ಊರಿಗೊಬ್ಳೇ ಪದ್ಮಾವತೀsssssss

    “ಜೀವನಾಂದ್ರೇ ಹುಡ್ಗಾಟ ಅಲ್ಲ. ಇಷ್ಟ್ ದಿನ ಆಡಿದ ಮರ್ಕೋತಿ ಆಟನೆಲ್ಲ ಇನ್ನು ಮರ್ತೇಬಿಡ್ಬೇಕು ನೀವೆಲ್ಲ. ಮುಂದೆ ಜೀವ್ನದಲ್ಲಿ ಏನಾಗ್ಬೇಕು ಅನ್ನೋದು ಈಗ್ಲೇ ತೀರ್ಮಾನ ಮಾಡ್ಕೊಳಿ ಮತ್ತದ್ರ ತಯಾರಿಗೆ ಚನ್ನಾಗ್ ಓದ್ರಿ. ಏನು? ಗೊತ್ತಾಯ್ತಾ? ಒಬ್ಬೊಬ್ರಾಗ್ ಹೇಳಿ ಏನಾಗ್ಬೇಕು ಅಂದ್ಕೊಂಡಿದೀರಾಂತ..ಹಾಂ?”
    ಯಾವ್ದೋ ವಿಷ್ಯಕ್ಕೆ ನಮ್ಗಳ ಮೇಲೆ ರಾಂಗಾಗಿದ್ದ ಮಂಜು ಮೇಷ್ಟ್ರು ಸಡನ್ನಾಗಿ ನಮ್ ಕಪಿಸೇನೆ ಮನಸ್ನಲ್ಲಿ ಒಂಚೂರು ಸೀರಿಯಸ್ನೆಸ್ಸು ಹುಟ್ಸೋ ಪ್ರಯತ್ನದಲ್ಲಿದ್ರು ಅನ್ಸತ್ತೆ. ಸರಿ, ನಾವು ಒಬ್ಬೊಬ್ರಾಗಿ ಡಾಕ್ಟ್ರು, ಎಂಜಿನಿಯರ್, ಟೀಚರ್ರು, ಫಿಲ್ಮ್ ಹೀರೋ ಅಂತ ಬಾಯಿಗೆ ಬಂದಿದ್ದ ಉದ್ಯೋಗ ಆರ್ಸ್ಕೊಳೋಕೆ ಶುರು ಮಾಡಿದ್ವಿ.ಐದ್ನೇ ಬೆಂಚಲ್ಲಿದ್ದ ಪದ್ದಿ; “ಸರ್, ನಾ ದೊಡ್ಡೋಳಾದ್ಮೇಲೆ ಮದ್ವೆ ಆಗ್ತೀನ್ರಿ” ಅಂತ ನಾಚ್ಕೊಳ್ತಾ ಹೇಳೋದೂ, ಕೊನೇ ಪಿರಿಯಡ್ ಮುಗಿತು ಅಂತ ಬೆಲ್ ಹೊಡ್ದಿದ್ದು ಒಟ್ಟೊಟ್ಟಿಗೇ ಆಯ್ತು. ಸ್ಕೂಲ್ ಮುಗೀತು ಅನ್ನೋದ್ನೂ ಮರ್ತು ಮೇಷ್ಟ್ರು ಪದ್ದೀನೇ ಆಶ್ಚರ್ಯದಿಂದ ನೋಡ್ತಿದ್ರು. ಅರೆಕ್ಷಣ ದಂಗಾಗಿದ್ದ ಮೇಷ್ಟ್ರು ಮತ್ತೆ ಸಾವರ್ಸ್ಕೊಂಡು ಮುಗುಳ್ನಕ್ಕು “ಅದೂ ಒಳ್ಳೆ ಉದ್ಯೋಗಾನೇ . ಗುಡ್,ಗುಡ್” ಅಂದು ಕ್ಲಾಸ್ ಮುಗ್ಸಿದ್ರು.
