಾಗ ಸಹಜವಾಯ್ತೋ, ನಿದ್ರೆ ಯಾವ ಘಳಿಗೆಯಲ್ಲಾವರಿಸಿತೋ ಒಂದೂ ತಿಳಿಯದು.
     ಅಂದು ಅಮ್ಮ ಬೈದ ಪ್ರತಿ ಬೈಗುಳವೂ ಜಿಮ್ ಕಾರ್ಬೆಟ್ರಿಗೂ ಪೂಚಂತೇಯವರಿಗೂ ಸಂದ ಗೌರವವೆಂದೇ
ಭಾವಿಸಿ ಓದುವ ಹವ್ಯಾಸವನ್ನು ಬಿಡದೇ ಮುಂದುವರಿಸಿದ್ದೇನೆ; ಮುಂದುವರೆಸುತ್ತಲೇ ಇದ್ದೇನೆ.ಏನೇ ಆಗಲಿ,ಏನೇ ಹೋಗಲಿ; ಓದಿನ ಬಂಡಿ ಬರದಲಿ ಸಾಗಲಿ. ಸರಿ ತಾನೇ?

ಊರಿಗೊಬ್ಳೇ ಪದ್ಮಾವತೀsssssss

    “ಜೀವನಾಂದ್ರೇ ಹುಡ್ಗಾಟ ಅಲ್ಲ. ಇಷ್ಟ್ ದಿನ ಆಡಿದ ಮರ್ಕೋತಿ ಆಟನೆಲ್ಲ ಇನ್ನು ಮರ್ತೇಬಿಡ್ಬೇಕು ನೀವೆಲ್ಲ. ಮುಂದೆ ಜೀವ್ನದಲ್ಲಿ ಏನಾಗ್ಬೇಕು ಅನ್ನೋದು ಈಗ್ಲೇ ತೀರ್ಮಾನ ಮಾಡ್ಕೊಳಿ ಮತ್ತದ್ರ ತಯಾರಿಗೆ ಚನ್ನಾಗ್ ಓದ್ರಿ. ಏನು? ಗೊತ್ತಾಯ್ತಾ? ಒಬ್ಬೊಬ್ರಾಗ್ ಹೇಳಿ ಏನಾಗ್ಬೇಕು ಅಂದ್ಕೊಂಡಿದೀರಾಂತ..ಹಾಂ?”
    ಯಾವ್ದೋ ವಿಷ್ಯಕ್ಕೆ ನಮ್ಗಳ ಮೇಲೆ ರಾಂಗಾಗಿದ್ದ ಮಂಜು ಮೇಷ್ಟ್ರು ಸಡನ್ನಾಗಿ ನಮ್ ಕಪಿಸೇನೆ ಮನಸ್ನಲ್ಲಿ ಒಂಚೂರು ಸೀರಿಯಸ್ನೆಸ್ಸು ಹುಟ್ಸೋ ಪ್ರಯತ್ನದಲ್ಲಿದ್ರು ಅನ್ಸತ್ತೆ. ಸರಿ, ನಾವು ಒಬ್ಬೊಬ್ರಾಗಿ ಡಾಕ್ಟ್ರು, ಎಂಜಿನಿಯರ್, ಟೀಚರ್ರು, ಫಿಲ್ಮ್ ಹೀರೋ ಅಂತ ಬಾಯಿಗೆ ಬಂದಿದ್ದ ಉದ್ಯೋಗ ಆರ್ಸ್ಕೊಳೋಕೆ ಶುರು ಮಾಡಿದ್ವಿ.ಐದ್ನೇ ಬೆಂಚಲ್ಲಿದ್ದ ಪದ್ದಿ; “ಸರ್, ನಾ ದೊಡ್ಡೋಳಾದ್ಮೇಲೆ ಮದ್ವೆ ಆಗ್ತೀನ್ರಿ” ಅಂತ ನಾಚ್ಕೊಳ್ತಾ ಹೇಳೋದೂ, ಕೊನೇ ಪಿರಿಯಡ್ ಮುಗಿತು ಅಂತ ಬೆಲ್ ಹೊಡ್ದಿದ್ದು ಒಟ್ಟೊಟ್ಟಿಗೇ ಆಯ್ತು. ಸ್ಕೂಲ್ ಮುಗೀತು ಅನ್ನೋದ್ನೂ ಮರ್ತು ಮೇಷ್ಟ್ರು ಪದ್ದೀನೇ ಆಶ್ಚರ್ಯದಿಂದ ನೋಡ್ತಿದ್ರು. ಅರೆಕ್ಷಣ ದಂಗಾಗಿದ್ದ ಮೇಷ್ಟ್ರು ಮತ್ತೆ ಸಾವರ್ಸ್ಕೊಂಡು ಮುಗುಳ್ನಕ್ಕು “ಅದೂ ಒಳ್ಳೆ ಉದ್ಯೋಗಾನೇ . ಗುಡ್,ಗುಡ್” ಅಂದು ಕ್ಲಾಸ್ ಮುಗ್ಸಿದ್ರು.
       ಆ ದೇವ್ರು ಒಬ್ಬೊಬ್ರಿಗೆ ಒಂದೊಂದು ವಿಷಯದಲ್ಲಿ ಧಾರಾಳತನ ತೋರಿಸ್ತಾನಂತೆ. ಕೆಲವರಿಗೆ ಸಿರಿತನದಲ್ಲಾದ್ರೆ ಮತ್ತೆ ಕೆಲವರಿಗೆ ಪ್ರತಿಭೆಯಲ್ಲಿ ಮತ್ತೆ ಕೆಲವರಿಗೆ ಕಷ್ಟಗಳ ವಿಷಯದಲ್ಲಿ. ಆದ್ರೆ ನನ್ನ ಬಾಲ್ಯ ಗೆಳತಿ ಪದ್ಮಾವತಿಗೆ ಈಸ್ಟ್ರೋಜನ್ನು ಅದೇ; ಹೆಣ್ಣುಭಾವನೆಗಳ ಹಾರ್ಮೋನು ಅದನ್ನು ತುಂಬಾ ಉದಾರವಾಗಿ ಕೊಟ್ಟಿದ್ನೋ ಏನೋ ಮಾತುಮಾತಿಗೂ ನಾಚಿಕೆ, ನಿತ್ನಿತ್ತಲ್ಲೇ ಕನಸು.
    ವಿಷ್ಯ ಏನಪ್ಪಾಂದ್ರೆ ನಮ್ಮ ಪದ್ಮಾವತಿಗೆ ಯಾನೇ ಪದ್ದೀಗೆ ಅವ್ಳಜ್ಜಿ ಅಂದ್ರೆ ಜೀವ. ಅಜ್ಜಿಗೂ ಅಷ್ಟೇ ಮೊಮ್ನಗಳಂದ್ರೇ ಪ್ರಾಣ. ದಿನಾ ರಾತ್ರೆ ಜೊತೇಲಿ ಮಲಗಿಸ್ಕೊಂಡು ಚಂದಚಂದದ ರಾಜ್ಕುಮಾರಿಯರ ಕಥೆ ಹೇಳ್ತಿದ್ರಂತೆ. ಆ ಕಥೆಗಳಲ್ಲಿ ಹೆಚ್ಚಿನವು ಕೊನೆಯಲ್ಲಿ ಸುಂದರನಾದ ರಾಜಕುಮಾರನನ್ನ ಮದುವೆಯಾಗೋದ್ರಲ್ಲಿ ಸುಖಾಂತ ಆಗೋಂಥವೇ ಅಲ್ವ. ಕಥೆಯೆಲ್ಲಾ ಮುಗಿಯುತ್ಲೂ ಅಜ್ಜಿ ಪದ್ದಿ ತಲೆ ಸವ್ರಿ “ಪದ್ದಿ ಬಂಗಾರಾ, ನೀನೂ ಒಳ್ಳೆ ಹುಡ್ಗಿಯಾಗಿದ್ದು, ಚನ್ನಾಗ್ ಓದಿ ಹತ್ನೇಕ್ಲಾಸು ಪಾಸ್ಮಾಡಿದ್ರೆ ಆ ಕಥೆ ಥರಾನೇ ಒಬ್ಬ ರಾಜ್ಕುಮಾರ ಬಂದು ನಿನ್ನ ಮದ್ವೆ ಮಾಡ್ಕೊಂಡು ಬಿಳಿ ಕುದುರೆಮೇಲೆ ಕರ್ಕೊಂಡೋಗ್ತಾನೆ ಗೊತ್ತಾ” ಅಂತಿದ್ರಂತೆ.
