​Me….before you; after you

I was like a lonely pond amidst a jungle

calm..quiet..silent..like a dead dove

but it was before You

Who came along like a naughty breeze

Got to my core

Made me ripple by a single touch

Now my happy tears reflect only one image …and that’s you
I was like a cuppa water

Plain, sparkling, clear as crystal 

But thats before you

Who came along like the essence of addiction 

Got to my core

Changed me from beneath and

Thought me how to blossom 

Now im the most mesmerizing perfume 

By the fragrance of you
I was like a plain glass

No carvings on it… no decorations

but that’s before you

Who came along like mercury 

Got to my core

Like endless spirit to move me from within Blended so perfectly to become a dazzling mirror in which

Now I see myself and found 

Reflection of you 
What I meant to say is….

you spoiled me and you destroyed me

In every possible way 

And now when I turn back to see..

There’s no you, there’s no me

Left is just us for eternity 

ಪತ್ರ-ಚಿತ್ರ

ಕವಿಹೃದಯಿ ಗೆಳೆಯ ಗುರುಪ್ರಸಾದ್ ಕಂಡಂತೆ;ಒಂದು ಪ್ರೇಮಕಥೆ..

ಮೌನದೊಳಗಣ ಮಾತು

“ತೀರ್ಥರೂಪ ಸ್ವರೂಪರಾದ ತಂದೆಯವರಿಂದ ನಿಮ್ಮ ಮಗ ಬೇಡಿಕೊಳ್ಳುವ ಆಶೀರ್ವಾದಗಳು. ನಾನು ಕ್ಷೇಮವಾಗಿದ್ದೇನೆ, ನೀವು ಸೌಖ್ಯವಾಗಿರುವಿರೆಂದು ನಂಬುತ್ತೇನೆ”. ಈ ರೀತಿಯ ಒಕ್ಕಣೆಯಿರುವ ಪತ್ರಗಳನ್ನು ದಸರಾ ರಜೆಯನ್ನೋ ಅಥವಾ ಅಂತಿಮ ಪರೀಕ್ಷೆ ಮುಗಿದ ನಂತರ ಸಿಗುತ್ತಿದ್ದ ದೊಡ್ಡರಜೆಯೆಂದು ನಾವು ಕರೆಯುತ್ತಿದ್ದ ಆ ರಜಾದಿನಗಳನ್ನು ಕಳೆಯಲು ಅಜ್ಜಿಮನೆಗೆ ಹೋದಾಗ ಮನೆಗೆ ಬರೆಯುತ್ತಿದ್ದುದು ಈವಾಗ ನೆನಪುಗಳಷ್ಟೆ. ಹೊಸ ಮನೆ ಕಟ್ಟಿಸಿದಾಗ ಹಳೆಮನೆಯ ಮೂಲೆಯಲ್ಲಿ ಸರಿಗೆಯಲ್ಲಿ ನೇತಾಡುತ್ತಿದ್ದ ಇನ್ ಲ್ಯಾಂಡ್ ಲೆಟುರಗಳಲ್ಲಿ ಹೂತ ರಾಶಿ ನೆನಪುಗಳನ್ನು ಹಾಗೇ ಹೊತ್ತು ತಂದು ಹೊಸ ಕೋಣೆಯ ಮೂಲೆಗೆ ನೇತುಹಾಕಿದ್ದೆ. ಮಡಚಿಟ್ಟ ತಿಳಿನೀಲಿ ಆಗಸದ ತುಣುಕುಗಳಂತಿದ್ದ ಪತ್ರಗಳೊಳಗೆ ಅಜ್ಜ, ಅಜ್ಜಿಯರೆಂಬ ನಕ್ಷತ್ರಗಳೂ, ತವರುಮನೆಯಿಂದ ಅಮ್ಮನ ಕೈಯ ಪಡಿಯಚ್ಚುಗಳೂ ಇದ್ದವು. ತರಚಿದ ಗಾಯದ ಅವಲತ್ತುಗಳು,ಅಜ್ಜಿ ಕೊಡಿಸಿದ ಬಟ್ಟೆಗಳು ತಿಂಡಿಗಳ ವಿವರಣೆಗಳು ಪುಟ್ಟ ಲೋಕದ ಅಕ್ಷರ ತೊದಲುಗಳು.ಪತ್ರಲೋಕದ ಕೌತುಕ ಬಾಲ್ಯಕ್ಕೆ ಕೊನೆಯಾದುದು ಹೇಗೆ..? ಎಲ್ಲಿ ನಿಂತಿತು ಆ ಅಕ್ಷರಬಂಧ..?

20151130_205534

ಇವೆಲ್ಲ ನೆನಪಾದದ್ದು “ನಿಂದೆ ಪ್ರಿಯ ಮೊಯ್ದೀನ್”(ನಿನ್ನ ಪ್ರೀತಿಯ ಮೊಯ್ದೀನ್), ಅನ್ನೋ ಮಲಯಾಳಂ ಪ್ರಣಯಕಾವ್ಯವನ್ನು ತೆರೆಯ ಮೇಲೆ ನೋಡಿದಾಗ.ಅದರಲ್ಲೇನು ಬಾಲ್ಯವಿರಲಿಲ್ಲವಾದರೂ, ಅಸಹಜವೆನ್ನುವಂತೆ ಮನಸ್ಸು ಬಾಲ್ಯಕ್ಕೋಡಿತ್ತು.

ನಮ್ಮ ತಲೆಮಾರುಗಳವರ್ಯಾರು ಅನುಭವಿಸಲಾಗದ ಎದೆ ತುಡಿತಗಳನ್ನು ಲೇಖನಿಯ ಹನಿಗಳಾಗಿಸಿ ಪ್ರೇಮಿಸಿದ ಆ ಒಂದು ಕಾಲಘಟ್ಟದ ಕಲ್ಪನೆಗಳಿವೆ ಮನದಲ್ಲಿ. ಕುಡಿನೋಟಕ್ಕಾಗಿ ಕಾಯುವ, ಆ ನೋಟಕ್ಕೆ ಮಾರುಹೋಗುವ ಪ್ರಣಯದುಬ್ಬರದ ಕಾಲ. ಲೆಕ್ಕವಿಲ್ಲದಷ್ಟು ಹರಿದ ಹಾಳೆಗಳ ಕೊನೆಗೆ ಮೂಡುವ, ಮನದ ಭಾವನೆಗಳು ಕಲ್ಪನೆಯ ಕುಸುರಿಯಲ್ಲರಳಿ ಪದವಾದ ಪ್ರೇಮದೋಲೆ. ಇಷ್ಟದ ಜೀವಕೆ ಅದನ್ನು ಕೊಡಲು ಪಡುವ ಪಾಡು. ಮತ್ತೆ ಪತ್ರ ಮುಖಾಂತರವೇ ಪಕ್ವವಾಗುವ ಅಥವಾ ಕಳೆದುಹೋಗುವ ಪ್ರೀತಿ..ಇಂದಿನ ನಗರಗಳ…

View original post 280 more words

ಮಧ್ಯರಾತ್ರೀಲೀ….