       ಆ ದೇವ್ರು ಒಬ್ಬೊಬ್ರಿಗೆ ಒಂದೊಂದು ವಿಷಯದಲ್ಲಿ ಧಾರಾಳತನ ತೋರಿಸ್ತಾನಂತೆ. ಕೆಲವರಿಗೆ ಸಿರಿತನದಲ್ಲಾದ್ರೆ ಮತ್ತೆ ಕೆಲವರಿಗೆ ಪ್ರತಿಭೆಯಲ್ಲಿ ಮತ್ತೆ ಕೆಲವರಿಗೆ ಕಷ್ಟಗಳ ವಿಷಯದಲ್ಲಿ. ಆದ್ರೆ ನನ್ನ ಬಾಲ್ಯ ಗೆಳತಿ ಪದ್ಮಾವತಿಗೆ ಈಸ್ಟ್ರೋಜನ್ನು ಅದೇ; ಹೆಣ್ಣುಭಾವನೆಗಳ ಹಾರ್ಮೋನು ಅದನ್ನು ತುಂಬಾ ಉದಾರವಾಗಿ ಕೊಟ್ಟಿದ್ನೋ ಏನೋ ಮಾತುಮಾತಿಗೂ ನಾಚಿಕೆ, ನಿತ್ನಿತ್ತಲ್ಲೇ ಕನಸು.
    ವಿಷ್ಯ ಏನಪ್ಪಾಂದ್ರೆ ನಮ್ಮ ಪದ್ಮಾವತಿಗೆ ಯಾನೇ ಪದ್ದೀಗೆ ಅವ್ಳಜ್ಜಿ ಅಂದ್ರೆ ಜೀವ. ಅಜ್ಜಿಗೂ ಅಷ್ಟೇ ಮೊಮ್ನಗಳಂದ್ರೇ ಪ್ರಾಣ. ದಿನಾ ರಾತ್ರೆ ಜೊತೇಲಿ ಮಲಗಿಸ್ಕೊಂಡು ಚಂದಚಂದದ ರಾಜ್ಕುಮಾರಿಯರ ಕಥೆ ಹೇಳ್ತಿದ್ರಂತೆ. ಆ ಕಥೆಗಳಲ್ಲಿ ಹೆಚ್ಚಿನವು ಕೊನೆಯಲ್ಲಿ ಸುಂದರನಾದ ರಾಜಕುಮಾರನನ್ನ ಮದುವೆಯಾಗೋದ್ರಲ್ಲಿ ಸುಖಾಂತ ಆಗೋಂಥವೇ ಅಲ್ವ. ಕಥೆಯೆಲ್ಲಾ ಮುಗಿಯುತ್ಲೂ ಅಜ್ಜಿ ಪದ್ದಿ ತಲೆ ಸವ್ರಿ “ಪದ್ದಿ ಬಂಗಾರಾ, ನೀನೂ ಒಳ್ಳೆ ಹುಡ್ಗಿಯಾಗಿದ್ದು, ಚನ್ನಾಗ್ ಓದಿ ಹತ್ನೇಕ್ಲಾಸು ಪಾಸ್ಮಾಡಿದ್ರೆ ಆ ಕಥೆ ಥರಾನೇ ಒಬ್ಬ ರಾಜ್ಕುಮಾರ ಬಂದು ನಿನ್ನ ಮದ್ವೆ ಮಾಡ್ಕೊಂಡು ಬಿಳಿ ಕುದುರೆಮೇಲೆ ಕರ್ಕೊಂಡೋಗ್ತಾನೆ ಗೊತ್ತಾ” ಅಂತಿದ್ರಂತೆ.
     ಪಾಪದ ಅಜ್ಜಿ, ಹಳೇ ಕಾಲ್ದವ್ರಲ್ವ. ಹತ್ನೇಕ್ಲಾಸೇ ದೊಡ್ಡ ಓದು ಅನ್ನೋ ಅಭಿಪ್ರಾಯದಲ್ಲಿ ಹಾಗಂದಿದ್ರೋ ಏನೋ. ದಿನಾ ಕಥೆಗಳಲ್ಲಿ ಬರೋ ರಾಜಕುಮಾರನಿಗೆ ಆಲ್ರೆಡೀ ಫಿದಾ ಆಗಿದ್ದ ನಮ್ಪದ್ದಿ ಅದ್ನೆಲ್ಲಾ ಗಮನ್ಸೋ ಸ್ಥಿತಿಲಿರ್ಲಿಲ್ಲ. ಓದಿನ ವಿಷ್ಯದಲ್ಲೂ ತುಸು ಪೆದ್ದಿಯೇ ಆದ ಪದ್ದಿ ನಾವು ಗೆಳತಿಯರೆಲ್ಲಾ ಅದೆಷ್ಟೇ ಚುಡಾಯ್ಸಿದ್ರೂ, ಕಾಲೆಳೆದು ಗೋಳಾಡ್ಸಿದ್ರೂ ಮುಂದೊಂದಿನ ರಾಜ್ಕುಮಾರ ಕುದುರೆಮೇಲೆ ಬಂದೇ ಬರ್ತಾನೆ, ತನ್ನ ಮದ್ವೆ ಆಗೇ ಆಗ್ತಾನೆ ಅಂತ ಬಲವಾಗಿ ನಂಬ್ಕೊಂಡಿದ್ಲು.