     ಪಾಪದ ಅಜ್ಜಿ, ಹಳೇ ಕಾಲ್ದವ್ರಲ್ವ. ಹತ್ನೇಕ್ಲಾಸೇ ದೊಡ್ಡ ಓದು ಅನ್ನೋ ಅಭಿಪ್ರಾಯದಲ್ಲಿ ಹಾಗಂದಿದ್ರೋ ಏನೋ. ದಿನಾ ಕಥೆಗಳಲ್ಲಿ ಬರೋ ರಾಜಕುಮಾರನಿಗೆ ಆಲ್ರೆಡೀ ಫಿದಾ ಆಗಿದ್ದ ನಮ್ಪದ್ದಿ ಅದ್ನೆಲ್ಲಾ ಗಮನ್ಸೋ ಸ್ಥಿತಿಲಿರ್ಲಿಲ್ಲ. ಓದಿನ ವಿಷ್ಯದಲ್ಲೂ ತುಸು ಪೆದ್ದಿಯೇ ಆದ ಪದ್ದಿ ನಾವು ಗೆಳತಿಯರೆಲ್ಲಾ ಅದೆಷ್ಟೇ ಚುಡಾಯ್ಸಿದ್ರೂ, ಕಾಲೆಳೆದು ಗೋಳಾಡ್ಸಿದ್ರೂ ಮುಂದೊಂದಿನ ರಾಜ್ಕುಮಾರ ಕುದುರೆಮೇಲೆ ಬಂದೇ ಬರ್ತಾನೆ, ತನ್ನ ಮದ್ವೆ ಆಗೇ ಆಗ್ತಾನೆ ಅಂತ ಬಲವಾಗಿ ನಂಬ್ಕೊಂಡಿದ್ಲು.
     ಆದ್ರೇನ್ಮಾಡೋದು. ಲೈಫನ್ನೋ ಲೈಫು ಐಸ್ಕ್ರೀಮ್ ಪಾರ್ಲರ್ರಲ್ವಲ್ಲಾ ನಮ್ಗೆ ಬೇಕಾದ ಫ್ಲೇವರ್ ಮಾತ್ರ ಆರಿಸ್ಕೊಳ್ಳೋಕೆ. ಪದ್ದಿ ಅಪ್ಪನ ವ್ಯಾಪಾರ ಮುಳ್ಗೋಗಿದ್ದೂ ಸ್ಕೂಲು ಬಿಡ್ಸಿ ಪದ್ದೀನ ದೂರದ ಹಳ್ಳೀಗೆ ಕರ್ಕೊಂಡು ಹೋಗಿದ್ದೂ ನಾವೆಲ್ಲ ಕಣ್ಣು ಮಿಟುಕ್ಸೋಷ್ಟ್ರಲ್ಲೆ ನಡ್ದೋಗಿತ್ತು. ಪದ್ದೀ,ಅವ್ಳ ಕನ್ಸುಗಳೂ,ಅಜ್ಜಿ ಕಥೆಗಳೂ,ಎಲ್ಲವೂ ನಮ್ಮಿಂದ ದೂರಾಗ್ಹೋಗಿದ್ವು.
     ಮೊನ್ನೆ ಸುಡುಸುಡು ಬಿಸ್ಲಲ್ಲಿ ಮಾರ್ಕೆಟ್ಟಿಂದ ಬರ್ತಾ ಯಾರೋ ನನ್ಹೆಸ್ರು ಕೂಗ್ದಂಗಾಯ್ತು. ತಿರ್ಗಿದ್ರೆ ಅದೇ ಪದ್ದಿ! ಉಸಿರಾಡ್ದೇ ಬಡಾಬಡಾ ಮಾತಾಡ್ತಿದ್ದಾಳೆ! “ಮಂದಾ ಮಂದಾಂತ ಗಂಟ್ಲರ್ಕೊಂಡು ಸತ್ನಲ್ಲೇ, ನನ್ಗುರ್ತಾಗ್ಲಿಲ್ವೆನೆ? ನಾನೇ ಪದ್ಮಾವತಿ, ಹೆಂಗಿದಿಯವ್ವಾ ಮಂದಾ?” ಇನ್ನೂ ಅದೆಷ್ಟು ಪ್ರಶ್ನೆ ಕೇಳ್ತಿದ್ಲೋ ಏನೋ ಅಷ್ಟ್ರಲ್ಲೇ ಅವಳ ಬಗ್ಲಲ್ಲಿದ್ದ ಕೂಸು ಅಳೋಕೆ ಶುರುಮಾಡ್ತು.
   ಸಿಕ್ಕಿದ್ದೇ ಛಾನ್ಸೂಂತ ನಾನು ರ್ಯಾಪಿಡ್ ಫಯರಿಂಗ್ ಶುರುಮಾಡಿದ್ದೆ. “ಅಯ್ಯೋ! ಪದ್ದಿ ಅಲ್ವ! ಇದೇನೇ! ಎಲ್ಲೇ ಕಳ್ದ್ಹೋಗಿದ್ದೆ ಇಷ್ಟು ವರ್ಷ! ಇದ್ಯಾರ್ದೇ ಮಗು! ನಿಂದಾ? ಕಡೆಗೂ ಸಿಕ್ಬಿಟ್ನಾ ನಿನ್ ರಾಜ್ಕುಮಾರಾ?”
ಸರಿ, ಇಬ್ರೂ ಮಾತಾಡೋ ಉತ್ಸಾಹದಲ್ಲಿದ್ವಿ; ಬಿಸ್ಲು ಜೋರಿತ್ತು. ಅಲ್ಲೇ ಕೂಲ್ ಜಂಕ್ಷನ್ಗೆ ನುಗ್ಗಿ ಜ್ಯೂಸ್ ಕುಡಿತಾ ಮಾತಾಡೋಣ ಅಂದ್ಕೊಂಡ್ವಿ.