ಓಹ್! ಆ ದಿನಗಳೇ ಚೆನ್ನಾಗಿತ್ತಪ್ಪ. ವಾರಕ್ಕೆ ಆರೇದಿನ ಸ್ಕೂಲು. ಅದರಲ್ಲೂ ಐದುದಿನಗಳು ಒಂದೇ ರೀತಿಯ ಯೂನಿಫಾರ್ಮ್. ಆರನೇ ದಿನ ನಮ್ಮಾಯ್ಕೆಯ ಅಥವಾ ನಮ್ಹತ್ರ ಇರೋ (ಒಂದೋ ಎರ್ಡೋ ಇರ್ತಿತ್ತಷ್ಟೇ) ಬಣ್ಣದ ಬಟ್ಟೆ, ಮತ್ತು ಅರ್ಧ ದಿನ ಸ್ಕೂಲಿನ ಅನುಕೂಲ. ತೀರಾ ಹೊರೆಯೆನಿಸದ ಹೋಮ್ವರ್ಕು.ಬೇಸಿಗೆಯಲ್ಲೂ ದಸರಾ ಸಮಯದಲ್ಲೂ ಭರಪೂರ ರಜೆಯ ಮಜಾ.ಈಗಿನ ಮಕ್ಕಳಂತೆ ದಿನಕ್ಕೊಂದು ಬಗೆ ಸಮವಸ್ತ್ರ, ಪಠ್ಯದಷ್ಟೇ ಕಟ್ಟುನಿಟ್ಟಿನಲ್ಲಿ ಕಲಿಯಲೇಬೇಕಾದ ಪಠ್ಯೇತರ ಚಟುವಟಿಕೆಗಳೂ, ಎಡವಿಬಿದ್ದರೆ ಅಸೈನ್ಮೆಂಟೂ, ಪ್ರೋಜೆಕ್ಟೂ, ಇಂಟರ್ನಲ್ಸೂ, ದೊಡ್ಡ ಪರೀಕ್ಷೆ ಮುಗಿದಮೇಲೂ ಪ್ರಾಪ್ತಿಯಾಗದ ದೊಡ್ಡ ರಜೆ, ಸಿಕ್ಕ ಚೂರೂಪಾರು ರಜೆಯಲ್ಲಿ ಸಮ್ಮರ್ ಕ್ಯಾಂಪೂ …. ಊಹೂ ಇದ್ಯಾವ್ದೇ ರಗಳೆಗಳಿಲ್ದೆ ಸುಖವಾಗಿ ಕಳೆದ ವಿದ್ಯಾರ್ಥಿ ಜೀವನ ನನ್ನದು.
      ಈಗಿನಷ್ಟು ಭಾರೀ ಓದುಗಳೂ ಹೊರೆ ಹೋಮ್ವರ್ಕುಗಳೂ ಇಲ್ಲದ್ದರಿಂದ ಬಿಡುವಿನ ವೇಳೆ ತುಂಬಾ ತುಂಬಾ ಇರೋದು. ಟಿವಿ, ಕಂಪ್ಯೂಟರ್ರೂ ಇನ್ನೂ ತಮ್ಮ ಪ್ರಭಾವಬೀರದ ದಿನಗಳವು. ಆಡುವ ಎಳೇಪ್ರಾಯ ಹಿಂದೆ ಸರಿದಂತೆ ನಾನೂ, ನನ್ನದೇ ವಯೋಮಾನದ ಹೆಚ್ಚಿನ ಮಕ್ಕಳೂ ತುಂಬಾ ಚಿಕ್ಕ ಪ್ರಾಯದಲ್ಲೇ ಪಠ್ಯೇತರ ಪುಸ್ತಕ ಕೈಗಂಟಿಸಿಕೊಂಡಿದ್ದೆವು.
       ನಾನಂತೂ ಮೂರನೇ ತರಗತಿಯಲ್ಲಿರುವಾಗಲೇ ತ್ರಿವೇಣಿಯವರ,ಉಷಾ ನವರತ್ನರಾವರ ಸಾಮಾಜಿಕ, ಪ್ರೇಮ  ಕಾದಂಬರಿಗಳನ್ನೋದುತ್ತಿದ್ದೆ. ಏಳರ ಹೊತ್ತಿಗಾಗಲೇ ತೆಲುಗು ಕಾದಂಬರಿಗಳ ಗೀಳು. ಹೈಸ್ಕೂಲ್ ಹೊಸ್ತಿಲ್ಲಲ್ಲಿ ಕಾರಂತರು, ಭೈರಪ್ಪನವರೂ, ಕುವೆಂಪು, ಪೂಚಂತೇ ಎಲ್ಲರೂ ಮನಸ್ಸನ್ನಾವರಿಸಿಯಾಗಿತ್ತು. ತರಂಗ, ತುಷಾರಾ,ಹಾಯ್ ಬೆಂಗಳೂರಿನಂಥ ನಿಯತಕಾಲಿಕಗಳೂ ಜೊತೆಗಿದ್ದವು.
    ಓದು ಬರಬರುತ್ತಾ ನನಗೆಂಥಾ ಗೀಳಾಗಿತ್ತೆಂದರೆ ಬುಧವಾರ ಅಪ್ಪ ತರಂಗ ತರಲು ಮರೆತರೆ ಮನೆ ರಣರಂಗವಾಗುತ್ತಿತ್ತು. ಬೇಕೆನಿಸಿದ ಪುಸ್ತಕ ತಕ್ಷಣಕ್ಕೆ ಕೈಗೆಟುಕದೇ ಹೋದರೆ ತಲೆ ಚಿಟ್ಟು ಹಿಡಿದಂತಾಗುತ್ತಿತ್ತು. ಓದಿರುವ ಪುಸ್ತಕಗಳನ್ನೇ ಮತ್ತೆ ಮತ್ತೆ ಓದುತ್ತಿದ್ದೆ .ಪುಸ್ತಕ ಹಿಡಿದು ಕುಳಿತೆನೆಂದರೇ ಸಾಕು; ಪರಿಚಯ ಇಲ್ಲದ ಹೊಸಬರು “ಆಹಾ, ಎಂಥಾ ತದಾತ್ಮ” ಎಂತಲೂ ಮನೆಮಂದಿ “ಥೂ, ಆ ಬುಕ್ಕೊಂದು ಕೈಲಿದ್ರೆ ಲೋಕ ಮುಳುಗಿದ್ದು ಗೊತ್ತಾಗಲ್ವನೇ ” ಎಂದೂ ಹೇಳುತ್ತಿದ್ದರೂ ಅದರ ಪರಿವೆಯೇ ಇಲ್ಲದೆ ನನ್ನದೇ ಕಲ್ಪನಾ ಲೋಕದಲ್ಲಿರುತ್ತಿದ್ದೆ.
     ಒಮ್ಮೆ ಹೀಗಾಯ್ತು. ಹೈಸ್ಕೂಲ್ ದಸರಾರಜೆಯ ಸಮಯ ಯಾವಾಗಿನಂತೆ ನಾನು ನನ್ನಜ್ಜನ ಮನೆಗೆ ಹೊರಟಿದ್ದೆ. ಬಟ್ಟೆಬರೆ ಜೊತೆ ಒಂದೆರಡು ಪುಸ್ತಕಗಳನ್ನೂ ಗಂಟುಕಟ್ಟಿದ್ದೆ. ಅಜ್ಜನ ಊರೋ ಅದೊಂದು ಕುಗ್ರಾಮ.ಇಡೀ ಊರಿಗೆ ಅಜ್ಜನದ್ದೂ ಸೇರಿ ಎರಡೋ ಮೂರೋ ಮನೆಗಳಷ್ಟೇ ಇದ್ದಿದ್ದು. ಅದೂ ಒಂದರಿಂದ ಇನ್ನೊಂದು ಕಣ್ಣಿಗೆ ಕಾಣದಷ್ಟು ದೂರದಲ್ಲಿ.
ನಿಲ್ದಾಣದಲ್ಲಿ ಬಸ್ಸಿಳಿದು ನೇರ ಕಾಲುಹಾದಿಯಲ್ಲಿ ಒಂದರ್ಧ ಕಿಲೋಮೀಟರ್ ಗೇರು ತೋಪು, ಕುರುಚಲು ಕಾಡಿನಿಂದ ಸುತ್ತುವರಿದ ರಸ್ತೆ ಹಿಡಿದು ನಡೆದರೆ ಸೊಂಪಾದ ಸುವಿಸ್ತಾರವಾದ ಅಜ್ಜನ ಅಡಿಕೆ ತೋಟ, ತೋಟಕ್ಕಂಟಿದಂತೇ ಮನೆ ಮತ್ತದರ ಎದುರಲ್ಲೇ ದನಕರುಗಳ ಕೊಟ್ಟಿಗೆ, ಮನೆಯ ಪ್ರೀತಿಯ ನಾಯಿ ‘ಸೋನಿ’ಗೊಂದು ಗೂಡು, ಅಡಿಕೆ ಒಲೆ.ಮನೆಯಿಂದ ಸ್ವಲ್ಪ ದೂರದಲ್ಲಿ ಪ್ರತ್ಯೇಕವಾಗಿದ್ದ ಬಾವಿಕಟ್ಟೆ, ಸ್ನಾನ ಮತ್ತು ಶೌಚದ ಕೋಣೆಗಳು.ತೀರಾ ಆಡಂಬರವಾಗೇನೂ ಇಲ್ಲದಿದ್ದರೂ ಹಳೆಯ ಮನೆಯಾದ್ದರಿಂದ ವಿಶಾಲವಾದ ಜಗುಲಿ, ಹಜಾರ, ಒಳಕೋಣೆಗಳ ದೊಡ್ಡ ಮನೆಯೇ ಅದು. 
     ಮೊದಲಾದರೆ  ಆಡುತ್ತಾ ಕುಣಿಯುತ್ತಾ ದೊಡ್ಡ ಮನೆ,ಅಂಗಳದ ತುಂಬಾ ಗಲಾಟೆ ಗದ್ದಲ ಮಾಡುತ್ತಾ ರಜೆಯನ್ನು ಮೋಜಾಗಿ ಕಳೆಯಬಹುದಿತ್ತು. ಆದರೀಗ ಹೈಸ್ಕೂಲ್ ಓದೋ ದೊಡ್ಡ ಹುಡುಗಿ ಎನಿಸಿಕೊಂಡಿದ್ದೀನಲ್ಲಾ…. ಗಂಭಿರವಾಗಿರಲೇ ಬೇಕಾದ ಅನಿವಾರ್ಯ. ಸರಿ, ಹೋದಾಕ್ಷಣ ನಾನು ಒಯ್ದಿದ್ದ ಬ್ಯಾಗನ್ನೊಂದುಕಡೆ ಎಸೆದೆ. ಮನೆಯವರೊಂದಿಗೆ ಸಾಧ್ಯವಾದಷ್ಟು ಹರಟಿ, ತೋಟ,ಕೊಟ್ಟಿಗೆಗೆಲ್ಲಾ ಒಮ್ಮೆ ಹೊಕ್ಕುಬಂದೆ. ಹೊಸದಾಗಿ ಸ್ವೀಕರಿಸಿದ್ದ ಗಾಂಭೀರ್ಯ ಧೀಕ್ಷೆ ಅಷ್ಟೇನೂ ಆಕರ್ಷಕವಾಗಿರಲಿಲ್ಲ.ಆಡಬಹುದಾದ ಮಾತುಗಳೆಲ್ಲಾ ಮುಗಿದಂತೆನಿಸಿ ಅಜ್ಜನೂರು ಮೊದಲ ದಿನಕ್ಕೇ ‘ಯಮ ಬೋರಿಂಗ್’ಅನಿಸತೊಡಗಿತು.    
    ದೊಡ್ಡ ಮನೆಯ ಯಾವುದೋ ಒಂದು ಮೂಲೆಯಲ್ಲಿ ಪುಸ್ತಕ ಹಿಡಿದು ಕುಳಿತರೆ  ಜಗತ್ತನ್ನು ನಾನೂ; ನನ್ನನ್ನು ಜಗತ್ತೂ ಸುಲಭವಾಗಿ ಮರೆತುಬಿಡಬಹುದಾಗಿತ್ತು. ಸಧ್ಯಕ್ಕೆ ಹೊತ್ತುಕಳೆಯಲು ಅದೇ ಉತ್ತಮ ಎಂದುಕೊಂಡ ನಾನು ಮಧ್ಯಾನ ಊಟದ ನಂತರ ಮನೆಯಿಂದ ಕೊಂಡೊಯ್ದಿದ್ದ “ಕಾಡಿನ ಕಥೆಗಳು” ಹಿಡಿದು ಕುಳಿತೆ.
        ಕುಳಿತದ್ದೊಂದೇ ನೆನಪು. ಪುಸ್ತಕದಲ್ಲಿ ಅದ್ಯಾವ ಮಟ್ಟಿಗೆ ಕಳೆದುಹೋದೆನೆಂದರೆ ಮಧ್ಯದಲ್ಲಿ ಯಾರೋ ಸಂಜೆಯ ಕಷಾಯ ತಂದುಕೊಟ್ಟಿದ್ದೂ,ರಾತ್ರೆಯ ಊಟಕ್ಕೆ ಕರೆದದ್ದೂ ಮಸುಕು ಮಸುಕಾಗಿ ನೆನಪಿದೆ. ಅದೇನು ಕುಡಿದೆನೋ ತಿಂದೆನೋ ಒಂದೂ ನೆನಪಿಲ್ಲ. ಮತ್ತೆ ಪುಸ್ತಕ ಹಿಡಿದು ಕುಳಿತವಳಿಗೆ ಅಜ್ಜನೋ ಇನ್ಯಾರೋ ಒಬ್ಬರು ಹತ್ತಿರ ಬಂದು ಮಲಗುವ ಸಮಯವಾಯ್ತು ಅಂತೇನೋ ಹೇಳಿದ್ದರೂ ‘ಇನ್ನೊಂದೇ ಪೇಜ್.. ಬೇಗ ಮುಗಿಸಿ ಮಲಗ್ತೀನಿ’ ಎಂದು ಹಾಗೇ ಓದು ಮುಂದುವರೆಸಿದ್ದೆ.