     ಆದ್ರೇನ್ಮಾಡೋದು. ಲೈಫನ್ನೋ ಲೈಫು ಐಸ್ಕ್ರೀಮ್ ಪಾರ್ಲರ್ರಲ್ವಲ್ಲಾ ನಮ್ಗೆ ಬೇಕಾದ ಫ್ಲೇವರ್ ಮಾತ್ರ ಆರಿಸ್ಕೊಳ್ಳೋಕೆ. ಪದ್ದಿ ಅಪ್ಪನ ವ್ಯಾಪಾರ ಮುಳ್ಗೋಗಿದ್ದೂ ಸ್ಕೂಲು ಬಿಡ್ಸಿ ಪದ್ದೀನ ದೂರದ ಹಳ್ಳೀಗೆ ಕರ್ಕೊಂಡು ಹೋಗಿದ್ದೂ ನಾವೆಲ್ಲ ಕಣ್ಣು ಮಿಟುಕ್ಸೋಷ್ಟ್ರಲ್ಲೆ ನಡ್ದೋಗಿತ್ತು. ಪದ್ದೀ,ಅವ್ಳ ಕನ್ಸುಗಳೂ,ಅಜ್ಜಿ ಕಥೆಗಳೂ,ಎಲ್ಲವೂ ನಮ್ಮಿಂದ ದೂರಾಗ್ಹೋಗಿದ್ವು.
     ಮೊನ್ನೆ ಸುಡುಸುಡು ಬಿಸ್ಲಲ್ಲಿ ಮಾರ್ಕೆಟ್ಟಿಂದ ಬರ್ತಾ ಯಾರೋ ನನ್ಹೆಸ್ರು ಕೂಗ್ದಂಗಾಯ್ತು. ತಿರ್ಗಿದ್ರೆ ಅದೇ ಪದ್ದಿ! ಉಸಿರಾಡ್ದೇ ಬಡಾಬಡಾ ಮಾತಾಡ್ತಿದ್ದಾಳೆ! “ಮಂದಾ ಮಂದಾಂತ ಗಂಟ್ಲರ್ಕೊಂಡು ಸತ್ನಲ್ಲೇ, ನನ್ಗುರ್ತಾಗ್ಲಿಲ್ವೆನೆ? ನಾನೇ ಪದ್ಮಾವತಿ, ಹೆಂಗಿದಿಯವ್ವಾ ಮಂದಾ?” ಇನ್ನೂ ಅದೆಷ್ಟು ಪ್ರಶ್ನೆ ಕೇಳ್ತಿದ್ಲೋ ಏನೋ ಅಷ್ಟ್ರಲ್ಲೇ ಅವಳ ಬಗ್ಲಲ್ಲಿದ್ದ ಕೂಸು ಅಳೋಕೆ ಶುರುಮಾಡ್ತು.
   ಸಿಕ್ಕಿದ್ದೇ ಛಾನ್ಸೂಂತ ನಾನು ರ್ಯಾಪಿಡ್ ಫಯರಿಂಗ್ ಶುರುಮಾಡಿದ್ದೆ. “ಅಯ್ಯೋ! ಪದ್ದಿ ಅಲ್ವ! ಇದೇನೇ! ಎಲ್ಲೇ ಕಳ್ದ್ಹೋಗಿದ್ದೆ ಇಷ್ಟು ವರ್ಷ! ಇದ್ಯಾರ್ದೇ ಮಗು! ನಿಂದಾ? ಕಡೆಗೂ ಸಿಕ್ಬಿಟ್ನಾ ನಿನ್ ರಾಜ್ಕುಮಾರಾ?”