     ನಾನು “ಹೇಗಿದೀಯೆ ಪದ್ದು” ಅನ್ನೋದ್ನೇ ಕಾಯ್ತಿದ್ಲೇನೋ ಮಹರಾಯ್ತಿ, ಪುರಾಣ ಶುರುವಿಟ್ಲು-“ಅಯ್ಯೋ ಬಿಡವ್ವ.ಯಾಕ್ಕೇಳ್ತಿಯ ಗೋಳ್ನ.ಸ್ಕೂಲ್ಬಿಡುಸ್ಕೊಂಡು ಹಳ್ಳಿಗ್ ಕರ್ಕೊಂಡೋದ್ರಾ, ಅಲ್ಲಿ ಗೋರ್ಮೆಂಟ್ ಸ್ಕೂಲಿತ್ತು, ಹೋಗ್ತಾಯಿದ್ದೆ.ಆ ಸ್ಕೂಲಾಗೆ ನನ್ನಷ್ಟು ಓದೋರೂ ಯಾರೂ ಇರ್ಲಿಲ್ಲ.ಜಾಣೆ ಅನ್ಸ್ಕೊಂಡಿದ್ದೆ. ಹತ್ನೇಕ್ಲಾಸು ಸೂಪರ್ರಾಗಿ ಪಾಸ್ಮಾಡಿ ಕುದ್ರೆ ಹತ್ತೋಣಾಂದ್ಕೊಂಡಿದ್ದೆ.ಹತ್ನೇ ಕ್ಲಾಸೇನು ಒಂಭತ್ನೂ ಪಾಸ್ಮಾಡಕ್ ಬಿಡ್ಲಿಲ್ಲ ಮನೆವ್ರು. ನಮ್ಮಾವ ಇದಾನಲ್ಲಾ ನಮ್ಮಾವಾ, ಅದೆ ಕಣೇ ನಮ್ಮಜ್ಜಿ ಕಡೇ ಮಗಾ… ನಾ ಪದ್ದಿನೇ ಮದ್ವೆ ಆಗ್ತಿನಿ ಅಂತ ಕುಂತ್ಬಿಟ್ಟಿದ್ದ. ನಮ್ಮಜ್ಜಿ ಬೇರೆ ಮಗನ್ಮದ್ವೆ ನೋಡ್ಬುಟ್ಟೇ ಸಾಯದು ಅಂತ ಕೂತಿತ್ತು. ಅಜ್ಜಿನ ನೆಮ್ದಿಯಾಗ್ ಕಳುಸ್ಬೆಕು ಅಂತ ಎಲ್ರೂ ನಂಗೆ ಬಲ್ವಂತ ಮಾಡಿ ಮದ್ವೆ ಮಾಡ್ಸೇಬಿಟ್ರು ನೋಡವ್ವ” ಅಂದು ನಿಟ್ಟುಸ್ರಿಟ್ಲು.
    “ಹೌದಾ ಪದ್ದು, ನಿನ್ನ ಯಾವಾಗ್ಲೂ ನೆನ್ಸ್ಕೊತಿದ್ವಿ ಕಣೇ ನಾವೆಲ್ಲ, ರಾಜ್ಕುಮಾರ ಸಿಗ್ಲಿಲ್ಲ ಅಂತ ನೊಂದ್ಕೊಬೇಡ, ಸುಖ್ವಾಗಿರು ಕಣೇ” ಅಂದೆ. ಯಾಕೋ ನಂಗೆ ಪದ್ದಿನ ನೋಡಿ ‘ಛೆ, ಪಾಪ’ ಅನ್ಸ್ತಿತ್ತು.’ ಅದು ಪದ್ದಿಗೂ ಗೊತ್ತಾಯ್ತು ಅನ್ಸುತ್ತೆ,                “ಏನ್ಗೊತ್ತಾ ಮಂದೂ,  ನಾನೂ ರಾಜ್ಕುಮಾರ ಸಿಗ್ಲಿಲ್ಲಾಂತ ಒಂದಷ್ಟು ದಿನ ಬೇಜಾರ್ ಮಾಡ್ಕೊಂಡಿದ್ದೆ. ಆದ್ರೆ ಮಾವ ಚನಾಗೇ ನೊಡ್ಕೋತಾನೆ, ಪ್ರೀತಿ ಮಾಡ್ತನೆ, ಎಲ್ಲಾ ಅನ್ಕೂಲ್ವಾಗೇ ಇದೇ ಅನ್ಸೋಕ್ಷುರುವಾಯ್ತು. ಆಮೇಲೆ ಬೇಜಾರು,ಅಸಮಾಧನಾ ಎಲ್ಲಾ ಹೊಂಟೋಯ್ತು ನೋಡವ್ವ. ಈಗಂತೂ ಮಾವ ಬಿಳಿ ಸ್ಕೂಟಿ ತಗೊಂಡಾನೆ, ಅದೇ ಕುದ್ರೆ ಹೋದಂಗೋಗ್ತದೆ. ಅಜ್ಜಿ ಹೇಳಿದ್ದು ಒಂಥರಾ ನಿಜಾ ಆತ್ನೋಡು” ಅಂತ ನಕ್ಕುಬಿಟ್ಲು.  “ಭಲೇ ಪದ್ದಿ, ಬೇಕಾಗಿದ್ದು ಸಿಗ್ಲಿಲ್ಲಾಂತ ಅಳ್ದೇ ಸಿಕ್ಕಿದ್ರಲ್ಲೇ ಖುಷಿ ಕಾಣ್ತಾಳಲ್ಲ” ಅನ್ಸಿ ಪದ್ದು ಮೇಲೆ ಸಕತ್ ಲವ್ ಬಂತು. ಅವ್ಳುನ್ನೂ ಅವ್ಳ ಕೂಸುನ್ನೂ ಮುದ್ಮಾಡಿ ಬೀಳ್ಕೊಟ್ಟೆ.
    ಪದ್ದು ಕಣ್ಣಿಂದ ಮರೆಯಾದಷ್ಟೂ ಮನಸ್ಸಿಗೆ ಹತ್ರವಾಗ್ತಾಯಿದ್ದಳೆ. ನಾವೆಲ್ರೂ ಅಷ್ಟೇ ಅಲ್ವಾ .. ಕನ್ಸಲ್ಲಿ ಕಾಣೋ ಖೀರಿಗಿಂತ ಕಣ್ಣೆದ್ರಿರೋ ಗಂಜಿ ನೀರು ಉತ್ತಮ ಅನ್ನೋದ್ನ ಕೆಲವೊಮ್ಮೆ ಮರ್ತೇಬಿಡ್ತೀವಿ. ದೊಡ್ಡ ಗುರಿ ಇಟ್ಕೊಂಡು ಅದ್ಕೋಸ್ಕರ ಶ್ರಮವಹಿಸೋದು ಒಳ್ಳೇದೇ ಆದ್ರೂ just in case ಕನಸು ಕೈಗೂಡದಿದ್ರೆ ಸುಮ್ನೆ ಕೊರಗಿ ಜೀವ್ನ ನರ್ಕ ಮಾಡ್ಕೊಳೋದ್ಕಿಂತ ಇರೋ ಪರಿಸ್ಥಿತಿ ಅನುಕೂಲಕರವಾಗಿದ್ದಲ್ಲಿ ಹೊಂದ್ಕೊಳ್ಳೋದೇ ಜಾಣ್ಮೆ ಅಲ್ವಾ. ನಮ್ಪದ್ದಿ ಜಾಣೆ,”I am beginning to learn that it is the sweet, simple things of life which are the real ones after all “ಅನ್ನೋ ನನ್ನ ಮೆಚ್ಚಿನ ಲೇಖಕಿ ಲಾರಾ ಇಂಗಲ್ಸಳ ಮಾತುಗಳಿಗೆ  ಪದ್ದಿ ಜೀವಂತ ಉದಾಹರಣೆ ಅನ್ನಿಸ್ತಿದ್ದಾಳೆ.   