  ಪುಸ್ತಕ ಪೂರ್ಣ ಮುಗಿದಾಗ ಮಧ್ಯರಾತ್ರಿ ಎರಡರ ಸಮಯ. ಪುಸ್ತಕದ ರೋಮಾಂಚಕತೆ, ನಿದ್ರೆಯ ಸೆಳೆತ ಎಲ್ಲಾ ಒಟ್ಟಾಗಿ ತಲೆ ಭಾರವಾಗಿತ್ತು. ಬೇಗನೆ ಮಲಗಿಬಿಡೋಣ ಎಂದು ಹೊರಟರೆ ಆಗಲೇ ಶುರುವಾದ್ದು ಅಸಲೀ ಸಮಸ್ಯೆ. ಮಲಗೋ ಮೊದಲು ಬಚ್ಚಲಿಗೆ ಹೋಗಬೇಕಾಗಿದೆ ಮತ್ತು ಹೋಗಲೇಬೇಕಾಗಿದೆ.ಆದರೆ ಹೇಗೆ!? ಬಚ್ಚಲುಕೋಣೆ ಮನೆಯಿಂದ ಹೊರಗೆ ಪ್ರತ್ಯೇಕವಾಗಿದೆಯಷ್ಟೇ, ನೂರು ಭಯಗಳು ಮನಸ್ಸನ್ನಾವರಿಸಿದವು.
       ಮನೆಯ ಹತ್ತಿರದಲ್ಲೇ ಎಲ್ಲೋ ಕೂಗುತ್ತಿರೋ ಗೂಬೆ, ಕಾಡಿನ ಜೀರುಂಡೆಗಳ ಝೇಂಕಾರ, ಅಟ್ಟದ ಮೇಲಿನ ಇಲಿ-ಹೆಗ್ಗಣಗಳ ಓಡಾಟದ ಸರ-ಬರ ಶಬ್ದ, ಅಲ್ಲೆಲ್ಲೋ ದೂರದಲ್ಲಿ ಬಾವಲಿಗಳು ಪಟಪಟನೇ ರೆಕ್ಕೆ ಬಡಿಯೋ ಶಬ್ದ…ಹೌದೋ ಅಲ್ಲವೋ ಎಂಬಂತೆ ಕೇಳೋ ನರಿಗಳ ಊಳಿಡುವಿಕೆ…. ಒಂದೋ ಎರಡೋ. ಓದಿನಲ್ಲಿ ಮುಳುಗಿದ್ದಷ್ಟು ಹೊತ್ತೂ ಇಹದ ಪರಿವೇ ಇರಲಿಲ್ಲ ನನಗೆ.ಈಗ ಒಮ್ಮಿಂದೊಮ್ಮೆಗೇ ಸುತ್ತಲಿನ ಪ್ರತಿ ಶಬ್ದವೂ ಕಿವಿ ತಮಟೆಯ ಬಳಿಯಲ್ಲೇ ಮೊಳಗಿದಂತಾಗಿ ಭಯ ಹುಟ್ಟಿಸಿದವು.
     ಎಷ್ಟೇ ಭಯವಾದರೂ ಸರಿ ಮಲಗೋ ಮೊದಲು ಮಾಡಬೇಕಾದ ಕೆಲಸ ಮಾಡಲೇಬೇಕು, ಇಲ್ಲದ್ದಲ್ಲಿ ನಿದ್ರೇಯೂ ಸರಿಯಾಗಿ ಬಾರದು. ಮನೆವರೆಲ್ಲಾ ಗಡದ್ದು ನಿದ್ರೆಯಲ್ಲಿದ್ದರು.  ಯಾರನ್ನಾದರೂ ಎಬ್ಬಿಸಿ ಜೊತೆಗೆ ಕರೆದುಕೊಂಡು ಹೋಗಬಹುದಿತ್ತು, ಆದರೆ ಮತ್ತದೇ ಮಾಮೂಲಿ ವರಸೆಯ “ಯಂತಾ ಹೆದ್ರಿಕೆ, ಅಲ್ಲೆಂತ ಗುಮ್ಮ ಉಂಟಾ, ಹೋಗು ಮಾರಾತಿ” ಎಂದೋ”ಇಷ್ಟೊತ್ತಂಕಾ ಓದಿದ್ದಾ, ಕಣ್ಣೆಂತಕ್ಕೆ ಬರುತ್ತೆ ಹುಡ್ಗಿ, ಹೇಳಿದ್ದೊಂದೂ ಕೇಳಲ್ಲಪ” ಎಂದೋ ಬೈದಾರು ಎಂಬ ಅಳುಕು.
     ಹೆಚ್ಚು ಹೊತ್ತು ಇದನ್ನೆಲ್ಲಾ ಯೋಚಿಸುತ್ತಾ ಕೂರುವಂತಿರಲಿಲ್ಲ. ನಿದ್ರೆಯಿಲ್ಲದೇ ತಲೆ ಸಿಡಿಯುತ್ತಿತ್ತು. ಪೂರ್ಣ ಬೆಳಗಾಗೋ ಮೊದಲು ಸ್ವಲ್ಪವಾದರೂ ನಿದ್ರೆ ಮಾಡಲೇಬೇಕಿತ್ತು. ನಿದ್ರೆ ಬರಬೇಕೆಂದರೆ ನಾನೀಗ ಕತ್ತಲ ಹಿತ್ತಿಲಿನ ಬಚ್ಚಲಿಗೆ (ಜಲಬಾಧೆ ನಿವಾರಣೆಗೆ) ಹೋಗಲೇಬೇಕಿತ್ತು.
      ಅಂಜುತ್ತಾ ಅಳುಕುತ್ತಾ ಹಿತ್ತಿಲ ಬಾಗಿಲು ತೆಗೆದು ಹೊರಗಡಿಯಿಟ್ಟೆ. ಹೇಗೋ ಬಚ್ಚಲ ಕೆಲಸ ಪೂರೈಸಿ ಬಾವಿಕಟ್ಟೆಯ ಬಳಿ ಕಾಲು ತೊಳೆದು ಮನೆಯ ಸುರಕ್ಷಿತತೆಯ ಕಡೆ ಆತುರವಾಗಿ ನಡೆಯುತ್ತಾ ನೋಡುತ್ತೇನೆ; ದೂರದಲ್ಲಿ ಎರಡು ಮಿಣುಕು ಬೆಳಕುಗಳು!  ಒಂದೇ ಅಂತರದಲ್ಲಿ ಎರಡು ಮಿಣುಕು ಹುಳುಗಳು ಹಾರುತ್ತಿವೆಯೇನೋ ಎಂದು ಕಡೆಗಣಿಸುತ್ತಿದ್ದೆನೇನೋ, ಆದರೆ ಬೆಳಕುಗಳು ಮೆಲ್ಲಗೆ ನನ್ನೆಡೆಗೆ ಚಲಿಸುತ್ತಿವೆ! ಓಹ್ ಮಿಣುಕು ಹುಳಗಳಲ್ಲ ಅವು,ಎರಡು ಕಣ್ಣುಗಳು! ಜೊತೆಗೇ ಮೆಲ್ಲನೆ ಗುರುಗುಡುವ ಶಬ್ದವೂ ಬರುತ್ತಿದೆ. ಹುಣ್ಣಿಮೆ ಬೆಳಕಿನಲ್ಲಿ ಯಾವುದೋನಾಲ್ಕು ಕಾಲಿನ ಪ್ರಾಣಿ ನನ್ನೆಡೆ ಬರುತ್ತಿರುವುದು ಅಸ್ಪಷ್ಟವಾಗಿ ಕಂಡಿತು. ನಿತ್ತಲ್ಲೇ ಹೌಹಾರಿದೆ! 
        “ಪ್ರಾಣಿ ಯಾವುದಿರಬಹುದು, ಇಷ್ಟು ರಾತ್ರಿಯಲ್ಲಿ ಅಜ್ಜನ ಮನೆಯಂಗಳದಲ್ಲಿ ಏನು ಮಾಡುತ್ತಿರಬಹುದು”,ಊಹೂ….. ಇವೆಲ್ಲಾ ತಾಳ್ಮೆ, ವಿವೇಕಯುಕ್ತ ಯೋಚನೆಗಿಂತಾ ಭಯದ ಶಕ್ತಿಯೇ ಹೆಚ್ಚು. ಅಷ್ಟು ಹೊತ್ತೂ ಓದಿದ ಪುಸ್ತಕದಲ್ಲಿನ “ರುದ್ರಪ್ರಯಾಗದ ನರಭಕ್ಷಕನೇ” ನನ್ನನ್ನು ಬೇಟೆಯಾಡಲು ಬಂದಿದೆ ಎಂದು ಬಲವಾಗಿ ಅನಿಸಿತು. ತಡಮಾಡದೇ ದೊಡ್ಡ ಧ್ವನಿಯಲ್ಲಿ ಕೂಗುತ್ತಾ ಮನೆಯ ಹಿತ್ತಲ ಬಾಗಿಲಿನ ಕಡೆಗೆ ಓಡಲು ಶುರುಮಾಡಿದೆ. ಆ ಪ್ರಾಣಿಯೂ ಗುರುಗುಡುತ್ತಾ ವೇಗ ಹೆಚ್ಚಿಸಿಕೊಂಡು ನನ್ನ ಹಿಂದೆಯೇ ಬಂತು. ನಾನು ಮನೆಯ ಬಾಗಿಲ ಬಳಿ ಬರೋದರೊಳಗೆ ಕೂಗಿ ಮಾಡಿದ ಗದ್ದಲಕ್ಕೆ ಮಲಗಿದ್ದ ಅಜ್ಜ, ಅಜ್ಜಿ, ಅಮ್ಮ ಎಲ್ಲರೂ ದಡಬಡಿಸಿ ಎದ್ದು ನಾನಿದ್ದಲ್ಲಿಗೇ ಬಂದರು.
       ಭಯದಲ್ಲಿ ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ ನಾನು. ಹೇಳಬೇಕಾದ ಅಗತ್ಯ ಕೂಡಾ ಇರಲಿಲ್ಲ. ಗಲಾಟೆ ಕೇಳಿ ಬಂದವರಲ್ಲೊಬ್ಬರು ಹಿತ್ತಲ ಕರೆಂಟ್ ದೀಪದ ಸ್ವಿಚ್ ಹಾಕಿದ್ದರು. ಜಗ್ಗನೆ ಹೊಮ್ಮಿದ  ಬೆಳಕಿನಲ್ಲಿ  ನನ್ನ ಕಾಲ ಬುಡದಲ್ಲೇ ಬಾಲವಾಡಿಸುತ್ತಾ ನಿಂತಿತ್ತು ‘ಮನೆಯ ಮುದ್ದಿನ ನಾಯಿ-ಸೋನಿ’.
       “ಊಫ್! ಇದಕ್ಕಾಗಿ ಇಷ್ಟು ಹೆದರಿದೆನಾ, ಇಷ್ಟು ಪಾಪದ ನಾಯಿಮರಿಯನ್ನು ನರಭಕ್ಷಕ ಹುಲಿ,ಚಿರತೆಗೆ ಹೋಲಿಸಿ ಭಯಪಟ್ಟೆನಾ” ಎಂದು ನನ್ನ ತಲೆಗೆ ನಾನೇ ಮೊಟಕಿಕೊಂಡೆ. ಹಿತ್ತಲ ದೀಪ ಹಾಕದೇ ಬಚ್ಚಲವರೆಗೂ ಹೋದ ಪೆದ್ದುತನಕ್ಕೆ, ನಾಯಿಯನ್ನು ಹುಲಿಯೆಂದುಕೊಂಡ ಪುಕ್ಕಲುತನಕ್ಕೆ, ಬೆಳಗಿನ ಜಾವದತನಕ ನಿದ್ರೆಗೆಟ್ಟು ಕಥೆಪುಸ್ತಕ ಓದಿದ್ದಕ್ಕೆ ನನಗೂ, ಅಂಥಾ ತಲೆಕೆಡುವ, ಭಯ ಹುಟ್ಟಿಸುವ ಪುಸ್ತಕ ಬರೆದದ್ದಕ್ಕೆ “ಜಿಮ್ ಕಾರ್ಬೆಟ್” ಹಾಗೂ “ಪೂರ್ಣ ಚಂದ್ರ ತೇಜಸ್ವಿ”ಯವರಿಗೂ ಅಮ್ಮ ಮತ್ತು ಅಜ್ಜನಿಂದ ಮಧ್ಯರಾತ್ರಿಯಲ್ಲಿ  ಮಹಾಮಂಗಳಾರತಿ(ಬೈಗುಳ) ಅವ್ಯಾಹತವಾಗಿ ನಡೆಯಿತು.
       ಇಷ್ಟೆಲ್ಲಾ ನಡೆಯುವಾಗ ಘಂಟೆ ಮೂರರ ಸಮೀಪ ಬಂದಿತ್ತು.ಹಾಸಿಗೆ ಸೇರಿದಮೇಲೂ ಎಷ್ಟೋ ಹೊತ್ತಿನವರೆಗೂ ಜೋರಾಗಿ ಹೊಡೆದುಕೊಳ್ಳುತ್ತಿದ್ದ ಹೃದಯ ಯಾವಾಗ ಸಹಜವಾಯ್ತೋ, ನಿದ್ರೆ ಯಾವ ಘಳಿಗೆಯಲ್ಲಾವರಿಸಿತೋ ಒಂದೂ ತಿಳಿಯದು.
     ಅಂದು ಅಮ್ಮ ಬೈದ ಪ್ರತಿ ಬೈಗುಳವೂ ಜಿಮ್ ಕಾರ್ಬೆಟ್ರಿಗೂ ಪೂಚಂತೇಯವರಿಗೂ ಸಂದ ಗೌರವವೆಂದೇ
ಭಾವಿಸಿ ಓದುವ ಹವ್ಯಾಸವನ್ನು ಬಿಡದೇ ಮುಂದುವರಿಸಿದ್ದೇನೆ; ಮುಂದುವರೆಸುತ್ತಲೇ ಇದ್ದೇನೆ.ಏನೇ ಆಗಲಿ,ಏನೇ ಹೋಗಲಿ; ಓದಿನ ಬಂಡಿ ಬರದಲಿ ಸಾಗಲಿ. ಸರಿ ತಾನೇ?