ಸರಿ, ಇಬ್ರೂ ಮಾತಾಡೋ ಉತ್ಸಾಹದಲ್ಲಿದ್ವಿ; ಬಿಸ್ಲು ಜೋರಿತ್ತು. ಅಲ್ಲೇ ಕೂಲ್ ಜಂಕ್ಷನ್ಗೆ ನುಗ್ಗಿ ಜ್ಯೂಸ್ ಕುಡಿತಾ ಮಾತಾಡೋಣ ಅಂದ್ಕೊಂಡ್ವಿ.
     ನಾನು “ಹೇಗಿದೀಯೆ ಪದ್ದು” ಅನ್ನೋದ್ನೇ ಕಾಯ್ತಿದ್ಲೇನೋ ಮಹರಾಯ್ತಿ, ಪುರಾಣ ಶುರುವಿಟ್ಲು-“ಅಯ್ಯೋ ಬಿಡವ್ವ.ಯಾಕ್ಕೇಳ್ತಿಯ ಗೋಳ್ನ.ಸ್ಕೂಲ್ಬಿಡುಸ್ಕೊಂಡು ಹಳ್ಳಿಗ್ ಕರ್ಕೊಂಡೋದ್ರಾ, ಅಲ್ಲಿ ಗೋರ್ಮೆಂಟ್ ಸ್ಕೂಲಿತ್ತು, ಹೋಗ್ತಾಯಿದ್ದೆ.ಆ ಸ್ಕೂಲಾಗೆ ನನ್ನಷ್ಟು ಓದೋರೂ ಯಾರೂ ಇರ್ಲಿಲ್ಲ.ಜಾಣೆ ಅನ್ಸ್ಕೊಂಡಿದ್ದೆ. ಹತ್ನೇಕ್ಲಾಸು ಸೂಪರ್ರಾಗಿ ಪಾಸ್ಮಾಡಿ ಕುದ್ರೆ ಹತ್ತೋಣಾಂದ್ಕೊಂಡಿದ್ದೆ.ಹತ್ನೇ ಕ್ಲಾಸೇನು ಒಂಭತ್ನೂ ಪಾಸ್ಮಾಡಕ್ ಬಿಡ್ಲಿಲ್ಲ ಮನೆವ್ರು. ನಮ್ಮಾವ ಇದಾನಲ್ಲಾ ನಮ್ಮಾವಾ, ಅದೆ ಕಣೇ ನಮ್ಮಜ್ಜಿ ಕಡೇ ಮಗಾ… ನಾ ಪದ್ದಿನೇ ಮದ್ವೆ ಆಗ್ತಿನಿ ಅಂತ ಕುಂತ್ಬಿಟ್ಟಿದ್ದ. ನಮ್ಮಜ್ಜಿ ಬೇರೆ ಮಗನ್ಮದ್ವೆ ನೋಡ್ಬುಟ್ಟೇ ಸಾಯದು ಅಂತ ಕೂತಿತ್ತು. ಅಜ್ಜಿನ ನೆಮ್ದಿಯಾಗ್ ಕಳುಸ್ಬೆಕು ಅಂತ ಎಲ್ರೂ ನಂಗೆ ಬಲ್ವಂತ ಮಾಡಿ ಮದ್ವೆ ಮಾಡ್ಸೇಬಿಟ್ರು ನೋಡವ್ವ” ಅಂದು ನಿಟ್ಟುಸ್ರಿಟ್ಲು.