      ಈಹೊತ್ತು ಇದನ್ನೆಲ್ಲಾ ನೆನಪಿಸ್ಕೊಂಡು ಬರೀತಾಯಿದ್ರೆ ಮನಸ್ಸಿನ ಮೂಲೆಲಿರೋ ಹಳೇ ಕೆಟ್ಹೋದ  ಗ್ರಾಮಫೋನೊಳಗಿಂದ ಕೈಲಾಶ್ಖೇರ್ ಒಂದೇ ಸಾಲನ್ನೇ ಪದೇಪದೇ ಕಿರಿಚ್ತಾಯಿದ್ದಾರೆ……ಯಾವ್ಹಾಡೂಂದ್ರಾ….ಅದೇ… ಊರಿಗೊಬ್ಳೇ ಪದ್ಮಾವತೀsssssss

ತಪ್ಪು ಮಾಡದವ್ರ್ ಯಾರವ್ರೇ.. ತಪ್ಪೇ ಮಾಡದವ್ರ್ ಎಲ್ಲವ್ರೆ

ಈಗ್ಗೆ ಇಪ್ಪತ್ತು ವರ್ಷಗಳಷ್ಟು ಹಿಂದಿನ ಮಾತಿದು. ಮೊಬೈಲ್ ಅಲ್ಲ ಲ್ಯಾಂಡ್ ಫೋನ್(ಸ್ಥಿರ ದೂರವಾಣಿ) ಕೂಡಾ ಅಲ್ಲೋ ಇಲ್ಲೋ ಒಂದೊಂದು ಮನೆಗಳಲ್ಲಿ ಮಾತ್ರ ಇದ್ದ, ರೇಡಿಯೋ ಇನ್ನೂ ತನ್ನ ವರ್ಚಸ್ಸು ತಕ್ಕಮಟ್ಟಿಗೆ ಉಳಿಸಿಕೊಂಡಿದ್ದ  ದಿನಗಳು. ಮನೆಯ ಮುದ್ದಿನ ಮಗಳಾಗಿ, ಅಜ್ಜ-ದೊಡ್ಡಮ್ಮಂದಿರ ಅಕ್ಕರೆಯ ಮೊಮ್ಮಗಳಾಗಿ ತುಂಬಾ ಸಮೃದ್ಧವಾಗಿದ್ದ ಬಾಲ್ಯ ನಂದು.
    ಮಕ್ಕಳಿಂದ ಸದಾ ಸೀರಿಯಸ್ನೆಸ್ ಒಂದನ್ನೇ ಅಪೇಕ್ಷಿಸಿದ ನನ್ನಜ್ಜ ಮೊಮ್ಮಕ್ಕಳಿಂದ ತುಂಬಾ ಚಟುವಟಿಕೆ, ತುಂಟತನಗಳನ್ನು ಬಯಸಿ, ಆನಂದಿಸುತ್ತಿದ್ದರು. ಮಕ್ಕಳು ಹೊರಗಿನ ತಿಂಡಿ, ಚಾಕ್ಲೇಟ್ ಇತ್ಯಾದಿ ತಿನ್ನದೇ ಆರೋಗ್ಯವಾಗಿ ಬೆಳೆಯಲಿ ಎಂದು ಅಪ್ಪನ ಆಸೆಯಾದರೆ; ‘ಕಲ್ಲು ತಿಂದು ಅರಗಿಸಿಕೊಳ್ಳೊ ವಯಸ್ಸಿದು, ಚಾಕ್ಲೇಟೊಂದು ಯಾವ್ಲೆಕ್ಕ, ತಿನ್ಲಿ ಪಾಪ’ಅನ್ನೊದು ಅಜ್ಜನ ಅಭಿಪ್ರಾಯ.
     ತಿಂಡಿ, ಚಾಕ್ಲೇಟ್ ತರೋ ಅಜ್ಜ ಅದನ್ಯಾವತ್ತೂ ನನ್ಕೈಗೆ ಕೊಟ್ಟಿದ್ದಿಲ್ಲ. ನಾನಾಗೇ ಅವರ ಸರಕುಗಳ ಮಧ್ಯ ಹುಡುಕಿ ಕಳ್ಳತನದಲ್ಲಿ ತಿಂದು, ಏನೂ ಗೊತ್ತಿಲ್ಲದಂತಿರೋದೂ, ಆಮೇಲವ್ರು ‘ಅಯ್ಯೋ ನನ್ ಚಾಕ್ಲೆಟ್ ಕದ್ಲೂ’ ಅಂತ ಸುಮ್ನೆ ತಗಾದೆ ತೆಗ್ಯೋದೂ ನಮ್ಮಿಬ್ಬರ ನಡುವಿನ ಆಟದಂತಾಗಿ ಹೋಗಿತ್ತು.
      ಹೀಗಿರುವಾಗ ಬ್ಯಾಂಕ್ ಉದ್ಯೋಗಿಯಾದ ನನ್ನಪ್ಪನಿಗೆ ದೂರದೊಂದು ಹಳ್ಳಿಗೆ ವರ್ಗವಾಗಿ ಅಮ್ಮ, ಅಣ್ಣ, ನಾನು ಎಲ್ಲರೂ ಆ ಊರಿನಲ್ಲೇ ಇರೋಹಾಗಾಯ್ತು. ಹಳ್ಳಿ ಅದೆಷ್ಟು ಪುಟ್ಟದಿತ್ತೆಂದ್ರೇ ಅದಕಿದ್ದಿದ್ದೇ ನಾಲ್ಕೋ ಐದೋ ಬೀದಿಗಳು. ಬೇಗನೇ ಹೊಸ ಜಾಗಕ್ಕೆ ಹೊಂದಿಕೊಂಡ ನಾನು ಸ್ಕೂಲು, ಗೆಳತಿಯರ ಮನೆ, ಅಪ್ಪನ ಬ್ಯಾಂಕ್ ಹೀಗೆ ಸಂಪೂರ್ಣ ಸ್ವಚ್ಛಂದವಾಗಿ ತಿರುಗಾಡಿಕೊಂಡಿದ್ದ ಸೊಗಸಾದ ದಿನಗಳವು….ಆಹ್!                   
  ಹಾಗೆ ತಿರುಗಾಡೋ ದಿನಗಳಲ್ಲೇ ಕಣ್ಣಿಗೆ ಮೋಡಿಮಾಡಿ ತನ್ನೆಡೆ ಸೆಳೆದುಕೊಂಡಿದ್ದು ಒಂದು ಪುಟ್ಟ ಗೂಡಂಗಡಿ. ಸುಮ್ಮನೇ ಕುತೂಹಲಕ್ಕೆ ಹತ್ತಿರ ಹೋದೆ ಅಷ್ಟೇ. ಕೊಬ್ಬರಿ ಮಿಠಾಯಿ, ಶುಂಠಿ ಪೆಪ್ಪರ್ಮೆಂಟ್, ಹತ್ತಿ ಮಿಠಾಯಿ, ಬೆಣ್ಣೆ ಮುರುಕು, ಹುಣಸೆಯ ಕುಟ್ಟುಂಡೆ, ಪಾನ್ ಪಸಂದ್, ಕಠ್ಟಾಮೀಠಾ, ಜೀರಿಗೆ ಪೆಪ್ಪರ್ಮೆಂಟ್, ಸಕ್ಕರೆ ಅಚ್ಚು, ಬಣ್ಬಣ್ಣದ ಲಾಲಿಪಾಪ್ಗಳೂ… ಓಹ್, ಕೊನೆಮೊದಲಿಲ್ಲದ ಸ್ವರ್ಗವೇ ಇಲ್ಲಿ ಗಾಜಿನ ಡಬ್ಬಿಗಳಲ್ಲಿ ತುರುಕಿಡಲ್ಪಟ್ಟಿವೆ.
         ಅಪ್ಪನ ‘ಕುರುಕು ತಿಂಡಿ ವಿರೋಧಿ’ ತತ್ವಕ್ಕೂ, ಗೂಡಂಗಡಿಯ ಸ್ವರ್ಗಕ್ಕೂ ಘರ್ಷಣೆ ಶುರುವಾಯ್ತು ನನ್ನ ಮನಸ್ಸಿನಲ್ಲಿ. ಗೆದ್ದಿದ್ದು ಗೂಡಂಗಡಿಯೆ ಎಂದು ಬೇರೆ ಹೇಳಬೇಕಿಲ್ಲ ತಾನೇ. ಹೆಚ್ಚೇನೂ ಬೇಡ, ಎಲ್ಲಾ ತಿಂಡಿಗಳನ್ನೂ ಒಂದೊಂದು ಸಾರಿ ಮನಸಾ ಸವಿಯಬೇಕೆಂದಷ್ಟೇ ಆಗಿತ್ತು ನನ್ನಾಸೆ.