ಊರಿಗೊಬ್ಳೇ ಪದ್ಮಾವತೀsssssss

    “ಜೀವನಾಂದ್ರೇ ಹುಡ್ಗಾಟ ಅಲ್ಲ. ಇಷ್ಟ್ ದಿನ ಆಡಿದ ಮರ್ಕೋತಿ ಆಟನೆಲ್ಲ ಇನ್ನು ಮರ್ತೇಬಿಡ್ಬೇಕು ನೀವೆಲ್ಲ. ಮುಂದೆ ಜೀವ್ನದಲ್ಲಿ ಏನಾಗ್ಬೇಕು ಅನ್ನೋದು ಈಗ್ಲೇ ತೀರ್ಮಾನ ಮಾಡ್ಕೊಳಿ ಮತ್ತದ್ರ ತಯಾರಿಗೆ ಚನ್ನಾಗ್ ಓದ್ರಿ. ಏನು? ಗೊತ್ತಾಯ್ತಾ? ಒಬ್ಬೊಬ್ರಾಗ್ ಹೇಳಿ ಏನಾಗ್ಬೇಕು ಅಂದ್ಕೊಂಡಿದೀರಾಂತ..ಹಾಂ?”
    ಯಾವ್ದೋ ವಿಷ್ಯಕ್ಕೆ ನಮ್ಗಳ ಮೇಲೆ ರಾಂಗಾಗಿದ್ದ ಮಂಜು ಮೇಷ್ಟ್ರು ಸಡನ್ನಾಗಿ ನಮ್ ಕಪಿಸೇನೆ ಮನಸ್ನಲ್ಲಿ ಒಂಚೂರು ಸೀರಿಯಸ್ನೆಸ್ಸು ಹುಟ್ಸೋ ಪ್ರಯತ್ನದಲ್ಲಿದ್ರು ಅನ್ಸತ್ತೆ. ಸರಿ, ನಾವು ಒಬ್ಬೊಬ್ರಾಗಿ ಡಾಕ್ಟ್ರು, ಎಂಜಿನಿಯರ್, ಟೀಚರ್ರು, ಫಿಲ್ಮ್ ಹೀರೋ ಅಂತ ಬಾಯಿಗೆ ಬಂದಿದ್ದ ಉದ್ಯೋಗ ಆರ್ಸ್ಕೊಳೋಕೆ ಶುರು ಮಾಡಿದ್ವಿ.ಐದ್ನೇ ಬೆಂಚಲ್ಲಿದ್ದ ಪದ್ದಿ; “ಸರ್, ನಾ ದೊಡ್ಡೋಳಾದ್ಮೇಲೆ ಮದ್ವೆ ಆಗ್ತೀನ್ರಿ” ಅಂತ ನಾಚ್ಕೊಳ್ತಾ ಹೇಳೋದೂ, ಕೊನೇ ಪಿರಿಯಡ್ ಮುಗಿತು ಅಂತ ಬೆಲ್ ಹೊಡ್ದಿದ್ದು ಒಟ್ಟೊಟ್ಟಿಗೇ ಆಯ್ತು. ಸ್ಕೂಲ್ ಮುಗೀತು ಅನ್ನೋದ್ನೂ ಮರ್ತು ಮೇಷ್ಟ್ರು ಪದ್ದೀನೇ ಆಶ್ಚರ್ಯದಿಂದ ನೋಡ್ತಿದ್ರು. ಅರೆಕ್ಷಣ ದಂಗಾಗಿದ್ದ ಮೇಷ್ಟ್ರು ಮತ್ತೆ ಸಾವರ್ಸ್ಕೊಂಡು ಮುಗುಳ್ನಕ್ಕು “ಅದೂ ಒಳ್ಳೆ ಉದ್ಯೋಗಾನೇ . ಗುಡ್,ಗುಡ್” ಅಂದು ಕ್ಲಾಸ್ ಮುಗ್ಸಿದ್ರು.
       ಆ ದೇವ್ರು ಒಬ್ಬೊಬ್ರಿಗೆ ಒಂದೊಂದು ವಿಷಯದಲ್ಲಿ ಧಾರಾಳತನ ತೋರಿಸ್ತಾನಂತೆ. ಕೆಲವರಿಗೆ ಸಿರಿತನದಲ್ಲಾದ್ರೆ ಮತ್ತೆ ಕೆಲವರಿಗೆ ಪ್ರತಿಭೆಯಲ್ಲಿ ಮತ್ತೆ ಕೆಲವರಿಗೆ ಕಷ್ಟಗಳ ವಿಷಯದಲ್ಲಿ. ಆದ್ರೆ ನನ್ನ ಬಾಲ್ಯ ಗೆಳತಿ ಪದ್ಮಾವತಿಗೆ ಈಸ್ಟ್ರೋಜನ್ನು ಅದೇ; ಹೆಣ್ಣುಭಾವನೆಗಳ ಹಾರ್ಮೋನು ಅದನ್ನು ತುಂಬಾ ಉದಾರವಾಗಿ ಕೊಟ್ಟಿದ್ನೋ ಏನೋ ಮಾತುಮಾತಿಗೂ ನಾಚಿಕೆ, ನಿತ್ನಿತ್ತಲ್ಲೇ ಕನಸು.
    ವಿಷ್ಯ ಏನಪ್ಪಾಂದ್ರೆ ನಮ್ಮ ಪದ್ಮಾವತಿಗೆ ಯಾನೇ ಪದ್ದೀಗೆ ಅವ್ಳಜ್ಜಿ ಅಂದ್ರೆ ಜೀವ. ಅಜ್ಜಿಗೂ ಅಷ್ಟೇ ಮೊಮ್ನಗಳಂದ್ರೇ ಪ್ರಾಣ. ದಿನಾ ರಾತ್ರೆ ಜೊತೇಲಿ ಮಲಗಿಸ್ಕೊಂಡು ಚಂದಚಂದದ ರಾಜ್ಕುಮಾರಿಯರ ಕಥೆ ಹೇಳ್ತಿದ್ರಂತೆ. ಆ ಕಥೆಗಳಲ್ಲಿ ಹೆಚ್ಚಿನವು ಕೊನೆಯಲ್ಲಿ ಸುಂದರನಾದ ರಾಜಕುಮಾರನನ್ನ ಮದುವೆಯಾಗೋದ್ರಲ್ಲಿ ಸುಖಾಂತ ಆಗೋಂಥವೇ ಅಲ್ವ. ಕಥೆಯೆಲ್ಲಾ ಮುಗಿಯುತ್ಲೂ ಅಜ್ಜಿ ಪದ್ದಿ ತಲೆ ಸವ್ರಿ “ಪದ್ದಿ ಬಂಗಾರಾ, ನೀನೂ ಒಳ್ಳೆ ಹುಡ್ಗಿಯಾಗಿದ್ದು, ಚನ್ನಾಗ್ ಓದಿ ಹತ್ನೇಕ್ಲಾಸು ಪಾಸ್ಮಾಡಿದ್ರೆ ಆ ಕಥೆ ಥರಾನೇ ಒಬ್ಬ ರಾಜ್ಕುಮಾರ ಬಂದು ನಿನ್ನ ಮದ್ವೆ ಮಾಡ್ಕೊಂಡು ಬಿಳಿ ಕುದುರೆಮೇಲೆ ಕರ್ಕೊಂಡೋಗ್ತಾನೆ ಗೊತ್ತಾ” ಅಂತಿದ್ರಂತೆ.
     ಪಾಪದ ಅಜ್ಜಿ, ಹಳೇ ಕಾಲ್ದವ್ರಲ್ವ. ಹತ್ನೇಕ್ಲಾಸೇ ದೊಡ್ಡ ಓದು ಅನ್ನೋ ಅಭಿಪ್ರಾಯದಲ್ಲಿ ಹಾಗಂದಿದ್ರೋ ಏನೋ. ದಿನಾ ಕಥೆಗಳಲ್ಲಿ ಬರೋ ರಾಜಕುಮಾರನಿಗೆ ಆಲ್ರೆಡೀ ಫಿದಾ ಆಗಿದ್ದ ನಮ್ಪದ್ದಿ ಅದ್ನೆಲ್ಲಾ ಗಮನ್ಸೋ ಸ್ಥಿತಿಲಿರ್ಲಿಲ್ಲ. ಓದಿನ ವಿಷ್ಯದಲ್ಲೂ ತುಸು ಪೆದ್ದಿಯೇ ಆದ ಪದ್ದಿ ನಾವು ಗೆಳತಿಯರೆಲ್ಲಾ ಅದೆಷ್ಟೇ ಚುಡಾಯ್ಸಿದ್ರೂ, ಕಾಲೆಳೆದು ಗೋಳಾಡ್ಸಿದ್ರೂ ಮುಂದೊಂದಿನ ರಾಜ್ಕುಮಾರ ಕುದುರೆಮೇಲೆ ಬಂದೇ ಬರ್ತಾನೆ, ತನ್ನ ಮದ್ವೆ ಆಗೇ ಆಗ್ತಾನೆ ಅಂತ ಬಲವಾಗಿ ನಂಬ್ಕೊಂಡಿದ್ಲು.
     ಆದ್ರೇನ್ಮಾಡೋದು. ಲೈಫನ್ನೋ ಲೈಫು ಐಸ್ಕ್ರೀಮ್ ಪಾರ್ಲರ್ರಲ್ವಲ್ಲಾ ನಮ್ಗೆ ಬೇಕಾದ ಫ್ಲೇವರ್ ಮಾತ್ರ ಆರಿಸ್ಕೊಳ್ಳೋಕೆ. ಪದ್ದಿ ಅಪ್ಪನ ವ್ಯಾಪಾರ ಮುಳ್ಗೋಗಿದ್ದೂ ಸ್ಕೂಲು ಬಿಡ್ಸಿ ಪದ್ದೀನ ದೂರದ ಹಳ್ಳೀಗೆ ಕರ್ಕೊಂಡು ಹೋಗಿದ್ದೂ ನಾವೆಲ್ಲ ಕಣ್ಣು ಮಿಟುಕ್ಸೋಷ್ಟ್ರಲ್ಲೆ ನಡ್ದೋಗಿತ್ತು. ಪದ್ದೀ,ಅವ್ಳ ಕನ್ಸುಗಳೂ,ಅಜ್ಜಿ ಕಥೆಗಳೂ,ಎಲ್ಲವೂ ನಮ್ಮಿಂದ ದೂರಾಗ್ಹೋಗಿದ್ವು.
     ಮೊನ್ನೆ ಸುಡುಸುಡು ಬಿಸ್ಲಲ್ಲಿ ಮಾರ್ಕೆಟ್ಟಿಂದ ಬರ್ತಾ ಯಾರೋ ನನ್ಹೆಸ್ರು ಕೂಗ್ದಂಗಾಯ್ತು. ತಿರ್ಗಿದ್ರೆ ಅದೇ ಪದ್ದಿ! ಉಸಿರಾಡ್ದೇ ಬಡಾಬಡಾ ಮಾತಾಡ್ತಿದ್ದಾಳೆ! “ಮಂದಾ ಮಂದಾಂತ ಗಂಟ್ಲರ್ಕೊಂಡು ಸತ್ನಲ್ಲೇ, ನನ್ಗುರ್ತಾಗ್ಲಿಲ್ವೆನೆ? ನಾನೇ ಪದ್ಮಾವತಿ, ಹೆಂಗಿದಿಯವ್ವಾ ಮಂದಾ?” ಇನ್ನೂ ಅದೆಷ್ಟು ಪ್ರಶ್ನೆ ಕೇಳ್ತಿದ್ಲೋ ಏನೋ ಅಷ್ಟ್ರಲ್ಲೇ ಅವಳ ಬಗ್ಲಲ್ಲಿದ್ದ ಕೂಸು ಅಳೋಕೆ ಶುರುಮಾಡ್ತು.
   ಸಿಕ್ಕಿದ್ದೇ ಛಾನ್ಸೂಂತ ನಾನು ರ್ಯಾಪಿಡ್ ಫಯರಿಂಗ್ ಶುರುಮಾಡಿದ್ದೆ. “ಅಯ್ಯೋ! ಪದ್ದಿ ಅಲ್ವ! ಇದೇನೇ! ಎಲ್ಲೇ ಕಳ್ದ್ಹೋಗಿದ್ದೆ ಇಷ್ಟು ವರ್ಷ! ಇದ್ಯಾರ್ದೇ ಮಗು! ನಿಂದಾ? ಕಡೆಗೂ ಸಿಕ್ಬಿಟ್ನಾ ನಿನ್ ರಾಜ್ಕುಮಾರಾ?”
ಸರಿ, ಇಬ್ರೂ ಮಾತಾಡೋ ಉತ್ಸಾಹದಲ್ಲಿದ್ವಿ; ಬಿಸ್ಲು ಜೋರಿತ್ತು. ಅಲ್ಲೇ ಕೂಲ್ ಜಂಕ್ಷನ್ಗೆ ನುಗ್ಗಿ ಜ್ಯೂಸ್ ಕುಡಿತಾ ಮಾತಾಡೋಣ ಅಂದ್ಕೊಂಡ್ವಿ.
     ನಾನು “ಹೇಗಿದೀಯೆ ಪದ್ದು” ಅನ್ನೋದ್ನೇ ಕಾಯ್ತಿದ್ಲೇನೋ ಮಹರಾಯ್ತಿ, ಪುರಾಣ ಶುರುವಿಟ್ಲು-“ಅಯ್ಯೋ ಬಿಡವ್ವ.ಯಾಕ್ಕೇಳ್ತಿಯ ಗೋಳ್ನ.ಸ್ಕೂಲ್ಬಿಡುಸ್ಕೊಂಡು ಹಳ್ಳಿಗ್ ಕರ್ಕೊಂಡೋದ್ರಾ, ಅಲ್ಲಿ ಗೋರ್ಮೆಂಟ್ ಸ್ಕೂಲಿತ್ತು, ಹೋಗ್ತಾಯಿದ್ದೆ.ಆ ಸ್ಕೂಲಾಗೆ ನನ್ನಷ್ಟು ಓದೋರೂ ಯಾರೂ ಇರ್ಲಿಲ್ಲ.ಜಾಣೆ ಅನ್ಸ್ಕೊಂಡಿದ್ದೆ. ಹತ್ನೇಕ್ಲಾಸು ಸೂಪರ್ರಾಗಿ ಪಾಸ್ಮಾಡಿ ಕುದ್ರೆ ಹತ್ತೋಣಾಂದ್ಕೊಂಡಿದ್ದೆ.ಹತ್ನೇ ಕ್ಲಾಸೇನು ಒಂಭತ್ನೂ ಪಾಸ್ಮಾಡಕ್ ಬಿಡ್ಲಿಲ್ಲ ಮನೆವ್ರು. ನಮ್ಮಾವ ಇದಾನಲ್ಲಾ ನಮ್ಮಾವಾ, ಅದೆ ಕಣೇ ನಮ್ಮಜ್ಜಿ ಕಡೇ ಮಗಾ… ನಾ ಪದ್ದಿನೇ ಮದ್ವೆ ಆಗ್ತಿನಿ ಅಂತ ಕುಂತ್ಬಿಟ್ಟಿದ್ದ. ನಮ್ಮಜ್ಜಿ ಬೇರೆ ಮಗನ್ಮದ್ವೆ ನೋಡ್ಬುಟ್ಟೇ ಸಾಯದು ಅಂತ ಕೂತಿತ್ತು. ಅಜ್ಜಿನ ನೆಮ್ದಿಯಾಗ್ ಕಳುಸ್ಬೆಕು ಅಂತ ಎಲ್ರೂ ನಂಗೆ ಬಲ್ವಂತ ಮಾಡಿ ಮದ್ವೆ ಮಾಡ್ಸೇಬಿಟ್ರು ನೋಡವ್ವ” ಅಂದು ನಿಟ್ಟುಸ್ರಿಟ್ಲು.
    “ಹೌದಾ ಪದ್ದು, ನಿನ್ನ ಯಾವಾಗ್ಲೂ ನೆನ್ಸ್ಕೊತಿದ್ವಿ ಕಣೇ ನಾವೆಲ್ಲ, ರಾಜ್ಕುಮಾರ ಸಿಗ್ಲಿಲ್ಲ ಅಂತ ನೊಂದ್ಕೊಬೇಡ, ಸುಖ್ವಾಗಿರು ಕಣೇ” ಅಂದೆ. ಯಾಕೋ ನಂಗೆ ಪದ್ದಿನ ನೋಡಿ ‘ಛೆ, ಪಾಪ’ ಅನ್ಸ್ತಿತ್ತು.’ ಅದು ಪದ್ದಿಗೂ ಗೊತ್ತಾಯ್ತು ಅನ್ಸುತ್ತೆ,                “ಏನ್ಗೊತ್ತಾ ಮಂದೂ,  ನಾನೂ ರಾಜ್ಕುಮಾರ ಸಿಗ್ಲಿಲ್ಲಾಂತ ಒಂದಷ್ಟು ದಿನ ಬೇಜಾರ್ ಮಾಡ್ಕೊಂಡಿದ್ದೆ. ಆದ್ರೆ ಮಾವ ಚನಾಗೇ ನೊಡ್ಕೋತಾನೆ, ಪ್ರೀತಿ ಮಾಡ್ತನೆ, ಎಲ್ಲಾ ಅನ್ಕೂಲ್ವಾಗೇ ಇದೇ ಅನ್ಸೋಕ್ಷುರುವಾಯ್ತು. ಆಮೇಲೆ ಬೇಜಾರು,ಅಸಮಾಧನಾ ಎಲ್ಲಾ ಹೊಂಟೋಯ್ತು ನೋಡವ್ವ. ಈಗಂತೂ ಮಾವ ಬಿಳಿ ಸ್ಕೂಟಿ ತಗೊಂಡಾನೆ, ಅದೇ ಕುದ್ರೆ ಹೋದಂಗೋಗ್ತದೆ. ಅಜ್ಜಿ ಹೇಳಿದ್ದು ಒಂಥರಾ ನಿಜಾ ಆತ್ನೋಡು” ಅಂತ ನಕ್ಕುಬಿಟ್ಲು.  “ಭಲೇ ಪದ್ದಿ, ಬೇಕಾಗಿದ್ದು ಸಿಗ್ಲಿಲ್ಲಾಂತ ಅಳ್ದೇ ಸಿಕ್ಕಿದ್ರಲ್ಲೇ ಖುಷಿ ಕಾಣ್ತಾಳಲ್ಲ” ಅನ್ಸಿ ಪದ್ದು ಮೇಲೆ ಸಕತ್ ಲವ್ ಬಂತು. ಅವ್ಳುನ್ನೂ ಅವ್ಳ ಕೂಸುನ್ನೂ ಮುದ್ಮಾಡಿ ಬೀಳ್ಕೊಟ್ಟೆ.
    ಪದ್ದು ಕಣ್ಣಿಂದ ಮರೆಯಾದಷ್ಟೂ ಮನಸ್ಸಿಗೆ ಹತ್ರವಾಗ್ತಾಯಿದ್ದಳೆ. ನಾವೆಲ್ರೂ ಅಷ್ಟೇ ಅಲ್ವಾ .. ಕನ್ಸಲ್ಲಿ ಕಾಣೋ ಖೀರಿಗಿಂತ ಕಣ್ಣೆದ್ರಿರೋ ಗಂಜಿ ನೀರು ಉತ್ತಮ ಅನ್ನೋದ್ನ ಕೆಲವೊಮ್ಮೆ ಮರ್ತೇಬಿಡ್ತೀವಿ. ದೊಡ್ಡ ಗುರಿ ಇಟ್ಕೊಂಡು ಅದ್ಕೋಸ್ಕರ ಶ್ರಮವಹಿಸೋದು ಒಳ್ಳೇದೇ ಆದ್ರೂ just in case ಕನಸು ಕೈಗೂಡದಿದ್ರೆ ಸುಮ್ನೆ ಕೊರಗಿ ಜೀವ್ನ ನರ್ಕ ಮಾಡ್ಕೊಳೋದ್ಕಿಂತ ಇರೋ ಪರಿಸ್ಥಿತಿ ಅನುಕೂಲಕರವಾಗಿದ್ದಲ್ಲಿ ಹೊಂದ್ಕೊಳ್ಳೋದೇ ಜಾಣ್ಮೆ ಅಲ್ವಾ. ನಮ್ಪದ್ದಿ ಜಾಣೆ,”I am beginning to learn that it is the sweet, simple things of life which are the real ones after all “ಅನ್ನೋ ನನ್ನ ಮೆಚ್ಚಿನ ಲೇಖಕಿ ಲಾರಾ ಇಂಗಲ್ಸಳ ಮಾತುಗಳಿಗೆ  ಪದ್ದಿ ಜೀವಂತ ಉದಾಹರಣೆ ಅನ್ನಿಸ್ತಿದ್ದಾಳೆ.   
      ಈಹೊತ್ತು ಇದನ್ನೆಲ್ಲಾ ನೆನಪಿಸ್ಕೊಂಡು ಬರೀತಾಯಿದ್ರೆ ಮನಸ್ಸಿನ ಮೂಲೆಲಿರೋ ಹಳೇ ಕೆಟ್ಹೋದ  ಗ್ರಾಮಫೋನೊಳಗಿಂದ ಕೈಲಾಶ್ಖೇರ್ ಒಂದೇ ಸಾಲನ್ನೇ ಪದೇಪದೇ ಕಿರಿಚ್ತಾಯಿದ್ದಾರೆ……ಯಾವ್ಹಾಡೂಂದ್ರಾ….ಅದೇ… ಊರಿಗೊಬ್ಳೇ ಪದ್ಮಾವತೀsssssss