    “ಹೌದಾ ಪದ್ದು, ನಿನ್ನ ಯಾವಾಗ್ಲೂ ನೆನ್ಸ್ಕೊತಿದ್ವಿ ಕಣೇ ನಾವೆಲ್ಲ, ರಾಜ್ಕುಮಾರ ಸಿಗ್ಲಿಲ್ಲ ಅಂತ ನೊಂದ್ಕೊಬೇಡ, ಸುಖ್ವಾಗಿರು ಕಣೇ” ಅಂದೆ. ಯಾಕೋ ನಂಗೆ ಪದ್ದಿನ ನೋಡಿ ‘ಛೆ, ಪಾಪ’ ಅನ್ಸ್ತಿತ್ತು.’ ಅದು ಪದ್ದಿಗೂ ಗೊತ್ತಾಯ್ತು ಅನ್ಸುತ್ತೆ,                “ಏನ್ಗೊತ್ತಾ ಮಂದೂ,  ನಾನೂ ರಾಜ್ಕುಮಾರ ಸಿಗ್ಲಿಲ್ಲಾಂತ ಒಂದಷ್ಟು ದಿನ ಬೇಜಾರ್ ಮಾಡ್ಕೊಂಡಿದ್ದೆ. ಆದ್ರೆ ಮಾವ ಚನಾಗೇ ನೊಡ್ಕೋತಾನೆ, ಪ್ರೀತಿ ಮಾಡ್ತನೆ, ಎಲ್ಲಾ ಅನ್ಕೂಲ್ವಾಗೇ ಇದೇ ಅನ್ಸೋಕ್ಷುರುವಾಯ್ತು. ಆಮೇಲೆ ಬೇಜಾರು,ಅಸಮಾಧನಾ ಎಲ್ಲಾ ಹೊಂಟೋಯ್ತು ನೋಡವ್ವ. ಈಗಂತೂ ಮಾವ ಬಿಳಿ ಸ್ಕೂಟಿ ತಗೊಂಡಾನೆ, ಅದೇ ಕುದ್ರೆ ಹೋದಂಗೋಗ್ತದೆ. ಅಜ್ಜಿ ಹೇಳಿದ್ದು ಒಂಥರಾ ನಿಜಾ ಆತ್ನೋಡು” ಅಂತ ನಕ್ಕುಬಿಟ್ಲು.  “ಭಲೇ ಪದ್ದಿ, ಬೇಕಾಗಿದ್ದು ಸಿಗ್ಲಿಲ್ಲಾಂತ ಅಳ್ದೇ ಸಿಕ್ಕಿದ್ರಲ್ಲೇ ಖುಷಿ ಕಾಣ್ತಾಳಲ್ಲ” ಅನ್ಸಿ ಪದ್ದು ಮೇಲೆ ಸಕತ್ ಲವ್ ಬಂತು. ಅವ್ಳುನ್ನೂ ಅವ್ಳ ಕೂಸುನ್ನೂ ಮುದ್ಮಾಡಿ ಬೀಳ್ಕೊಟ್ಟೆ.
    ಪದ್ದು ಕಣ್ಣಿಂದ ಮರೆಯಾದಷ್ಟೂ ಮನಸ್ಸಿಗೆ ಹತ್ರವಾಗ್ತಾಯಿದ್ದಳೆ. ನಾವೆಲ್ರೂ ಅಷ್ಟೇ ಅಲ್ವಾ .. ಕನ್ಸಲ್ಲಿ ಕಾಣೋ ಖೀರಿಗಿಂತ ಕಣ್ಣೆದ್ರಿರೋ ಗಂಜಿ ನೀರು ಉತ್ತಮ ಅನ್ನೋದ್ನ ಕೆಲವೊಮ್ಮೆ ಮರ್ತೇಬಿಡ್ತೀವಿ. ದೊಡ್ಡ ಗುರಿ ಇಟ್ಕೊಂಡು ಅದ್ಕೋಸ್ಕರ ಶ್ರಮವಹಿಸೋದು ಒಳ್ಳೇದೇ ಆದ್ರೂ just in case ಕನಸು ಕೈಗೂಡದಿದ್ರೆ ಸುಮ್ನೆ ಕೊರಗಿ ಜೀವ್ನ ನರ್ಕ ಮಾಡ್ಕೊಳೋದ್ಕಿಂತ ಇರೋ ಪರಿಸ್ಥಿತಿ ಅನುಕೂಲಕರವಾಗಿದ್ದಲ್ಲಿ ಹೊಂದ್ಕೊಳ್ಳೋದೇ ಜಾಣ್ಮೆ ಅಲ್ವಾ. ನಮ್ಪದ್ದಿ ಜಾಣೆ,”I am beginning to learn that it is the sweet, simple things of life which are the real ones after all “ಅನ್ನೋ ನನ್ನ ಮೆಚ್ಚಿನ ಲೇಖಕಿ ಲಾರಾ ಇಂಗಲ್ಸಳ ಮಾತುಗಳಿಗೆ  ಪದ್ದಿ ಜೀವಂತ ಉದಾಹರಣೆ ಅನ್ನಿಸ್ತಿದ್ದಾಳೆ.   