        ಅಪ್ಪನನ್ನೊ ಅಮ್ಮನನ್ನೋ ಕೇಳೋದು ವ್ಯರ್ಥ ಪ್ರಯತ್ನ ಎನ್ನೋದು ಹೇಗೂ ಗೊತ್ತಿದ್ದ ವಿಷಯ.ಪಾಕೆಟ್ಮನಿ ಅನ್ನೋದು ಆಗಿನ್ನೂ ಚಾಲ್ತಿಗೆ ಬರುತ್ತಿದ್ದ ,ಮಧ್ಯಮವರ್ಗಕ್ಕೆ ಲಗ್ಝುರಿ ಎನಿಸಿಕೊಂಡ ದಿನಗಳವು.ನಮ್ಮಲ್ಲಂತೂ ಆ ಅಭ್ಯಾಸ ಇರಲಿಲ್ಲ. ಅಗತ್ಯ ವಸ್ತುಗಳೆಲ್ಲಾ  ಅಪ್ಪ ಅಮ್ಮನೇ ಕೊಂಡು ಕೊಡುತ್ತಿದ್ದ ಕಾರಣ ನಮಗೂ ಅಲ್ಲಿಯವರೆಗೆ ದುಡ್ಡನ್ನು ಹೊಂದೋ ಅಗತ್ಯವೇ ಇರಲಿಲ್ಲ. ಆದರೆ ಈಗ ಅಗತ್ಯ,ಅನಿವಾರ್ಯ, ಅತ್ಯಾಸೆ ಎಲ್ಲವೂ ಒಟ್ಟಾಗಿತ್ತು. ಅಜ್ಜನ ಚಾಕ್ಲೇಟ್ ಕದ್ದ ಅನುಭವವೂ ಜೊತೆಗಿತ್ತು. ಸರಿ, ದಿನಾ ಒಂದೋ ಎರಡೋ ರೂಪಾಯಿಗಳನ್ನ ಕದಿಯೋ ಕೆಲಸ ಶುರು ಮಾಡಿದೆ.
        ದಿನಾ ಗೆಳತಿ ಮನೆಗೆ ಅನ್ನೋದು, ಗೂಡಂಗಡಿಗೆ ಹೋಗೋದು.ನಮೂನೆ ಸಿಹಿತಿಂಡಿ ತಿನ್ನೋದು. ಸೂಕ್ಷ್ಮಮತಿ ಅಮ್ಮನಿಗೆ ನನ್ನ ನಾಲಿಗೆ ಬಣ್ಣವಾಗಿರೋದೂ, ಬಾಯಿಂದ ತಿಂಡಿಯ ಘಮ ಹೊಮ್ಮೋದೂ, ಇಷ್ಟಿಷ್ಟೇ ದುಡ್ಡು ಇಟ್ಟಲ್ಲೇ ಮಾಯವಾಗೋದೂ ಗೊತ್ತಾಗ್ತಿತ್ತು. ಗಂಭೀರವಾಗಿ ನೀತಿಕಥೆ ಓದೋ ಮಗಳು ಕಳ್ಳತನ ಕೂಡಾ ಮಾಡಬಹುದು ಎಂಬ ಕಲ್ಪನೆ ಇಲ್ಲದ ಕಾರಣ ನನ್ನ ಈ ಸಣ್ಣ “ಅಡ್ವೆಂಚರ್” ಯಾವುದೇ ತಡೆಯಿಲ್ಲದೆ ಒಂದಷ್ಟು ದಿನ ನಡೆಯಿತು.
       ಕಳ್ಳತನ, ಹೇಳಿದ ಸುಳ್ಳುಗಳು ಹೆಚ್ಚು ದಿನ ಮುಚ್ಚಿಡೋದು ಎರಡೂ ಕಷ್ಟದ ಕೆಲಸಗಳು. ಕಡೆಗೂ ಇದಕ್ಕೆಲ್ಲಾ ಒಂದಂತ್ಯ ಬಂದೇ ಬಿಡ್ತು. ಚಿಲ್ಲರೆ ಕಾಯಿನ್ಗಳೊಂದಿಗೆ ರೆಡ್ ಹ್ಯಾಂಡಾಗೇ ಸಿಕ್ಕಿಬಿದ್ದೆ. ನಂಗಿನ್ನೂ ನೆನ್ಪಿದೆ. ಒಂದೈದು ನಿಮಿಷಗಳು ಶಾಕ್ನಲ್ಲಿದ್ದೆ. ನಾನೆಷ್ಟು ಶಾಕ್ನಲ್ಲಿದ್ನೋ ಅಷ್ಟೇ ಶಾಕ್ ಅಪ್ಪ ಅಮ್ಮನ ಮುಖದಲ್ಲೂ ಇತ್ತು ಅನ್ನಿಸುತ್ತೆ. ಶಾಕ್ ಕಳೆದ ಮೇಲೆ ಮುಂದೇನಾಗತ್ತೋ ಅಂತ ತುಂಬಾ ಭಯವಾಗ್ತಿತ್ತು.
         ಸ್ವಲ್ಪ ಹೊತ್ತು ಸುಮ್ಮನಿದ್ದ ಅಪ್ಪ ನಿಧಾನವಾಗಿ ದುಡ್ಡು ಕದ್ದ ಕಾರಣ ಕೇಳಿದ್ರು. ನನ್ನ ತಿಂಡಿ ಪುರಾಣ ಕೇಳಿ ಮನದಲ್ಲೇ ಏನೇನೋ ಚಿಂತೆ ಮಾಡ್ತಿದ್ರು. “ತಿಂಡಿಗೆ ಆಸೆಪಡೋದು ತಪ್ಪಲ್ಲ ಪುಟ್ಟಿ, ಆದ್ರೆ ಅದೆಲ್ಲ ಕ್ಲೀನಾಗಿರುತ್ತಾ, ಆರೋಗ್ಯಕ್ಕೆ ಒಳ್ಳೆದಾ ಅನ್ನೋದಷ್ಟೇ ನಮ್ಗೆ ಯೋಚ್ನೆ. ದುಡ್ಡು ತೆಗ್ದಿದ್ದು……..ಹೂ.. ತಪ್ಪು ಅಂತ ಗೊತ್ತಿದ್ದೂ ಮಾಡಿದೀಯ. ನಿಂಗೆ ಶಿಕ್ಷೆ ಕೊಟ್ಟು ಏನುಪ್ಯೋಗ, ಇನ್ನಾದ್ರೂ ನೀ ಹಿಂಗೆಲ್ಲ ಮಾಡಲ್ಲ ಅಂದ್ಕೊಂತಿನಿ.ದುಡ್ಡಿಡೋ ಜಾಗ ಬದ್ಲಾಯ್ಸಲ್ಲ ನಾನೀಗ. ನಿನ್ನ ನಂಬಬೇಕು ಅನ್ನೋ ನಿರ್ಧಾರ ಬದ್ಲಾಗೋ ಹಾಗ್ಮಾಡ್ಬೇಡ.” ಅಂತಷ್ಟೇ ಹೇಳಿದ್ರು.