ತಪ್ಪು ಮಾಡದವ್ರ್ ಯಾರವ್ರೇ.. ತಪ್ಪೇ ಮಾಡದವ್ರ್ ಎಲ್ಲವ್ರೆ

ಈಗ್ಗೆ ಇಪ್ಪತ್ತು ವರ್ಷಗಳಷ್ಟು ಹಿಂದಿನ ಮಾತಿದು. ಮೊಬೈಲ್ ಅಲ್ಲ ಲ್ಯಾಂಡ್ ಫೋನ್(ಸ್ಥಿರ ದೂರವಾಣಿ) ಕೂಡಾ ಅಲ್ಲೋ ಇಲ್ಲೋ ಒಂದೊಂದು ಮನೆಗಳಲ್ಲಿ ಮಾತ್ರ ಇದ್ದ, ರೇಡಿಯೋ ಇನ್ನೂ ತನ್ನ ವರ್ಚಸ್ಸು ತಕ್ಕಮಟ್ಟಿಗೆ ಉಳಿಸಿಕೊಂಡಿದ್ದ  ದಿನಗಳು. ಮನೆಯ ಮುದ್ದಿನ ಮಗಳಾಗಿ, ಅಜ್ಜ-ದೊಡ್ಡಮ್ಮಂದಿರ ಅಕ್ಕರೆಯ ಮೊಮ್ಮಗಳಾಗಿ ತುಂಬಾ ಸಮೃದ್ಧವಾಗಿದ್ದ ಬಾಲ್ಯ ನಂದು.
    ಮಕ್ಕಳಿಂದ ಸದಾ ಸೀರಿಯಸ್ನೆಸ್ ಒಂದನ್ನೇ ಅಪೇಕ್ಷಿಸಿದ ನನ್ನಜ್ಜ ಮೊಮ್ಮಕ್ಕಳಿಂದ ತುಂಬಾ ಚಟುವಟಿಕೆ, ತುಂಟತನಗಳನ್ನು ಬಯಸಿ, ಆನಂದಿಸುತ್ತಿದ್ದರು. ಮಕ್ಕಳು ಹೊರಗಿನ ತಿಂಡಿ, ಚಾಕ್ಲೇಟ್ ಇತ್ಯಾದಿ ತಿನ್ನದೇ ಆರೋಗ್ಯವಾಗಿ ಬೆಳೆಯಲಿ ಎಂದು ಅಪ್ಪನ ಆಸೆಯಾದರೆ; ‘ಕಲ್ಲು ತಿಂದು ಅರಗಿಸಿಕೊಳ್ಳೊ ವಯಸ್ಸಿದು, ಚಾಕ್ಲೇಟೊಂದು ಯಾವ್ಲೆಕ್ಕ, ತಿನ್ಲಿ ಪಾಪ’ಅನ್ನೊದು ಅಜ್ಜನ ಅಭಿಪ್ರಾಯ.
     ತಿಂಡಿ, ಚಾಕ್ಲೇಟ್ ತರೋ ಅಜ್ಜ ಅದನ್ಯಾವತ್ತೂ ನನ್ಕೈಗೆ ಕೊಟ್ಟಿದ್ದಿಲ್ಲ. ನಾನಾಗೇ ಅವರ ಸರಕುಗಳ ಮಧ್ಯ ಹುಡುಕಿ ಕಳ್ಳತನದಲ್ಲಿ ತಿಂದು, ಏನೂ ಗೊತ್ತಿಲ್ಲದಂತಿರೋದೂ, ಆಮೇಲವ್ರು ‘ಅಯ್ಯೋ ನನ್ ಚಾಕ್ಲೆಟ್ ಕದ್ಲೂ’ ಅಂತ ಸುಮ್ನೆ ತಗಾದೆ ತೆಗ್ಯೋದೂ ನಮ್ಮಿಬ್ಬರ ನಡುವಿನ ಆಟದಂತಾಗಿ ಹೋಗಿತ್ತು.
      ಹೀಗಿರುವಾಗ ಬ್ಯಾಂಕ್ ಉದ್ಯೋಗಿಯಾದ ನನ್ನಪ್ಪನಿಗೆ ದೂರದೊಂದು ಹಳ್ಳಿಗೆ ವರ್ಗವಾಗಿ ಅಮ್ಮ, ಅಣ್ಣ, ನಾನು ಎಲ್ಲರೂ ಆ ಊರಿನಲ್ಲೇ ಇರೋಹಾಗಾಯ್ತು. ಹಳ್ಳಿ ಅದೆಷ್ಟು ಪುಟ್ಟದಿತ್ತೆಂದ್ರೇ ಅದಕಿದ್ದಿದ್ದೇ ನಾಲ್ಕೋ ಐದೋ ಬೀದಿಗಳು. ಬೇಗನೇ ಹೊಸ ಜಾಗಕ್ಕೆ ಹೊಂದಿಕೊಂಡ ನಾನು ಸ್ಕೂಲು, ಗೆಳತಿಯರ ಮನೆ, ಅಪ್ಪನ ಬ್ಯಾಂಕ್ ಹೀಗೆ ಸಂಪೂರ್ಣ ಸ್ವಚ್ಛಂದವಾಗಿ ತಿರುಗಾಡಿಕೊಂಡಿದ್ದ ಸೊಗಸಾದ ದಿನಗಳವು….ಆಹ್!                   
  ಹಾಗೆ ತಿರುಗಾಡೋ ದಿನಗಳಲ್ಲೇ ಕಣ್ಣಿಗೆ ಮೋಡಿಮಾಡಿ ತನ್ನೆಡೆ ಸೆಳೆದುಕೊಂಡಿದ್ದು ಒಂದು ಪುಟ್ಟ ಗೂಡಂಗಡಿ. ಸುಮ್ಮನೇ ಕುತೂಹಲಕ್ಕೆ ಹತ್ತಿರ ಹೋದೆ ಅಷ್ಟೇ. ಕೊಬ್ಬರಿ ಮಿಠಾಯಿ, ಶುಂಠಿ ಪೆಪ್ಪರ್ಮೆಂಟ್, ಹತ್ತಿ ಮಿಠಾಯಿ, ಬೆಣ್ಣೆ ಮುರುಕು, ಹುಣಸೆಯ ಕುಟ್ಟುಂಡೆ, ಪಾನ್ ಪಸಂದ್, ಕಠ್ಟಾಮೀಠಾ, ಜೀರಿಗೆ ಪೆಪ್ಪರ್ಮೆಂಟ್, ಸಕ್ಕರೆ ಅಚ್ಚು, ಬಣ್ಬಣ್ಣದ ಲಾಲಿಪಾಪ್ಗಳೂ… ಓಹ್, ಕೊನೆಮೊದಲಿಲ್ಲದ ಸ್ವರ್ಗವೇ ಇಲ್ಲಿ ಗಾಜಿನ ಡಬ್ಬಿಗಳಲ್ಲಿ ತುರುಕಿಡಲ್ಪಟ್ಟಿವೆ.
         ಅಪ್ಪನ ‘ಕುರುಕು ತಿಂಡಿ ವಿರೋಧಿ’ ತತ್ವಕ್ಕೂ, ಗೂಡಂಗಡಿಯ ಸ್ವರ್ಗಕ್ಕೂ ಘರ್ಷಣೆ ಶುರುವಾಯ್ತು ನನ್ನ ಮನಸ್ಸಿನಲ್ಲಿ. ಗೆದ್ದಿದ್ದು ಗೂಡಂಗಡಿಯೆ ಎಂದು ಬೇರೆ ಹೇಳಬೇಕಿಲ್ಲ ತಾನೇ. ಹೆಚ್ಚೇನೂ ಬೇಡ, ಎಲ್ಲಾ ತಿಂಡಿಗಳನ್ನೂ ಒಂದೊಂದು ಸಾರಿ ಮನಸಾ ಸವಿಯಬೇಕೆಂದಷ್ಟೇ ಆಗಿತ್ತು ನನ್ನಾಸೆ.
        ಅಪ್ಪನನ್ನೊ ಅಮ್ಮನನ್ನೋ ಕೇಳೋದು ವ್ಯರ್ಥ ಪ್ರಯತ್ನ ಎನ್ನೋದು ಹೇಗೂ ಗೊತ್ತಿದ್ದ ವಿಷಯ.ಪಾಕೆಟ್ಮನಿ ಅನ್ನೋದು ಆಗಿನ್ನೂ ಚಾಲ್ತಿಗೆ ಬರುತ್ತಿದ್ದ ,ಮಧ್ಯಮವರ್ಗಕ್ಕೆ ಲಗ್ಝುರಿ ಎನಿಸಿಕೊಂಡ ದಿನಗಳವು.ನಮ್ಮಲ್ಲಂತೂ ಆ ಅಭ್ಯಾಸ ಇರಲಿಲ್ಲ. ಅಗತ್ಯ ವಸ್ತುಗಳೆಲ್ಲಾ  ಅಪ್ಪ ಅಮ್ಮನೇ ಕೊಂಡು ಕೊಡುತ್ತಿದ್ದ ಕಾರಣ ನಮಗೂ ಅಲ್ಲಿಯವರೆಗೆ ದುಡ್ಡನ್ನು ಹೊಂದೋ ಅಗತ್ಯವೇ ಇರಲಿಲ್ಲ. ಆದರೆ ಈಗ ಅಗತ್ಯ,ಅನಿವಾರ್ಯ, ಅತ್ಯಾಸೆ ಎಲ್ಲವೂ ಒಟ್ಟಾಗಿತ್ತು. ಅಜ್ಜನ ಚಾಕ್ಲೇಟ್ ಕದ್ದ ಅನುಭವವೂ ಜೊತೆಗಿತ್ತು. ಸರಿ, ದಿನಾ ಒಂದೋ ಎರಡೋ ರೂಪಾಯಿಗಳನ್ನ ಕದಿಯೋ ಕೆಲಸ ಶುರು ಮಾಡಿದೆ.
        ದಿನಾ ಗೆಳತಿ ಮನೆಗೆ ಅನ್ನೋದು, ಗೂಡಂಗಡಿಗೆ ಹೋಗೋದು.ನಮೂನೆ ಸಿಹಿತಿಂಡಿ ತಿನ್ನೋದು. ಸೂಕ್ಷ್ಮಮತಿ ಅಮ್ಮನಿಗೆ ನನ್ನ ನಾಲಿಗೆ ಬಣ್ಣವಾಗಿರೋದೂ, ಬಾಯಿಂದ ತಿಂಡಿಯ ಘಮ ಹೊಮ್ಮೋದೂ, ಇಷ್ಟಿಷ್ಟೇ ದುಡ್ಡು ಇಟ್ಟಲ್ಲೇ ಮಾಯವಾಗೋದೂ ಗೊತ್ತಾಗ್ತಿತ್ತು. ಗಂಭೀರವಾಗಿ ನೀತಿಕಥೆ ಓದೋ ಮಗಳು ಕಳ್ಳತನ ಕೂಡಾ ಮಾಡಬಹುದು ಎಂಬ ಕಲ್ಪನೆ ಇಲ್ಲದ ಕಾರಣ ನನ್ನ ಈ ಸಣ್ಣ “ಅಡ್ವೆಂಚರ್” ಯಾವುದೇ ತಡೆಯಿಲ್ಲದೆ ಒಂದಷ್ಟು ದಿನ ನಡೆಯಿತು.
       ಕಳ್ಳತನ, ಹೇಳಿದ ಸುಳ್ಳುಗಳು ಹೆಚ್ಚು ದಿನ ಮುಚ್ಚಿಡೋದು ಎರಡೂ ಕಷ್ಟದ ಕೆಲಸಗಳು. ಕಡೆಗೂ ಇದಕ್ಕೆಲ್ಲಾ ಒಂದಂತ್ಯ ಬಂದೇ ಬಿಡ್ತು. ಚಿಲ್ಲರೆ ಕಾಯಿನ್ಗಳೊಂದಿಗೆ ರೆಡ್ ಹ್ಯಾಂಡಾಗೇ ಸಿಕ್ಕಿಬಿದ್ದೆ. ನಂಗಿನ್ನೂ ನೆನ್ಪಿದೆ. ಒಂದೈದು ನಿಮಿಷಗಳು ಶಾಕ್ನಲ್ಲಿದ್ದೆ. ನಾನೆಷ್ಟು ಶಾಕ್ನಲ್ಲಿದ್ನೋ ಅಷ್ಟೇ ಶಾಕ್ ಅಪ್ಪ ಅಮ್ಮನ ಮುಖದಲ್ಲೂ ಇತ್ತು ಅನ್ನಿಸುತ್ತೆ. ಶಾಕ್ ಕಳೆದ ಮೇಲೆ ಮುಂದೇನಾಗತ್ತೋ ಅಂತ ತುಂಬಾ ಭಯವಾಗ್ತಿತ್ತು.
         ಸ್ವಲ್ಪ ಹೊತ್ತು ಸುಮ್ಮನಿದ್ದ ಅಪ್ಪ ನಿಧಾನವಾಗಿ ದುಡ್ಡು ಕದ್ದ ಕಾರಣ ಕೇಳಿದ್ರು. ನನ್ನ ತಿಂಡಿ ಪುರಾಣ ಕೇಳಿ ಮನದಲ್ಲೇ ಏನೇನೋ ಚಿಂತೆ ಮಾಡ್ತಿದ್ರು. “ತಿಂಡಿಗೆ ಆಸೆಪಡೋದು ತಪ್ಪಲ್ಲ ಪುಟ್ಟಿ, ಆದ್ರೆ ಅದೆಲ್ಲ ಕ್ಲೀನಾಗಿರುತ್ತಾ, ಆರೋಗ್ಯಕ್ಕೆ ಒಳ್ಳೆದಾ ಅನ್ನೋದಷ್ಟೇ ನಮ್ಗೆ ಯೋಚ್ನೆ. ದುಡ್ಡು ತೆಗ್ದಿದ್ದು……..ಹೂ.. ತಪ್ಪು ಅಂತ ಗೊತ್ತಿದ್ದೂ ಮಾಡಿದೀಯ. ನಿಂಗೆ ಶಿಕ್ಷೆ ಕೊಟ್ಟು ಏನುಪ್ಯೋಗ, ಇನ್ನಾದ್ರೂ ನೀ ಹಿಂಗೆಲ್ಲ ಮಾಡಲ್ಲ ಅಂದ್ಕೊಂತಿನಿ.ದುಡ್ಡಿಡೋ ಜಾಗ ಬದ್ಲಾಯ್ಸಲ್ಲ ನಾನೀಗ. ನಿನ್ನ ನಂಬಬೇಕು ಅನ್ನೋ ನಿರ್ಧಾರ ಬದ್ಲಾಗೋ ಹಾಗ್ಮಾಡ್ಬೇಡ.” ಅಂತಷ್ಟೇ ಹೇಳಿದ್ರು.
          ಹೇಳಿದ ಅಪ್ಪ, ಅದಕ್ಕೆ ಸಾಕ್ಷಿಯಾದ ಅಮ್ಮ ಆ ಘಟನೆನ ಪೂರ್ತಿ ಮರ್ತೇಬಿಟ್ಟಿರಬೇಕು. ನಾನು ಮಾತ್ರ ಯಾವ್ದೊಂದನ್ನೂ ಮರೆತಿಲ್ಲ. ಮತ್ತೆ ಇನ್ಯಾವತ್ತೂ ಕದಿಯೋ ಯೋಚನೆ ಕೂಡಾ ಬರ್ಲಿಲ್ಲ ನನ್ತಲೆಗೆ. ಡಿಯರ್ ಅಪ್ಪಾ; ನಿಮ್ಮ ನಂಬಿಕೆಯೇ ನನಗೆ ನೀವಿತ್ತ ಶ್ರೀರಕ್ಷೆ.
             ………………………………….
      ಉಪ್ಪs ತಿಂದs ಮ್ಯಾಲೆ ನಿರs ಕುಡಿಯಲೇ ಬೇಕು.
ತಪ್ಪs ಮಾಡಿದಮ್ಯಾಲ ಶಿಕ್ಷೆ ಅನುಭವಿಸಲೆ ಬೇಕು..
   ,ಹೌದಾ! ನಿಜಾನಾ? ಅನ್ನಿಸುತ್ತದೆ ಈ ಹಾಡು ಕೇಳಿದಾಗಲೆಲ್ಲ. ಉಪ್ಪು ನೀರಿನ ವಿಷಯದಲ್ಲಿ ಯಾವ ಅನುಮಾನ ಕೂಡ ಇಲ್ಲ ನಂಗೆ. ಆದ್ರೆ ತಪ್ಪಿಗೆಲ್ಲಾ ಬರೀ ಶಿಕ್ಷೆಯೊಂದೇ ಅಂತಿಮ ಅಲ್ಲ. ತಪ್ಪಿಗೆ ಶಿಕ್ಷೆ ಕೊಡೋ ಮೂಲ ಉದ್ದೇಶ ತಪ್ಪಿನ ಬಗೆಗೆ ಅರಿಕೆ ಮೂಡ್ಸೋದೂ, ಪಶ್ಚಾತಾಪ ಹಾಗೂ ಪ್ರಾಯಶ್ಚಿತ ಮಾಡ್ಕೊಳೋವಂತೆ ಮನಪರಿವರ್ತಿಸೋದೂ ಆಗ್ಬೇಕೇ ಹೊರತು ಬರಿಯ ಕಾಟಾಚಾರದ ಕ್ರಮದಂತೆ ಒಂದು ಶಿಕ್ಷೆ ಅಂತ ಕೊಡೋದೂ, ಹೊಡಿ-ಬಡಿ-ಕೊಲ್ಲುಗಳಂಥಾ ಶಿಕ್ಷೆಗಳೂ ಯಾವ ಉಪ್ಯೋಗನೂ ಇಲ್ಲ ಅಂತ ನನ್ನಭಿಪ್ರಾಯ. 
      ಶಿಕ್ಷೆ ನಮ್ಮಲ್ಲಿ ಭಯ ಮೂಡಿಸೋದು, ಆ ಮೂಲಕ ತಪ್ಪು ದಾರಿಗೆ ಹೋಗದಂತೆ ತಡೆಯೋದೂ ಒಂದು ಹಂತದವರೆಗೆ ಒಳ್ಳೆಯದೇ. ಆದರೆ ಅದು ತಾತ್ಕಾಲಿ ಅಷ್ಟೇ.ಮನಸ್ಸಿಗೆ ಹೇರಿರೋ ಭಯ ಇಲ್ಲವಾದಾಗ ಮತ್ತದೇ ತಪ್ಪು ಮಾಡೋ ಆಸೆ ನಮ್ಮಲ್ಲುಂಟಾದ್ರೆ ಅಲ್ಲಿಗೆ ಭಯಪಡಿಸೋ ಶಿಕ್ಷೆಯ ಉದ್ದೇಶ ವ್ಯರ್ಥವಾದಂತೇ. ಅದರ ಬದಲು ತಪ್ಪು ಅಂತ ಕೆಲವು ಕೆಲಸಗಳನ್ನು ಯಾಕೆ ಕರೀತೀವೋ, ಅದನ್ನು ಮಾಡೋದರಿಂದ ನಮಗೂ, ಇತರರಿಗೂ ಯಾವರೀತಿ ತೊಂದರೆ,ಅನಾನುಕೂಲ ಆಗಬಹುದೋ ಅನ್ನೋದನ್ನ ಎಳವೆಯಿಂದಲೇ ಮಕ್ಕಳಿಗೆ ತಿಳಿಹೇಳೋದು, ನಾವೂ ಸಾಧ್ಯವಾದಷ್ಟು ಸೂಕ್ತ ಮಾರ್ಗದಲ್ಲಿ ಜೀವಿಸಿ ಕಿರಿಯರಿಗೆ ಮಾದರಿಯಾಗೋದು ಉತ್ತಮ ಅಲ್ಲವೇ…