      ಈಹೊತ್ತು ಇದನ್ನೆಲ್ಲಾ ನೆನಪಿಸ್ಕೊಂಡು ಬರೀತಾಯಿದ್ರೆ ಮನಸ್ಸಿನ ಮೂಲೆಲಿರೋ ಹಳೇ ಕೆಟ್ಹೋದ  ಗ್ರಾಮಫೋನೊಳಗಿಂದ ಕೈಲಾಶ್ಖೇರ್ ಒಂದೇ ಸಾಲನ್ನೇ ಪದೇಪದೇ ಕಿರಿಚ್ತಾಯಿದ್ದಾರೆ……ಯಾವ್ಹಾಡೂಂದ್ರಾ….ಅದೇ… ಊರಿಗೊಬ್ಳೇ ಪದ್ಮಾವತೀsssssss

10 thoughts on “ಊರಿಗೊಬ್ಳೇ ಪದ್ಮಾವತೀsssssss

  1. Super… ಎಲ್ಲರ ಬದುಕಲ್ಲೂ ಮುರಿದ ಬೊಂಬೆ ಕಥೆ ಇರತ್ತೆ… ಪದ್ದಿ ಮದ್ವೆನ ಹಾಳು ಮಾಡಿ ನಮ್ಮ ಕಣ್ಣಲ್ಲಿ ನೀರು ಹಾಕ್ಸತೀರ ಅಂತ ಸ್ವಲ್ಪ ಡೌಟಲ್ಲೇ ಕೊನೆ ಪ್ಯಾರಾ ಓದ್ತಾ ಇದ್ದೆ. ಆದರೆ ನೀವು END ಅನ್ನೋದಕ್ಕಿಂತ ತುಂಬಾ ಚೆನ್ನಾಗಿ ಜೀವನ ಸಾಗಿಸೋದನ್ನ ತೋರಿಸಿಬಿಟ್ರಿ. ಭಾಳ ಚೆನ್ನಾಗಿದೆ! !

    Liked by 2 people

  2. ಬದುಕಿನಲ್ಲಿ ಬಂದಂದ್ನ ಬಂದಂಗೆ ಸ್ವೀಕರಿಸಿ ಮುನ್ನಡೆಯಬೇಕು ಅಷ್ಟೇ.. ಅಲ್ಲೇ ಇರೋದು ಸಂತೋಷ.. ನಿಜ ನಾವೆಲ್ಲಾ ಪದ್ದೀನ ನೋಡಿ ಕಲಿಬೇಕು..ತಿದ್ಕೋಬೇಕು.. ವಾಸ್ತವವನ್ನು ಒಪ್ಪಿಕೊಳ್ಳಲೇಬೇಕು.. ಅನುಭವಿಸಲೇಬೇಕು.. ಒಳ್ಳೆಯ ಬರಹ ಶಾಂತಲಾ..

    Like

  3. ನಿಮ್ಮ ಊರಿಗೊಬ್ಬಳೆ ಪದ್ಮಾವತಿ ನನಗೆ ನಾನೆ ಹಿಂದೆ ಬರೆದಿದ್ದ ‘ಬದುಕಿನ ಸಣ್ಣ ಸಣ್ಣ ಸುಖಗಳು’ ಕವನವನ್ನು ನೆನಪಿಸಿತು. ಏನೊ ಗುರಿಯನ್ನು ಅಟ್ಟುತ್ತ ಪಕ್ಕದಲ್ಲೆ ಇರುವ ಸಣ್ಣ ಸಣ್ಣ ಸುಖಗಳನ್ನು ಕಡೆಗಣಿಸಿ ನರಳುವುದು ತುಂಬಾ ಸಹಜ ಪ್ರವೃತ್ತಿಯಿರಬೇಕು. ನಿಜ ಹೇಳಬೇಕೆಂದರೆ ಅವು ಕೊಡುವ ಸುಖವೆ ಹೆಚ್ಚು ನೈಜವಾದದ್ದಿರಬೇಕೆನಿಸುತ್ತದೆ – ಆದರೆ ಮಾಯಾ ಜಗದ ಜಾದು ಹಾಗಿರಲು ಬಿಡುವುದಿಲ್ಲ. ಎಲ್ಲರು ಪದ್ಮಾವತಿಯಾಗುವುದು ಕಷ್ಟವೆ ಬಿಡಿ 😊

    Liked by 1 person

ನಿಮ್ಮ ಟಿಪ್ಪಣಿ ಬರೆಯಿರಿ