          ಹೇಳಿದ ಅಪ್ಪ, ಅದಕ್ಕೆ ಸಾಕ್ಷಿಯಾದ ಅಮ್ಮ ಆ ಘಟನೆನ ಪೂರ್ತಿ ಮರ್ತೇಬಿಟ್ಟಿರಬೇಕು. ನಾನು ಮಾತ್ರ ಯಾವ್ದೊಂದನ್ನೂ ಮರೆತಿಲ್ಲ. ಮತ್ತೆ ಇನ್ಯಾವತ್ತೂ ಕದಿಯೋ ಯೋಚನೆ ಕೂಡಾ ಬರ್ಲಿಲ್ಲ ನನ್ತಲೆಗೆ. ಡಿಯರ್ ಅಪ್ಪಾ; ನಿಮ್ಮ ನಂಬಿಕೆಯೇ ನನಗೆ ನೀವಿತ್ತ ಶ್ರೀರಕ್ಷೆ.
             ………………………………….
      ಉಪ್ಪs ತಿಂದs ಮ್ಯಾಲೆ ನಿರs ಕುಡಿಯಲೇ ಬೇಕು.
ತಪ್ಪs ಮಾಡಿದಮ್ಯಾಲ ಶಿಕ್ಷೆ ಅನುಭವಿಸಲೆ ಬೇಕು..
   ,ಹೌದಾ! ನಿಜಾನಾ? ಅನ್ನಿಸುತ್ತದೆ ಈ ಹಾಡು ಕೇಳಿದಾಗಲೆಲ್ಲ. ಉಪ್ಪು ನೀರಿನ ವಿಷಯದಲ್ಲಿ ಯಾವ ಅನುಮಾನ ಕೂಡ ಇಲ್ಲ ನಂಗೆ. ಆದ್ರೆ ತಪ್ಪಿಗೆಲ್ಲಾ ಬರೀ ಶಿಕ್ಷೆಯೊಂದೇ ಅಂತಿಮ ಅಲ್ಲ. ತಪ್ಪಿಗೆ ಶಿಕ್ಷೆ ಕೊಡೋ ಮೂಲ ಉದ್ದೇಶ ತಪ್ಪಿನ ಬಗೆಗೆ ಅರಿಕೆ ಮೂಡ್ಸೋದೂ, ಪಶ್ಚಾತಾಪ ಹಾಗೂ ಪ್ರಾಯಶ್ಚಿತ ಮಾಡ್ಕೊಳೋವಂತೆ ಮನಪರಿವರ್ತಿಸೋದೂ ಆಗ್ಬೇಕೇ ಹೊರತು ಬರಿಯ ಕಾಟಾಚಾರದ ಕ್ರಮದಂತೆ ಒಂದು ಶಿಕ್ಷೆ ಅಂತ ಕೊಡೋದೂ, ಹೊಡಿ-ಬಡಿ-ಕೊಲ್ಲುಗಳಂಥಾ ಶಿಕ್ಷೆಗಳೂ ಯಾವ ಉಪ್ಯೋಗನೂ ಇಲ್ಲ ಅಂತ ನನ್ನಭಿಪ್ರಾಯ. 
      ಶಿಕ್ಷೆ ನಮ್ಮಲ್ಲಿ ಭಯ ಮೂಡಿಸೋದು, ಆ ಮೂಲಕ ತಪ್ಪು ದಾರಿಗೆ ಹೋಗದಂತೆ ತಡೆಯೋದೂ ಒಂದು ಹಂತದವರೆಗೆ ಒಳ್ಳೆಯದೇ. ಆದರೆ ಅದು ತಾತ್ಕಾಲಿ ಅಷ್ಟೇ.ಮನಸ್ಸಿಗೆ ಹೇರಿರೋ ಭಯ ಇಲ್ಲವಾದಾಗ ಮತ್ತದೇ ತಪ್ಪು ಮಾಡೋ ಆಸೆ ನಮ್ಮಲ್ಲುಂಟಾದ್ರೆ ಅಲ್ಲಿಗೆ ಭಯಪಡಿಸೋ ಶಿಕ್ಷೆಯ ಉದ್ದೇಶ ವ್ಯರ್ಥವಾದಂತೇ. ಅದರ ಬದಲು ತಪ್ಪು ಅಂತ ಕೆಲವು ಕೆಲಸಗಳನ್ನು ಯಾಕೆ ಕರೀತೀವೋ, ಅದನ್ನು ಮಾಡೋದರಿಂದ ನಮಗೂ, ಇತರರಿಗೂ ಯಾವರೀತಿ ತೊಂದರೆ,ಅನಾನುಕೂಲ ಆಗಬಹುದೋ ಅನ್ನೋದನ್ನ ಎಳವೆಯಿಂದಲೇ ಮಕ್ಕಳಿಗೆ ತಿಳಿಹೇಳೋದು, ನಾವೂ ಸಾಧ್ಯವಾದಷ್ಟು ಸೂಕ್ತ ಮಾರ್ಗದಲ್ಲಿ ಜೀವಿಸಿ ಕಿರಿಯರಿಗೆ ಮಾದರಿಯಾಗೋದು ಉತ್ತಮ ಅಲ್ಲವೇ…

ಚಿಂಟುವಿಗೊಂದು ಪತ್ರ

ಮುದ್ಮರಿ ಚಿಂಟೂ,
ಕಥೆಗಳಂದ್ರೇ ಪ್ರಾಣ ತಾನೇ ನಿನ್ಗೆ. ಇಗೋ ಒಂದು ಕಥೆ ಹೇಳೋಣಾನ್ಸ್ತಿದೆ.ಕೇಳು-
     ಒಂದೂರು, ಅಲ್ಲೊಬ್ಳು ಶಾಪಗ್ರಸ್ತ ಹುಡುಗಿ. ಕುರೂಪದ ಮುಖ ಅವ್ಳ ಶಾಪ ಆದ್ರೆ ಆ ಕುರೂಪದ ಸಹಿತಾ ಅವ್ಳನ್ನ ಒಪ್ಪಿ,ಪ್ರೀತ್ಸೋರು ಆ ವಿಮೋಚನೆಯ ಕೀ. ಶಾಪ ಹೊತ್ಗೊಂಡು ಬದ್ಕೋಕಾಗುತ್ತಾ. ಸರಿ, ಮನೆಮಂದಿತೆಲ್ಲಾ ಸೇರಿ ಅವ್ಳು ಶಾಪ ವಿಮೋಚಕ ಆ ಪ್ರೇಮಿ ಯಾರೋ ಅಂತ ಹುಡುಕ್ತಾಯಿರ್ತಾರೆ. ಹುಡ್ಗಿನೋ ಸಕಲ ವಿದ್ಯಾ ಪಾರಂಗತೆ, ಬುದ್ಧಿವಂತೆ, ಸದ್ಗುಣಿ. ಆದ್ರೂ ಅವ್ಳಿಗೆ ತನ್ನ ಬಗ್ಗೆ ತನ್ನ ಕುರೂಪಿನ ಬಗ್ಗೆ ತುಂಬಾ ಕೀಳರಿಮೆ, ಅಸಮಧಾನ. ತನ್ನದಲ್ಲದ ತಪ್ಪಿಗೆ ತಾನು ಶಿಕ್ಷೆ ಅನುಭವಿಸ್ತಿದಿನಿ, ಯಾರಾದ್ರೂ ನನ್ನ ಪ್ರೀತ್ಸಿ, ಈ ಶಾಪದಿಂದ ಮುಕ್ತಿ ಕೊಡ್ಸಿ ಅಂತ ಕಂಡಕಂಡವ್ರ್ಹತ್ರ ಎಲ್ಲಾ  ಅಂಗ್ಲಾಚ್ತಾಯಿರ್ತಾಳೆ ಕಣೋ ಬಂಗಾರೂ, ಛೆ ಪಾಪ ಅಲ್ವಾ.