ಚಿಂಟುವಿಗೊಂದು ಪತ್ರ

ಮುದ್ಮರಿ ಚಿಂಟೂ,
ಕಥೆಗಳಂದ್ರೇ ಪ್ರಾಣ ತಾನೇ ನಿನ್ಗೆ. ಇಗೋ ಒಂದು ಕಥೆ ಹೇಳೋಣಾನ್ಸ್ತಿದೆ.ಕೇಳು-
     ಒಂದೂರು, ಅಲ್ಲೊಬ್ಳು ಶಾಪಗ್ರಸ್ತ ಹುಡುಗಿ. ಕುರೂಪದ ಮುಖ ಅವ್ಳ ಶಾಪ ಆದ್ರೆ ಆ ಕುರೂಪದ ಸಹಿತಾ ಅವ್ಳನ್ನ ಒಪ್ಪಿ,ಪ್ರೀತ್ಸೋರು ಆ ವಿಮೋಚನೆಯ ಕೀ. ಶಾಪ ಹೊತ್ಗೊಂಡು ಬದ್ಕೋಕಾಗುತ್ತಾ. ಸರಿ, ಮನೆಮಂದಿತೆಲ್ಲಾ ಸೇರಿ ಅವ್ಳು ಶಾಪ ವಿಮೋಚಕ ಆ ಪ್ರೇಮಿ ಯಾರೋ ಅಂತ ಹುಡುಕ್ತಾಯಿರ್ತಾರೆ. ಹುಡ್ಗಿನೋ ಸಕಲ ವಿದ್ಯಾ ಪಾರಂಗತೆ, ಬುದ್ಧಿವಂತೆ, ಸದ್ಗುಣಿ. ಆದ್ರೂ ಅವ್ಳಿಗೆ ತನ್ನ ಬಗ್ಗೆ ತನ್ನ ಕುರೂಪಿನ ಬಗ್ಗೆ ತುಂಬಾ ಕೀಳರಿಮೆ, ಅಸಮಧಾನ. ತನ್ನದಲ್ಲದ ತಪ್ಪಿಗೆ ತಾನು ಶಿಕ್ಷೆ ಅನುಭವಿಸ್ತಿದಿನಿ, ಯಾರಾದ್ರೂ ನನ್ನ ಪ್ರೀತ್ಸಿ, ಈ ಶಾಪದಿಂದ ಮುಕ್ತಿ ಕೊಡ್ಸಿ ಅಂತ ಕಂಡಕಂಡವ್ರ್ಹತ್ರ ಎಲ್ಲಾ  ಅಂಗ್ಲಾಚ್ತಾಯಿರ್ತಾಳೆ ಕಣೋ ಬಂಗಾರೂ, ಛೆ ಪಾಪ ಅಲ್ವಾ.
   ಹುಡುಗಿಯ ಒಳ್ಳೆ ಗುಣಗಳಿಗೆ ಎಷ್ಟೇ ಜನ ಮನಸೋತ್ರೂ ಆ ಕುರೂಪದಿಂದ ಯಾರೊಬ್ರೂ ಅವ್ಳುನ್ನ ಕೈಹಿಡೊಯೋ ಧೈರ್ಯ ಮಾಡೋದಿಲ್ಲ. ಅಕಸ್ಮಾತ್ ಈ ಶಾಪ-ಗೀಪ ಎಲ್ಲಾ ಸುಳ್ಳಾಗಿದ್ದು ಅವ್ಳು ಕುರೂಪಿಯಾಗೇ ಉಳ್ದುಬಿಟ್ರೆ! ಅನ್ನೋ ಆತಂಕ ಎಲ್ರಿಗೂ. ಕಡೆಗೊಬ್ಬ ಬಡಪಾಯಿ ಹುಡುಗನ್ನ ಎಲ್ರೂ ಸೇರಿ “ಅವ್ಳುನ್ನ ಮದುವೆ ಆಗು, ಪ್ರೀತ್ಸು, ಪಾಪ- ಈ ಶಾಪದಿಂದ ಮುಕ್ತಿ ಕೊಡು”ಅಂದು ಒಪ್ಪಿಸಿಯೂಬಿಡ್ತಾರೆ. ಮುಂದೇನಾಯ್ತು ಅಂತಿಯಾ ಕಂದಾ, ಕೇಳು…
     ಇನ್ನೇನು ಆ ಹುಡುಗ ಇವ್ಳನ್ನ ಮದುವೆಯಾಗ್ಬೇಕು, ತಾನು ಅವಳನ್ನ ಸ್ವೀಕರ್ಸ್ತೀನಿ ಅಂತ ಒಲ್ಲದ ಮನಸ್ನಿಂದಾನೇ ಘೋಷಣೆ ಮಾಡ್ಬೇಕು- ಊರೆಲ್ಲಾ ಆ ಹುಡುಗಿಯ ಶಾಪ ವಿಮೋಚನೆಯ ಡ್ರಾಮಾ ನೋಡೋಕೆ ಕುತೂಹಲದಿಂದ ನೆರೆದಿದ್ರೆ ಈ ಪಾಪದ ಹುಡುಗಿ ಮನ್ಸಲ್ಲಿ ನೂರು ತಲ್ಲಣಗಳು.
  “ಓಹ್, ಈಗ ಇವನು ನನ್ನನೊಪ್ಪಿಬಿಡ್ತಾನಾ, ನನ್ನ ಶಾಪ ಕಳ್ದು ಸುಂದರವಾದ ರೂಪ ನಂದಾಗುತ್ತಾ, ಹೇಗಿರ್ಬಹುದು ಆ ಹೊಸಾ ಮುಖ, ನಂಗೇ ಪರಿಚಯ ಇಲ್ಲದ್ದು, ಇಷ್ಟು ದಿನ ಕನ್ನಡಿಯಲ್ಲಿ ಕಾಣದ್ದು ಈಗ ನಂದಾಗುತ್ತಾ! ನನ್ನಸ್ಥಿತ್ವದ ದೊಡ್ಡ ಭಾಗ ಇಲ್ಲವಾಗುತ್ತಾ.. ಈಗಿನ ನಾನು ಇಲ್ಲವಾಗ್ತಿನಾ.. ಅಂತೆಲ್ಲಾ ಯೋಚಿಸ್ತಾ ಕೂಗಿ ಹೇಳ್ತಾಳೆ “ಬೇಡ ಬೇಡ, ನನ್ಯಾರೂ ಬದ್ಲಾಯ್ಸೊದ್ ಬೇಡ,ಈ ಕೆಟ್ಟ ರೂಪವೇ ನಂಗಿರ್ಲಿ, ನಾನ್ಹಿಗಿರೋದೇ ನಂಗಿಷ್ಟ.I love the way I am”
      ಆ ಕ್ಷಣ ಅವ್ಳು ಶಾಪವಿಮುಕ್ತ ಸುಂದರ ಹುಡುಗಿಯಾಗ್ತಾಳೆ.ಎಲ್ಲರೂ ಖುಷಿಯಾಗಿರ್ತಾರೆ, ಕಥೆ ಸುಖಾಂತವಾಗುತ್ತೆ blah blah blah…
     ಕಥೆಗೆ ಸುಖಾಂತ ಬೇಕೆನ್ಸಿದಾಗ ಕಥೆಗಾರನೋ ನಿರ್ದೇಶಕನೋ ಒದಗಿಸ್ತಾರೆ ಕಣೋ ಮರಿ(ಮೇಲಿನ ಕಥೆ ಕೂಡಾ ಒಂದು ಸಿನಿಮಾದ್ದು ಗೊತ್ತಾ) ಆದ್ರೆ ನಮ್ಮ ಬದುಕೇನೂ ಸಿನೆಮಾ ಅಲ್ಲ ಅಲ್ವ. ಸುಖ,ದುಃಖ ಎಲ್ಲದಕ್ಕೂ ನಾವೇ ಹೊಡ್ದಾಡ್ಬೇಕು ನೋಡು. ಏನೆಲ್ಲಾ ಕಷ್ಟಗಳ್ನೂ, ಹೋರಾಟಗಳ್ನೂ ಗೆಲ್ಲೋ ನಮ್ಗೂ ಕೂಡ ಸಾಕುಪ್ರಾಣಿಥರ ಮುದ್ಮಾಡಿ ಮನ್ಸಲ್ಲಿಟ್ಕೊಂಡಿರ್ತಿವಲ್ವ ಈ ಕೀಳರಿಮೆ ಅನ್ನೋ ಭೂತಾನಾ.. ಅದ್ನ ಗೆಲ್ಲೋದು;ಅಬ್ಬಬ್ಬಾ.. ಭೀಕರ ಯುದ್ಧ.
      ಮೊನ್ನೆ ‘ಪ್ರತಿಭಾ ನಂದಕುಮಾರ್’ರ ಆತ್ಮಕಥೆ “ಅನುದಿನದ ಅಂತರಗಂಗೆ”ಓದುವಾಗ ನನ್ನ ಚಕ್ಕನೆ ಹಿಡಿದು ನಿಲ್ಲಿಸಿದ ಸಾಲ್ಗಳಿವು ನೋಡು,” ನನ್ನಲ್ಲಿ ಆತ್ಮವಿಷ್ವಾಸದ ಕೊರತೆ. ಪಿಯೂಸಿಯಲ್ಲಿ ನನಗೆ ಎಂತಹ ಕೀಳರಿಮೆ ಇತ್ತು ಎಂದರೆ ಬದುಕೇ ಕರಾಳ ಎನ್ನಿಸುತ್ತಿತ್ತು”;”ಪ್ರೀತಿಸಲು ಸೌಂದರ್ಯ ಅತಿ ಮುಖ್ಯ ಎಂದು ಭ್ರಮಿಸಿದ್ದ ನಾನು ಯಾರೂ ನನ್ನನ್ನು ಪ್ರೀತಿಸಲಾರರು ಎಂದು ಬಲವಾಗಿ ನಂಬಿದ್ದೆ.”
   ಅಂಥಾ ಧೀಮಂತ ಕವಯಿತ್ರಿಗೂ ಎಳವೆಯಲ್ಲಿ ನನ್ನಂಥದೇ ಭಾವನೆಗಳು ಕಾಡಿದ್ದುವಲ್ಲ ಅಂತ ಆಶ್ಚರ್ಯ ಆಯ್ತು ಮಾರಾಯಾ. ನಾನಂತೂ ಪ್ರತಿ ಸಾರಿ ದೇವರ ಮುಂದೆ ನಿಂತಾಗ್ಲೂ ಭಕ್ತಿಯಿಂದ ಕೇಳ್ತಿದ್ದೆ “ದೇವ್ರೇ, ಮೂಗಿನ ಮೇಲಿರೋ ಈ ಕನ್ನಡಕಾನ ಹೇಗಾದ್ರೂ ತೊಲಗಿಸು. ನಕ್ರೆ ಹಲ್ಗಳು ಕಾಣೋಹಾಗ್ಮಾಡು..ಒಟ್ನಲ್ಲಿ  ನಾ ಚನ್ನಾಗ್ ಕಾಣೋ ಹಾಗ್ಮಾಡು, ಎಲ್ರೂ ಅಂಬೇಡ್ಕರ್, ಗಾಂಧಿ ಅಂತೆಲ್ಲಾ ಅಂತಾರೆ, ನಂಗ್ಯಾರೂ ಸೈಟೊಡಿಯಲ್ಲ ಕಣೋ ಭಗ್ವಂತಾ.. ಪ್ಲೀಸ್ ನನ್ನ ಚೂರೇ ಚೂರು ಚಂದ ಮಾಡು” ಅಂತ. ಸೌಂದರ್ಯಕ್ಕೆ ಸಿಗೋದು ಅಭಿಮಾನ ಮಾತ್ರ, ಉತ್ತಮ ನಡುವಳಿಕೆ, ವ್ಯಕ್ತಿತ್ವ, ಸ್ವಭಾವ ಇವುಗಳೇ ಪ್ರೀತಿಗೆ, ಬದುಕಿಗೆ ಮುಖ್ಯ ಅನ್ನೋದು ತಲೆಗೇ ಹೋಗೋಲ್ವಲ್ಲಾ ಆ ಅಡಲಸೆಂಟ್ ಏಜಿಗೆ… ನಗ್ತಿದ್ದೀಯಾ ಕೂಸೂ…
     ಹದಿವಯಸ್ಸೇ ಹಾಗೆ ಕಣೋ ಕಂದಾ, ಅಮುಖ್ಯವಾದುದ್ದನ್ನ ಮನ್ಸಿನ ಕೇಂದ್ರವಾಗಿಸಿ ಮುಖ್ಯವಾದದ್ದನ್ನೆಲ್ಲಾ ದೂರ ತಳ್ಳಿ ನಮ್ಮನ್ನ ಸತ್ವಪರೀಕ್ಷೆಗೋಳಪಡಿಸತ್ತೆ ನೋಡು. ತುಂಬಾ ಪ್ರೀತ್ಸೋ ಆತ್ಮೀಯರಿಗಿಂತ ಅದ್ಯಾರೋ ಫ್ರೇಮಲ್ಲೇ ಇಲ್ಲದ ಜೀವ ಹತ್ರ ಅನ್ಸೋಕೆ ಶುರುವಾಗತ್ತೆ. ಅವರ್ಯಾರದೋ ಅಂಗೀಕಾರಕ್ಕೆ, ಸಮ್ಮತಿಗೆ ಪಡಬಾರದ ಪಾಡು ಪಡೋಹಾಗೆ ಮಾಡುತ್ತೆ ಮನ್ಸು. ಹಾಗಾದಾಗ್ಲೇ ಬೇಡದ ವಿಷ್ಯಗಳಿಗೆ, ಅಂದ್ರೆ- ಬಾಹ್ಯ ರೂಪ, ಉಡುಗೆ-ತೊಡುಗೆ, ಉಪ್ಯೋಗ್ಸೋ ಗ್ಯಾಜೆಟ್ಸು, ಒಣ ಸ್ಟೇಟಸ್ಸು ಇಂಥವು ಮುಖ್ಯ ಆಗಿ ನಮ್ಮೊಳಗಿನ ಪ್ರತಿಭೆ, ಜಾಣ್ಮೆ, ಧೈರ್ಯ ಎಲ್ಲಾದನ್ನೂ ನಾವೇ ಕಡೆಗಣ್ಸಿ ಬಿಡ್ತಿವಿ ಗೊತ್ತಾ.
     ಮುಖ್ಯ ಏನ್ಗೊತ್ತಾ ಮುದ್ದಮ್ಮಾ; ನೀನು ಹೇಗಿದ್ದೀಯೋ ಹಾಗೆ ನಿನ್ನ ನೀನು ಪ್ರೀತ್ಸೊದು. ‘ಹೇ,ಅದ್ಯಾವ್ಮಹಾ’ ಅನ್ಬೇಡ. ನಿನ್ನ ನೀನು ಸಂಪೂರ್ಣವಾಗಿ ಒಪ್ಪಿಕೊಂಡ ದಿನ ಬೇಡದ ಕೀಳರಿಮೆಗಳಿಗೆ ನಿನ್ಮನ್ಸಲಿ ಜಾಗ ಇರೋಲ್ಲ ನೋಡು. ಹಾಗೇ ವಿನಾಕಾರ್ಣ ಇನ್ಯಾರನ್ನೊ ಮೆಚ್ಚಿಸ್ಬೇಕಾದ ಅಗತ್ಯ ಕೂಡಾ ಇರೋದಿಲ್ಲ trust me. ಸರಿಯಾದ ಕೆಲ್ಸಗಳ್ನ ಮನ್ಸಿಗೆ ಹಿತವಾದ ರೀತಿಯಲ್ಲಿ ಮಾಡೋ ಅವ್ಕಾಶ ನಿಂದಾದಾಗ ‘ಲೈಫು ಸೂಪರ್ ಗುರೂ’ ಅನ್ಬಹುದು ಮನಸ್ಪೂರ್ತಿಯಾಗಿ.
      ಈಗ ಇದನ್ನೆಲ್ಲಾ ನಾ ಹೇಳಿದ್ರೆ ತಿಳ್ಕೊಳೋ ವಯಸ್ಸಲ್ಲ ನಿಂದು-I know. ಆದ್ರೆ ಮುಂದೊಂದಿನ ಈ ಮಾತ್ಗಳ ಅಗತ್ಯ ಬರ್ಬಹುದು ನಿಂಗೆ, ಆಗ ಹೇಳಿದ್ನ ಕೇಳೋ ವ್ಯವಧಾನ ಇದ್ಲಿದ್ರೂ ಹೀಗೆ ಪತ್ರ ಬರ್ದ್ರೆ ಓದ್ತೀಯ ಅನ್ಸ್ತು. ಇಷ್ಟೇ ಇಷ್ಟು ಕೀಳರಿಮೆಯಿಂದ ನಾನನುಭವ್ಸಿದ ಒಬ್ಬಂಟಿತನ,ಹಿಂಜರಿಕೆ ,ಕಳ್ಕೊಂಡ ಅವ್ಕಾಶಗಳು,ಕೈತಪ್ಪಿದ ಕನ್ಸುಗಳು ಈಗ ನನ್ನ ಕಾಡೋ ಹಂಗೆ ನಿನ್ನ್ಯಾವತ್ತೂ ಕಾಡದೇಯಿರ್ಲಿ ಅಂತ ಹೇಳ್ದೆ ಕಣೋ ಮರೀ.ಓದಿದ ದಿನ ಬಹುಶಃ  “such a woodpecker you are, stop your carpentry” ಅಂತೀಯೇನೋ….ನಾನೂ ನಿನ್ನಜ್ಜ, ಅಮ್ಮಮ್ಮನಿಗೆ ಹಾಗೇ ಅಂದಿದ್ದೆ.ಪರ್ವಾಗಿಲ್ಲ ಬಿಡು.
                                ಸಿಹಿ ಮುತ್ತುಗಳೊಂದಿಗೆ
                                          ನಿನ್ನಮ್ಮ.

ಕಾಡುವ ಕಥೆಗಳೂ,ಪಾಠ ಕಲಿಸುವ ಪಾತ್ರಗಳೂ…

ಅವನೊಬ್ಬ ಸಾಧಾರಣ ಮನುಷ್ಯ.”ಚಕ್” ಎಂದಲ್ಲವೇ ಅವನ ಹೆಸರು? ಹೆಸರೂ ಕೂಡಾ ಸಾಮಾನ್ಯವೆ. ಫೆಡೆಕ್ಸ್’ನ ಕೊರಿಯರ್ ಜಾಲದಲ್ಲಿ ಅವನೂ ಒಬ್ಬ ಕಾರ್ಮಿಕ. ಸಮಯಪಾಲನೆ ಹಾಗೂ ಕರ್ತವ್ಯಪ್ರಙ್ಞೆಯ ಹೊರತು ನೆನಪಿನ್ನಲ್ಲಿ ಉಳಿಯುವಂಥ ಯಾವ ವಿಶೇಷವೂ ಇರಲಿಲ್ಲ ಅವನಲ್ಲಿ,ಅವನ ಬದುಕಲ್ಲಿ. ಓಹ್.. ಇಲ್ಲ ಇಲ್ಲ, ಇದ್ದಳಲ್ಲ ಅವಳೊಬ್ಬಳು ಪ್ರೇಯಸಿ.ಪ್ರೇಮಭಾವಕ್ಕಿಂತ ವಿಶೇಷವಾದುದು ಇನ್ನೇನಿದೆ ಜಗತ್ತಿನಲ್ಲಿ ಅಲ್ಲವೇ.
      “ಸ್ವಲ್ಪ, ಇನ್ನು ಸ್ವಲ್ಪೇಸ್ವಲ್ಪ ದಿನ ಸಮಯ ಕೊಡು, ಕೆಲಸಗಳೆಲ್ಲ ಮುಗಿದಾಗ ಮದುವೆಯಾಗುವಾ” ಎಂದು ಅವಳಿಂದ ಬೀಳ್ಕೊಟ್ಟಿದ್ದ.ಆಗವಳು ನಕ್ಕ ನಗೆಗೆ, ಕೊಟ್ಟ ಹೂಮುತ್ತಿಗೆ ಅದೆಂಥದೋ ದೈವೀ ಶಕ್ತಿ ಇದ್ದಿರಬಹುದು. ಅಂತೆಯೇ ಇಡೀ ವಿಮಾನ ತರಗೆಲೆಯಂತೆ ತತ್ತರಿಸಿದರೂ,ಮಿಕ್ಕೆಲ್ಲಾ ಯಾತ್ರಿಗಳು ಹೇಳಹೆಸರಿಲ್ಲದಂತಾದರೂ ಇವನೊಬ್ಬನೇ ಬದುಕುಳಿದಿದ್ದ. ಅದಾವುದೋ ಹೆಸರರಿಯದ ದ್ವೀಪದಲ್ಲಿ, ಒಬ್ಬಂಟಿಯಾಗಿ.
    ನಿತ್ಯದ ಅಗತ್ಯಗಳಿಗೆ ಅದೆಷ್ಟು ಅವಲಂಬಿತರಾಗಿರ್ತ್ತೇವೋ ಅದು ತಿಳಿಯೋದು ಆ ಅಗತ್ಯಗಳು ಅಭಾವವಾದಾಗ ಮಾತ್ರವೇ. ಪಾಪ ಚಕ್, ಉಣ್ಣಲು,ಉಡಲು ಏನೂ ಇಲ್ಲ. ಮಳೆಗೆ,ಬಿಸಿಲಿನ ಧಗೆಗೆ ತಲೆಮರೆಸಿಕೊಳ್ಳಲು ಸೂರೂ ಇಲ್ಲ. ಒಟ್ಟಿನಲ್ಲಿ ಸಂಪೂರ್ಣ ನಿರಾಶ್ರಿತ ಶಿಲಾಯುಗ ಮಾನವನಂಥಾ ಪರಿಸ್ಥಿತಿ. ವಿಪರೀತ ಕಷ್ಟಗಳನ್ನೆದುರಿಸಿ ಬೆಂಕಿ, ಆಹಾರ ಎರಡನ್ನು ಸಂಪಾದಿಸಲು ಚಕ್ ಪರದಾಡುತ್ತಾನೆ. ಆದರೆ ಇವೆಲ್ಲ ಕಷ್ಟಗಳನ್ನೂ ಮೀರಿ ಚಕ್’ನನ್ನು ಕಾಡುವುದು ಒಂಟಿತನ,ತಬ್ಬಲಿತನ.
     ನಾಗರಿಕ ಜಗತ್ತಿನೊಡನೆ ಸಂಪರ್ಕ ಸಾಧಿಸಲು ಚಕ್ ಮಾಡುವ ಪ್ರಯತ್ನಗಳೆಲ್ಲಾ ವ್ಯರ್ಥವಾಗುವ ಸಮಯದಲ್ಲಿ ತನ್ನ ಪಾಕೆಟ್ವಾಚ್ನಲ್ಲಿದ್ದ ಪ್ರಿಯತಮೆಯ ಭಾವಚಿತ್ರವೊಂದೇ ಅವನಲ್ಲಿ ಚೈತನ್ಯ, ಜೀವನೋತ್ಸಾಹ ತುಂಬುತ್ತಿರುತ್ತದೆ.  ಫೆಡೆಕ್ಸ್ನ ಸಾಗಾಣಿಕೆ ವಸ್ತುಗಳಲ್ಲಿ ದೊರಕುವ ವಾಲಿಬಾಲ್ ಒಂದರಲ್ಲಿ ಒಂದು ಮಾನವ ಮುಖ ರಚಿಸಿ ಅದನ್ನು ‘ವಿಲ್ಸನ್’ ಎಂದು ಹೆಸರಿಸುತ್ತಾ,ಆ ಬಾಲನ್ನೆ ತನ್ನ ಗೆಳೆಯನನ್ನಾಗಿಸಿ ಸಂಭಾಷಿಸುತ್ತಾ ತನ್ನ ಏಕಾಂತ ನೀಗಿಸಲು ಪ್ರಯತ್ನಿಸುವ ಕಡೆಗೊಂದು ದಿನ ನಾನಾ ಕಷ್ಟಗಳನ್ನೆದುರಿಸಿ ತೆಪ್ಪವೊಂದನ್ನು ನಿರ್ಮಿಸಿ ತನ್ನೂರು ಸೇರುತ್ತಾನೆ.
     ಈನಡುವಿನ ಕಾಲಘಟ್ಟದಲ್ಲಿ ನಾಗರಿಕ ಜಗತ್ತು ಬಹಳಷ್ಟು ಬದಲಾಗಿರುತ್ತದೆ. ಪ್ರೇಯಸಿ ಮತ್ತೊಬ್ಬನ ಪತ್ನಿಯಾಗಿರುತ್ತಾಳೆ. ಕೆಲಸದ ಒತ್ತಡದಲ್ಲಿ ಅವನು ಕಡೆಗಣಿಸಿದ; ಅವನದಾಗಬಹುದಾಗಿದ್ದ ಪ್ರತಿಯೊಂದೂ ಮತ್ತೊಬ್ಬರ ಪಾಲಾಗಿರುತ್ತದೆ. ಚಕ್ ಅಪರಿಚಿತ ದ್ವೀಪಕ್ಕಿಂತ ಹೆಚ್ಚಿನ ಒಬ್ಬಂಟಿತನವನ್ನು ತನ್ನದೇ ಜಗತ್ತಿನಲ್ಲಿ ಅನುಭವಿಸುತ್ತಾ ಮತ್ತೊಮ್ಮೆ ಪರಿತ್ಯಕ್ತನೆನಿಸುತ್ತಾನೆ.
     “Cast away” ಎಂಬ ಅದ್ಭುತ ಚಲನಚಿತ್ರದ ಪಾತ್ರವಾದ ಚಕ್, ಚಿತ್ರ ಮುಗಿಯುವುದರೊಳಗೆ ನಮ್ಮ ಸ್ನೇಹಿತನಾಗುತ್ತಾನೆ, ಗುರುವಾಗುತ್ತಾನೆ.ನಮ್ಮದೇ ದ್ವಂದ್ವಗಳ ಪ್ರತಿರೂಪವೆನಿಸುವ ಚಕ್ ನಮ್ಮದೇ ಪ್ರತಿಬಿಂಬವೆನಿಸುತ್ತಾನೆ. ಸ್ವಲ್ಪ ಯೋಚಿಸಿದರೆ ನಮ್ಮೊಳಗೂ ಒಬ್ಬ ಪರಿತ್ಯಕ್ತ ಚಕ್ ಇದ್ದಾನೆನಿಸುತ್ತದೆ.
          ನಾವೆಲ್ಲರೂ ಇಂದಿನ ಜಗತ್ತನ್ನು ಕಡೆಗಣಿಸುವವರೇ ಅಲ್ಲವೇ. ಮುಂದೆಂದೋ ಸಿಗುವ ವೈಭವೋಪೇತ ಜೀವನಕ್ಕಾಗಿ,  ನೆಮ್ಮದಿಯ ನಾಳೆಗಾಗಿ ಇಂದು ಉಸಿರುಕಟ್ಟಿ ದುಡಿಯುತ್ತೇವೆ. ಅಷ್ಟಾಗಿ ಆ ನಾಳೆಗಳು ನಮ್ಮದಾಗುತ್ತವೆನ್ನುವ ಖಚಿತತೆ ನಮಗಿದೆಯೇ? ಖಂಡಿತಾ ಇಲ್ಲ. ನಾಳೆಗಳಿಗಾಗಿ ದುಡಿಯುವ ಇಂದಿನ ಬಗೆಗೆ ತ್ರೃಪ್ತಿಯಿದೆಯೆ? ಹೆಚ್ಚಿನವರಲ್ಲಿ ಅದೂ ಇಲ್ಲ. ಹೆಚ್ಚಿನವರು ತಮ್ಮದಲ್ಲದ ಆಯ್ಕೆಗಳ ಗೋಜಲಿನಲ್ಲಿ ಬದುಕನ್ನು ಸವೆಸುತ್ತಿದ್ದಾರೆ ಎಂದೆನಿಸುತ್ತದೆ.
    ಗ್ರಾಮೀಣ ಜನರು ಸಿಟಿ-ಶಹರಗಳ ಬದುಕಿಗಾಗಿ ಹಂಬಲಿಸುತ್ತಾ ತಮ್ಮ ಜೀವನ ನೀರಸ, ಭವಿಷ್ಯವಿಲ್ಲದ ಕತ್ತಲ ಕೂಪ ಎಂಬಂತೆ ಮಾತನಾಡುವುದನ್ನೂ ಪಟ್ಟಣವಾಸಿಗಳು ತಮ್ಮ ಜೀವನ ಕೊನೆಯಿರದ ಗದ್ದಲದ ನಡುವೆ ಕಳೆದುಹೋಗಿದೆಯೆನ್ನುತ್ತಾ ಗ್ರಾಮ್ಯ ಜೀವನಕ್ಕೆ ಹಂಬಲಿಸುವುದನ್ನೂ ನೋಡುತ್ತೇವೆ. ಬಾಲ್ಯ,ಯೌನದಲ್ಲಿ ಪ್ರಾಪ್ತವಯಸ್ಕರಾಗುವ, ಸ್ವತಂತ್ರವಾಗಿ ಬದುಕುವ ಕನಸು ಕಾಣುವ ನಾವೇ ಮುಂದೊಮ್ಮೆ ಕಳೆದುಹೋದ ಬಾಲ್ಯ,ಯೌವನವನ್ನು ದಕ್ಕಿಸಿಕೊಳ್ಳಲು ಹೆಣಗುತ್ತೇವೆ.
      ಕನಸುಗಳೂ, ನಿರೀಕ್ಷೆಗಳೂ ಸ್ವಾಗತಾರ್ಹವೇ ಆದರೂ ಕೈಲ್ಲಿರುವ ಇಂದು ಅತ್ಯಮೂಲ್ಯ ಎಂಬ ವಿಷಯವನ್ನು ನಾವೆಲ್ಲಾ ಮರೆಯುತ್ತಿದ್ದೇವೆನಿಸುತ್ತದೆ.ವ್ಯಕ್ತಿಸ್ವಾತಂತ್ರ್ಯಕ್ಕೆ ಮುಕ್ತಾವಕಾಶ ಸಿಗುತ್ತಿರುವ, ಜೀವನದ ಬಹುತೇಕ ಆಯ್ಕೆಗಳು ನಮ್ಮವೇ ಆಗಿರುವ ದಿನಗಳಿವು. ಆದರೂ ನಮ್ಮದೇ ಆಯ್ಕೆಗಳ-ನಿರ್ಧಾರಗಳ ಬಗೆಗೆ ಅಸಮಾಧಾನ ಪಡುತ್ತಾ ಸಿಗದ ಅಥವಾ ಮುಂದೆಂದೋ ಸಿಗಬಹುದಾದ ಬದುಕಿನೆಡೆಗೆ ಕೈಚಾಚುತ್ತಾ ನಿರಂತರ ಮಾನಸಿಕ ಸಂಘರ್ಷಗಳೊಡನೆ ಹೆಣಗುತ್ತಾ ಸಹಜೀವಿಗಳನ್ನೂ ದೂರತಳ್ಳಿ ನಮ್ಮದೇ ಮನಸಿನ ದ್ವೀಪದೊಳಗೆ ಅಪರಿಚಿತರಾಗಿ , ಪರಿತ್ಯಕ್ತರಾಗಿ ಜೀವಿಸುವ ನಮ್ಮಗಳ ಅನಿವಾರ್ಯತೆಗೆ ಕೊನೆಯೆಂದು?
     ಇಂಥಾ ಹಲವಾರು ಪ್ರಶ್ನೆಗಳನ್ನೆಬ್ಬಿಸಿ, ನಮ್ಮ ಬದುಕಿನ ರೀತಿಯನ್ನು ಒಮ್ಮೆ ಪರಾಮರ್ಶಿಸುವಂತೆ ಮಾಡುವ “cast away” ನನ್ನ ಅಚ್ಚುಮೆಚ್ಚಿನ ಸಿನಿಮಾಗಲ್ಲೊಂದು. ಸಿನಿಮಾ ಹಳೆಯದಾದರೂ(೨೦೦೦-೨೦೦೧)”Tom hanks” ನ ಅನನ್ಯ ಅಭಿನಯ ದೃಷ್ಯಗಳನ್ನು ಮನಸ್ಸಿನಾಳಕ್ಕಿಳಿಸಿ ಸದಾಕಾಲ ಮನಸ್ಸನ್ನು ಚಿಂತನೆಗೊಳಪಡಿಸುತ್ತದೆ….. ಹೌದಲ್ಲವೇ…

ದೂರದೊಂದು ದೇಶದಲ್ಲಿ ಪುಟ್ಟದೊಂದು ಊರು..