   ಹುಡುಗಿಯ ಒಳ್ಳೆ ಗುಣಗಳಿಗೆ ಎಷ್ಟೇ ಜನ ಮನಸೋತ್ರೂ ಆ ಕುರೂಪದಿಂದ ಯಾರೊಬ್ರೂ ಅವ್ಳುನ್ನ ಕೈಹಿಡೊಯೋ ಧೈರ್ಯ ಮಾಡೋದಿಲ್ಲ. ಅಕಸ್ಮಾತ್ ಈ ಶಾಪ-ಗೀಪ ಎಲ್ಲಾ ಸುಳ್ಳಾಗಿದ್ದು ಅವ್ಳು ಕುರೂಪಿಯಾಗೇ ಉಳ್ದುಬಿಟ್ರೆ! ಅನ್ನೋ ಆತಂಕ ಎಲ್ರಿಗೂ. ಕಡೆಗೊಬ್ಬ ಬಡಪಾಯಿ ಹುಡುಗನ್ನ ಎಲ್ರೂ ಸೇರಿ “ಅವ್ಳುನ್ನ ಮದುವೆ ಆಗು, ಪ್ರೀತ್ಸು, ಪಾಪ- ಈ ಶಾಪದಿಂದ ಮುಕ್ತಿ ಕೊಡು”ಅಂದು ಒಪ್ಪಿಸಿಯೂಬಿಡ್ತಾರೆ. ಮುಂದೇನಾಯ್ತು ಅಂತಿಯಾ ಕಂದಾ, ಕೇಳು…
     ಇನ್ನೇನು ಆ ಹುಡುಗ ಇವ್ಳನ್ನ ಮದುವೆಯಾಗ್ಬೇಕು, ತಾನು ಅವಳನ್ನ ಸ್ವೀಕರ್ಸ್ತೀನಿ ಅಂತ ಒಲ್ಲದ ಮನಸ್ನಿಂದಾನೇ ಘೋಷಣೆ ಮಾಡ್ಬೇಕು- ಊರೆಲ್ಲಾ ಆ ಹುಡುಗಿಯ ಶಾಪ ವಿಮೋಚನೆಯ ಡ್ರಾಮಾ ನೋಡೋಕೆ ಕುತೂಹಲದಿಂದ ನೆರೆದಿದ್ರೆ ಈ ಪಾಪದ ಹುಡುಗಿ ಮನ್ಸಲ್ಲಿ ನೂರು ತಲ್ಲಣಗಳು.
  “ಓಹ್, ಈಗ ಇವನು ನನ್ನನೊಪ್ಪಿಬಿಡ್ತಾನಾ, ನನ್ನ ಶಾಪ ಕಳ್ದು ಸುಂದರವಾದ ರೂಪ ನಂದಾಗುತ್ತಾ, ಹೇಗಿರ್ಬಹುದು ಆ ಹೊಸಾ ಮುಖ, ನಂಗೇ ಪರಿಚಯ ಇಲ್ಲದ್ದು, ಇಷ್ಟು ದಿನ ಕನ್ನಡಿಯಲ್ಲಿ ಕಾಣದ್ದು ಈಗ ನಂದಾಗುತ್ತಾ! ನನ್ನಸ್ಥಿತ್ವದ ದೊಡ್ಡ ಭಾಗ ಇಲ್ಲವಾಗುತ್ತಾ.. ಈಗಿನ ನಾನು ಇಲ್ಲವಾಗ್ತಿನಾ.. ಅಂತೆಲ್ಲಾ ಯೋಚಿಸ್ತಾ ಕೂಗಿ ಹೇಳ್ತಾಳೆ “ಬೇಡ ಬೇಡ, ನನ್ಯಾರೂ ಬದ್ಲಾಯ್ಸೊದ್ ಬೇಡ,ಈ ಕೆಟ್ಟ ರೂಪವೇ ನಂಗಿರ್ಲಿ, ನಾನ್ಹಿಗಿರೋದೇ ನಂಗಿಷ್ಟ.I love the way I am”
      ಆ ಕ್ಷಣ ಅವ್ಳು ಶಾಪವಿಮುಕ್ತ ಸುಂದರ ಹುಡುಗಿಯಾಗ್ತಾಳೆ.ಎಲ್ಲರೂ ಖುಷಿಯಾಗಿರ್ತಾರೆ, ಕಥೆ ಸುಖಾಂತವಾಗುತ್ತೆ blah blah blah…
     ಕಥೆಗೆ ಸುಖಾಂತ ಬೇಕೆನ್ಸಿದಾಗ ಕಥೆಗಾರನೋ ನಿರ್ದೇಶಕನೋ ಒದಗಿಸ್ತಾರೆ ಕಣೋ ಮರಿ(ಮೇಲಿನ ಕಥೆ ಕೂಡಾ ಒಂದು ಸಿನಿಮಾದ್ದು ಗೊತ್ತಾ) ಆದ್ರೆ ನಮ್ಮ ಬದುಕೇನೂ ಸಿನೆಮಾ ಅಲ್ಲ ಅಲ್ವ. ಸುಖ,ದುಃಖ ಎಲ್ಲದಕ್ಕೂ ನಾವೇ ಹೊಡ್ದಾಡ್ಬೇಕು ನೋಡು. ಏನೆಲ್ಲಾ ಕಷ್ಟಗಳ್ನೂ, ಹೋರಾಟಗಳ್ನೂ ಗೆಲ್ಲೋ ನಮ್ಗೂ ಕೂಡ ಸಾಕುಪ್ರಾಣಿಥರ ಮುದ್ಮಾಡಿ ಮನ್ಸಲ್ಲಿಟ್ಕೊಂಡಿರ್ತಿವಲ್ವ ಈ ಕೀಳರಿಮೆ ಅನ್ನೋ ಭೂತಾನಾ.. ಅದ್ನ ಗೆಲ್ಲೋದು;ಅಬ್ಬಬ್ಬಾ.. ಭೀಕರ ಯುದ್ಧ.
      ಮೊನ್ನೆ ‘ಪ್ರತಿಭಾ ನಂದಕುಮಾರ್’ರ ಆತ್ಮಕಥೆ “ಅನುದಿನದ ಅಂತರಗಂಗೆ”ಓದುವಾಗ ನನ್ನ ಚಕ್ಕನೆ ಹಿಡಿದು ನಿಲ್ಲಿಸಿದ ಸಾಲ್ಗಳಿವು ನೋಡು,” ನನ್ನಲ್ಲಿ ಆತ್ಮವಿಷ್ವಾಸದ ಕೊರತೆ. ಪಿಯೂಸಿಯಲ್ಲಿ ನನಗೆ ಎಂತಹ ಕೀಳರಿಮೆ ಇತ್ತು ಎಂದರೆ ಬದುಕೇ ಕರಾಳ ಎನ್ನಿಸುತ್ತಿತ್ತು”;”ಪ್ರೀತಿಸಲು ಸೌಂದರ್ಯ ಅತಿ ಮುಖ್ಯ ಎಂದು ಭ್ರಮಿಸಿದ್ದ ನಾನು ಯಾರೂ ನನ್ನನ್ನು ಪ್ರೀತಿಸಲಾರರು ಎಂದು ಬಲವಾಗಿ ನಂಬಿದ್ದೆ.”
   ಅಂಥಾ ಧೀಮಂತ ಕವಯಿತ್ರಿಗೂ ಎಳವೆಯಲ್ಲಿ ನನ್ನಂಥದೇ ಭಾವನೆಗಳು ಕಾಡಿದ್ದುವಲ್ಲ ಅಂತ ಆಶ್ಚರ್ಯ ಆಯ್ತು ಮಾರಾಯಾ. ನಾನಂತೂ ಪ್ರತಿ ಸಾರಿ ದೇವರ ಮುಂದೆ ನಿಂತಾಗ್ಲೂ ಭಕ್ತಿಯಿಂದ ಕೇಳ್ತಿದ್ದೆ “ದೇವ್ರೇ, ಮೂಗಿನ ಮೇಲಿರೋ ಈ ಕನ್ನಡಕಾನ ಹೇಗಾದ್ರೂ ತೊಲಗಿಸು. ನಕ್ರೆ ಹಲ್ಗಳು ಕಾಣೋಹಾಗ್ಮಾಡು..ಒಟ್ನಲ್ಲಿ  ನಾ ಚನ್ನಾಗ್ ಕಾಣೋ ಹಾಗ್ಮಾಡು, ಎಲ್ರೂ ಅಂಬೇಡ್ಕರ್, ಗಾಂಧಿ ಅಂತೆಲ್ಲಾ ಅಂತಾರೆ, ನಂಗ್ಯಾರೂ ಸೈಟೊಡಿಯಲ್ಲ ಕಣೋ ಭಗ್ವಂತಾ.. ಪ್ಲೀಸ್ ನನ್ನ ಚೂರೇ ಚೂರು ಚಂದ ಮಾಡು” ಅಂತ. ಸೌಂದರ್ಯಕ್ಕೆ ಸಿಗೋದು ಅಭಿಮಾನ ಮಾತ್ರ, ಉತ್ತಮ ನಡುವಳಿಕೆ, ವ್ಯಕ್ತಿತ್ವ, ಸ್ವಭಾವ ಇವುಗಳೇ ಪ್ರೀತಿಗೆ, ಬದುಕಿಗೆ ಮುಖ್ಯ ಅನ್ನೋದು ತಲೆಗೇ ಹೋಗೋಲ್ವಲ್ಲಾ ಆ ಅಡಲಸೆಂಟ್ ಏಜಿಗೆ… ನಗ್ತಿದ್ದೀಯಾ ಕೂಸೂ…
     ಹದಿವಯಸ್ಸೇ ಹಾಗೆ ಕಣೋ ಕಂದಾ, ಅಮುಖ್ಯವಾದುದ್ದನ್ನ ಮನ್ಸಿನ ಕೇಂದ್ರವಾಗಿಸಿ ಮುಖ್ಯವಾದದ್ದನ್ನೆಲ್ಲಾ ದೂರ ತಳ್ಳಿ ನಮ್ಮನ್ನ ಸತ್ವಪರೀಕ್ಷೆಗೋಳಪಡಿಸತ್ತೆ ನೋಡು. ತುಂಬಾ ಪ್ರೀತ್ಸೋ ಆತ್ಮೀಯರಿಗಿಂತ ಅದ್ಯಾರೋ ಫ್ರೇಮಲ್ಲೇ ಇಲ್ಲದ ಜೀವ ಹತ್ರ ಅನ್ಸೋಕೆ ಶುರುವಾಗತ್ತೆ. ಅವರ್ಯಾರದೋ ಅಂಗೀಕಾರಕ್ಕೆ, ಸಮ್ಮತಿಗೆ ಪಡಬಾರದ ಪಾಡು ಪಡೋಹಾಗೆ ಮಾಡುತ್ತೆ ಮನ್ಸು. ಹಾಗಾದಾಗ್ಲೇ ಬೇಡದ ವಿಷ್ಯಗಳಿಗೆ, ಅಂದ್ರೆ- ಬಾಹ್ಯ ರೂಪ, ಉಡುಗೆ-ತೊಡುಗೆ, ಉಪ್ಯೋಗ್ಸೋ ಗ್ಯಾಜೆಟ್ಸು, ಒಣ ಸ್ಟೇಟಸ್ಸು ಇಂಥವು ಮುಖ್ಯ ಆಗಿ ನಮ್ಮೊಳಗಿನ ಪ್ರತಿಭೆ, ಜಾಣ್ಮೆ, ಧೈರ್ಯ ಎಲ್ಲಾದನ್ನೂ ನಾವೇ ಕಡೆಗಣ್ಸಿ ಬಿಡ್ತಿವಿ ಗೊತ್ತಾ.
     ಮುಖ್ಯ ಏನ್ಗೊತ್ತಾ ಮುದ್ದಮ್ಮಾ; ನೀನು ಹೇಗಿದ್ದೀಯೋ ಹಾಗೆ ನಿನ್ನ ನೀನು ಪ್ರೀತ್ಸೊದು. ‘ಹೇ,ಅದ್ಯಾವ್ಮಹಾ’ ಅನ್ಬೇಡ. ನಿನ್ನ ನೀನು ಸಂಪೂರ್ಣವಾಗಿ ಒಪ್ಪಿಕೊಂಡ ದಿನ ಬೇಡದ ಕೀಳರಿಮೆಗಳಿಗೆ ನಿನ್ಮನ್ಸಲಿ ಜಾಗ ಇರೋಲ್ಲ ನೋಡು. ಹಾಗೇ ವಿನಾಕಾರ್ಣ ಇನ್ಯಾರನ್ನೊ ಮೆಚ್ಚಿಸ್ಬೇಕಾದ ಅಗತ್ಯ ಕೂಡಾ ಇರೋದಿಲ್ಲ trust me. ಸರಿಯಾದ ಕೆಲ್ಸಗಳ್ನ ಮನ್ಸಿಗೆ ಹಿತವಾದ ರೀತಿಯಲ್ಲಿ ಮಾಡೋ ಅವ್ಕಾಶ ನಿಂದಾದಾಗ ‘ಲೈಫು ಸೂಪರ್ ಗುರೂ’ ಅನ್ಬಹುದು ಮನಸ್ಪೂರ್ತಿಯಾಗಿ.
      ಈಗ ಇದನ್ನೆಲ್ಲಾ ನಾ ಹೇಳಿದ್ರೆ ತಿಳ್ಕೊಳೋ ವಯಸ್ಸಲ್ಲ ನಿಂದು-I know. ಆದ್ರೆ ಮುಂದೊಂದಿನ ಈ ಮಾತ್ಗಳ ಅಗತ್ಯ ಬರ್ಬಹುದು ನಿಂಗೆ, ಆಗ ಹೇಳಿದ್ನ ಕೇಳೋ ವ್ಯವಧಾನ ಇದ್ಲಿದ್ರೂ ಹೀಗೆ ಪತ್ರ ಬರ್ದ್ರೆ ಓದ್ತೀಯ ಅನ್ಸ್ತು. ಇಷ್ಟೇ ಇಷ್ಟು ಕೀಳರಿಮೆಯಿಂದ ನಾನನುಭವ್ಸಿದ ಒಬ್ಬಂಟಿತನ,ಹಿಂಜರಿಕೆ ,ಕಳ್ಕೊಂಡ ಅವ್ಕಾಶಗಳು,ಕೈತಪ್ಪಿದ ಕನ್ಸುಗಳು ಈಗ ನನ್ನ ಕಾಡೋ ಹಂಗೆ ನಿನ್ನ್ಯಾವತ್ತೂ ಕಾಡದೇಯಿರ್ಲಿ ಅಂತ ಹೇಳ್ದೆ ಕಣೋ ಮರೀ.ಓದಿದ ದಿನ ಬಹುಶಃ  “such a woodpecker you are, stop your carpentry” ಅಂತೀಯೇನೋ….ನಾನೂ ನಿನ್ನಜ್ಜ, ಅಮ್ಮಮ್ಮನಿಗೆ ಹಾಗೇ ಅಂದಿದ್ದೆ.ಪರ್ವಾಗಿಲ್ಲ ಬಿಡು.
                                ಸಿಹಿ ಮುತ್ತುಗಳೊಂದಿಗೆ
                                          ನಿನ್ನಮ್ಮ.