ಅಮೆರಿಕ ಎಂದರೇ ಎಲ್ಲರಮೇಲೂ ತನ್ನ ಅಧಿಕಾರ ಚಲಾಯಿಸುವ ಸೊಕ್ಕಿನ ರಾಷ್ಟ್ರ ಎಂಬ ತಿರಸ್ಕಾರವೂ; ಗಗನಚುಂಬಿ ಕಟ್ಟಡಗಳೂ, ವಿಪರೀತ ಐಶಾರಾಮೀ ಬದುಕೂ, ಕಾರ್ಪೋರೇಟ್,ಫ್ಯಾಷನೈಝ್ಡ್ ಸ್ವಾತಂತ್ರ್ಯ ಬದುಕಿನ ಕಿನ್ನರಲೋಕದ ಚಿತ್ತಾರವೂ ಒಟ್ಟೊಟ್ಟಿಗೇ ಮನಸ್ಸಿನಲ್ಲಿ ಸುಳಿಯುತ್ತದಲ್ಲವೇ . ಸುದ್ದಿಮಾದ್ಯಮಗಳೂ, ಸಿನಿಮಾಗಳೂ ಕಟ್ಟಿಕೊಡುವ ಮಾಯಾಚಿತ್ರಣಗಳು ಅವು, ಅಷ್ಟಲ್ಲದೇ ಇನ್ನೇನೂ ಇಲ್ಲ ಅಲ್ಲಿ ಎಂದುಕೊಂಡವರಲ್ಲಿ ನಾನೂ ಒಬ್ಬಳಾಗಿದ್ದೆ.
ಹಾಗೆಂದೇ,’ಕೃಷ್ಣ’ ಅವರ ಕೆಲಸದ ವಿಚಾರವಾಗಿ ಮಾಡ್ಬೇಕಾದ ವಿದೇಶಯಾನದ ವಿಷಯ ತಿಳಿಸಿದಾಗ “ನೀವು ಹೋಗ್ಬನ್ನಿ ರಾಯರೇ, ನಾನು ಆದರ್ಷ ಪತ್ನಿಯಾಗಿ ಏರ್ಪೋರ್ಟ್ವರೆಗೂ ಬಂದು ಟಾಟಾ ಮಾಡುವೆ” ಎಂದಿದ್ದೆ ಖಂಡಿತವಾಗಿ. ಆಮೇಲೆ ನಡೆದಿದ್ದ್ದೇ ಬೇರೆ.
ಸುತ್ತೀಬಳಸಿ ಆಕಾಶದ ಉದ್ದಗಲ ಅಳೆದ ಪುಟಾಣಿ ಲಡುಬೂಸಿ ವಿಮಾನ ಕೊನೆಗೆ ನೆಲತಾಕಿದ್ದು ಈರಿ ಎಂಬ ಪುಟ್ಟ ಹಳ್ಳಿಯ ನಿಲ್ದಾಣದಲ್ಲಿ. ಅಮೆರಿಕದ ಐದು ಮಹಾ ಸರೋವರಗಳಲ್ಲಿ ‘ಲೇಕ್ ಈರಿ’ ಕೂಡಾ ಒಂದು. ಅದರ ದಡದಲ್ಲೇ ಇದೆ ಈರಿ ಎಂಬ ಊರು.
ಬೀದಿ ದೀಪದ ಕಾನ್ಸೆಪ್ಟೇಯಿಲ್ಲದ, ಐದನೇ ಮಹಡಿಗಿಂತ ಎತ್ತರದ ಕಟ್ಟಡಗಳಿಲ್ಲದ , ಎಲೆಕ್ಟ್ರಿಕ್ ಕೇಬಲ್ಗಳೂ, ಟೆಲಿಫೋನ್ ಕೇಬಲ್ಗಳೂ ಇನ್ನೂ ಭೂಸಮಾಧಿಯಾಗದೇ ಆಕಾಶದಲ್ಲೇ ಅಂದ್ರೆ- ಕಂಬಗಳ ಸುತ್ತಮುತ್ತಲೇ ನೇತಾಡಿಕೊಂಡಿರೋ, ಸರಿಯಾದ ಸಾಮಾನ್ಯಸಾರಿಗೆ ವ್ಯವಸ್ಥೆ ಕೂಡ ಇಲ್ಲದ, ಮನೆಗಳೂ ಕಾಡುಗಳೂ ಒಂದರೊಡನೆ ಇನ್ನೊಂದು ಬೆಸೆದುಕೊಂಡಿರೋ  ಊರು ಈ ಈರಿ.
ನನ್ನೂರು ತೀರ್ಥಹಳ್ಳಿ ಒಂದು ತಾಲೂಕು ಕೇಂದ್ರ, ಊರಿನ ಕಟ್ಟಕಡೆಗಿರುವ ನಮ್ಮ ಮನೆ- ಬಿದಿಗೂ ಬೀದಿ ದೀಪದ ವ್ಯವಸ್ಥೆಯಿದೆ. ಅದೇ ತಾಲೂಕಿನ ಗ್ರಾಮೀಣ ಭಾಗದಲ್ಲಿರೋ ನನ್ನಜ್ಜನ ಮನೆಹಾದಿ ಇತ್ತೀಚೆಗಷ್ಟೇ ಬೆಳಕು ಕಂಡಿದೆ. ಇದೆಂಥದೋ ಮಹಾ ದೊಡ್ಡ ವಿದೇಶ, ಸುವ್ಯವಸ್ಥಿತ ಜೀವನ ನೋಡೋಣ ಎಂದು ಬಂದರೆ ಇಲ್ಲೊಂದು ಬೀದೀ ದೀಪವೂ ಬೇಡವೇ! ನಮ್ಮಚ್ಚರಿ ಹೇಳತೀರದು. ಸರಿ, ಹೋಗಲಿ ವಿದ್ಯುತ್ ಉಳಿಸುತ್ತಾರಾ ಎಂದರೆ ಅದೂ ಇಲ್ಲ. ಬೆಳಗಿನ ಹೊತ್ತೂ ವಿದ್ಯುದ್ದೀಪ ಉರಿಸೋ, ಅಗತ್ಯವಿರದಾಗ್ಯೂ ಏಸೀ, ಕೂಲರ್ ಬಳಸೋ, ಪಾತ್ರೆ- ಬಟ್ಟೆಬರೆ ತೊಳೆಯಲೂ ವಿದ್ಯುತ್ತನ್ನೇ ಆಶ್ರಯಿಸುವ ಇವರುಗಳು ನಮ್ಮ ‘ಭಾರತೀಯ ಮನಸ್ಥಿತಿಗೆ’ ಮಹಾ ದುಂದುವ್ಯಚ್ಚಿಗಳೇ.
ಇನ್ನು ಸಾರಿಗೆ ವ್ಯವಸ್ಥೆಯೋ .. ಇಡೀ ಊರಿನಲ್ಲಿ ಎಲ್ಲಿ ಬೇಕಾದರೂ ಹೋಗು, ದರ ಕೆರವಲ ಒಂದೂವರೆ ಡಾಲರ್. ಅದೇನೂ ತೊಂದತೆಯಿಲ್ಲ;ಸರಿ ಒಂಚೂರು ಮಾರ್ಕೆಟ್ಗೆ ಹೋಗಿ ಬರೋಣ ಎಂದರೆ, ಹೋಗುವ ಮಾರ್ಗಕ್ಕಷ್ಟೇ ಬಸ್ಸು. ಬರುವ ಮಾರ್ಗಕ್ಕಿಲ್ಲ.ಬಸ್ನಲ್ಲೇ ಹಿಂದಿರುಗಬೇಕೋ;ಅರ್ಧಗಂಟೆಗೊಮ್ಮೆ ಬರುವ ಮತ್ತೊಂದು ಬಸ್ ಹಿಡಿ, ನದಿಯ ನೀರಿನಂತೆ ಏಕಮುಖವಾಗಿ ಚಲಿಸುವ ಅದರಲ್ಲಿ ಮಿಕ್ಕ  ನಿಲ್ದಾಣಗಳನ್ನೂ ಒಟ್ಟಾರೆ ಊರನ್ನೂ ಪ್ರದಕ್ಷಿಣೆ ಬಂದು ನಿನ್ನ ನಿಲ್ದಾಣದಲ್ಲಿ ಇಳಿದುಕೋ.
ಪ್ರತೀ ವಯಸ್ಕರಿಗೂ ತಮ್ಮದೇ ಆದ ಕಾರುಗಳು ಇಲ್ಲಿ ದೈನಂದಿನ ಅಗತ್ಯಗಳಲ್ಲೊಂದು.ಅಂದಮೇಲೆ ಉತ್ತಮ ಸಾರ್ವಜನಿಕ ಸಾರಿಗೆ ಯಾಕಾದರೂ ಬೇಕು, ಕಾರುಗಳ ಹೆಡ್ಲೈಟಿರುವಾಗ ಬಿದಿದೀಪಗಳೇಕೆ ಬೇಕು. ಇತ್ತೀಚೆಗಷ್ಟೇ ವಿದೇಶದಿಂದ ಹಿಂದಿರುಗಿದ ಬಂಧುವೊಬ್ಬರು “ಹೋ, ನಿಮ್ಮಲ್ಲಿ ಒನ್ವೇ ಆದ್ರೂ ಇತ್ತಾ, ನಾನಿದ್ದ ಊರ್ನಲ್ಲಿ ಪಬ್ಲಿಕ್ ಟ್ರಾನ್ಸ್ಪೋರ್ಟೇಷನ್ ಝೀರೋ.. ಎಲ್ಲರೂ ಕಾರಾಶ್ರಿತರೇ” ಎನ್ನುತ್ತಾ ನಮಗಿದ್ದ ಅಲ್ಪ ಸೌಲಭ್ಯಕ್ಕೆ ಅಚ್ವರಿಪಟ್ಟರು!
ಜಾತಿಯ ಪಿಡುಗೂ, ಮೇಲುಕೀಳಿನ ತಾರತಮ್ಯಗಳೂ ನಮ್ಮಲ್ಲಿರುವಷ್ಟು ತಾರಕವಾಗಿಲ್ಲದಿದ್ದರೂ ಸ್ವಲ್ಪಮಟ್ಟಿಗಂತೂ ಇರುವುದು ಗೋಚರಿಸಿತು.ಅಷ್ಟು ಚಿಕ್ಕ ಹಳ್ಳಿಯ; ಕಡಿಮೆ ಜನಸಂಖ್ಯೆಯ ನಡುವೆಯೇ ಪೂರ್ವ,ಪಶ್ಚಿಮಗಳೆಂದು ಸ್ಥಿತಿವಂತರ ಹಾಗೂ ಕೆಳ ಅಥವಾ ಮಧ್ಯಮವರ್ಗದ ಬದುಕು ವಿಭಜನೆಗೊಂಡಿರುವುದು ಸ್ಪಷ್ಟವಿತ್ತು. ಕಷ್ಟ ಸಹಿಷ್ಣುಗಳೂ, ಶ್ರಮಜೀವಿಗಳೂ ಆದ ಕಪ್ಪುಜನಾಂಗದವರೂ, ಬಡರಾಷ್ಟ್ರಗಳಿಂದ ಬದುಕು ಅರಸಿ ಬಂದ ಕಾರ್ಮಿಕವರ್ಗದ ಜನರೂ ಊರಿನ ಪೂರ್ವಭಾಗದಲ್ಲೂ, ಮೇಲ್ಮಧ್ಯಮ ಹಾಗೂ ಸ್ಥಿತಿವಂತರು ಪಶ್ಚಿಮಭಾಗದಲ್ಲೂ ವಾಸಿಸುವುದು ಅಲಿಖಿತ ನಿಯಮದಂತಿತ್ತು.
ಪೂರ್ವಭಾಗದ ಜನರ ನಡುವೆ ಒಳಜಗಳಗಳೂ, ಕಳ್ಳತನ ಇತ್ಯಾದಿ ಕಾನೂನುಬಾಹಿರ ಚಟುವಟಿಕೆ ಹೆಚ್ಚು ಎಂದು ಪಶ್ಚಿಮಭಾಗದ ಜನರು ಆರೋಪಿಸುತ್ತಿದ್ದರು. ಹಾಗೆಂದು ಇವರಿಗೇನೂ ನೆಮ್ಮದಿಯ ವಾತಾವರಣವಿರಲಿಲ್ಲ, ಮಗ್ಗಿಂಗ್, ಶೂಟಿಂಗ್ ಅಲ್ಲಿ ಸರ್ವಸಾಮಾನ್ಯ. ನಾವಲ್ಲಿದ್ದಷ್ಟೂ ದಿನವೂ ದಿನಕ್ಕೆರಡು ಬಾರಿ ಪೊಲೀಸ್ ವಾಹನ ಎಲ್ಲೆಡೆ ಗಸ್ತು ತಿರುಗುವುದನ್ನು ಆಗಾಗ ಗಮನಿಸುತ್ತಿದ್ದೆವು.
ಜನಸಂಖ್ಯೆಯ ಲೆಕ್ಕದಲ್ಲಷ್ಟೇ ಚಿಕ್ಕ ಊರಾದ ಈರಿಯ ಒಟ್ಟಾರೆ ವಿಸ್ತೀರ್ಣ ಕಡಿಮೆಯೇನಿಲ್ಲ. ಕಾರ್ಖಾನೆಗಳೂ, ಅಂತರರಾಷ್ಟ್ರೀಯ ಕಂಪನಿಗಳೂ ಹೆಚ್ಚಿಲ್ಲದ ಕಾರಣ ಸ್ಥಳೀಯರೂ ಕೂಡಾ ಉದ್ಯೋಗಾವಕಾಶಕ್ಕಾಗಿ ದೊಡ್ಡ ಪಟ್ಟಣಗಳಿಗೆ ವಲಸೆಹೋಗುತ್ತಿದ್ದಾರೆ. ಹಾಗೆ ಹೋಗುವುದನ್ನು ತಡೆಯಬೇಕಾದ ಅಗತ್ಯ ಅಲ್ಲಿನ ಆಡಳಿತವರ್ಗಕ್ಕೆ, ಊರಿನ ಬೆಳವಣಿಗೆಗೆ ಇದೆ ಎನಿಸುತ್ತದೆ. ಅದಕ್ಕಾಗೇ ಹೊಸಹೊಸಾ ಕಟ್ಟಡಗಳೂ, ಉದ್ಯೋಗಾವಕಾಶಗಳೂ ನಿಧಾನವಾಗಿ ಹೆಚ್ಚುತ್ತಿವೆ.
ಮುಖ್ಯ ಹೆದ್ದಾರಿಗಳನ್ನು ಹೊರತಾಗಿಸಿದರೆ ಅಲ್ಲಲ್ಲಿ ಅಕ್ಷತೆ ಚೆಲ್ಲಿದಂತಿರುವ ಮನೆಗಳೂ ಅಂಗಡಿ ಮುಂಗಟ್ಟುಗಳೂ ಸಾಕಷ್ಟು ‘ಕುರುಚಲು ಕಾಡಿ’ನಿಂದ ಆವೃತವಾಗಿವೆ. ಮತ್ತಾಕಾಡುಗಳು ಜಿಂಕೆ, ಕರಡಿ, ರಕೂನು(ಇವುಗಳ ಕನ್ನಡದಲ್ಲಿ ಹೆಸರೇನು!?)ಗಳಿಂದ ತುಂಬಿವೆ. ಮುಕ್ತ ಬೇಟೆಗೆ ಅವಕಾಶವಿರುವುದರಿಂದ ಹೆಚ್ಚಿನವರು ಬಂದೂಕು,ಪಿಸ್ತೂಲ್ಗಳನ್ನು ಹೊಂದಿರುತ್ತಾರಂತೆ. ಬಿಡುವಿನ ದಿನಗಳಲ್ಲಿ ಬೇಟೆಯಾಡುವುದೂ ಉಂಟಂತೆ. ಇನ್ನು ನಗರೀಕರಣ ಹೆಚ್ಚಿದರೆ ಈಯೆಲ್ಲಾ ಪ್ರಾಣಿಗಳೂ ಕ್ಷೀಣಿಸಿಯಾವು,ಮತ್ತವುಗಳ ಬೇಟೆಯೂ..
ಅಲ್ಲಿನ ಜನರು ಹಸಿರು, ಸ್ವಚ್ಛತೆ, ಪ್ರಶಾಂತತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಆ ವಿಷಯವಾಗಿ ಕಾಳಜಿವಹಿಸುತ್ತಾರೆ.
ಊರಿನೊಳಗೆ ಮ್ಯೂಝಿಯಮ್, ನೃತ್ಯಶಾಲೆ, ಪ್ರಾದೇಶಿಕ,ಸಾಂಸ್ಕೃತಿಕವಾಗಿ ವಿವಿಧ ಸಮಾರಂಭಗಳೂ ಮತ್ತಿತರೇ ಆಕರ್ಷಣೆಗಳಿದ್ದರೆ ಊರಿನ ಸುತ್ತಮುತ್ತಲೂ ಕಣ್ಮನ ತಣಿಸುವ ಪ್ರವಾಸಿ ಸ್ಥಳಗಳಿವೆ. ಊರಿನಾಚೆ ಗ್ರಾಮ್ಯಭಾಗಕ್ಕೆ ಸರಿದಂತೆ ನೋಡಲು ಸಿಗುವ ಕುದುರೆ, ಹೇಸರುಗತ್ತೆಗಳ ಹಿಂಡು ಹಾಗು ದನಸಮೂಹ, ವಿಶಾಲವಾದ ಸರೋವರ ದಂಡೆ
ನಯನಮನೋಹರವೆನಿಸಿತ್ತು.
ದ್ವೀಪದಂತೆ ಬದುಕುವ ವ್ಯಕ್ತಿಸ್ವಾತಂತ್ರ್ಯ ಪ್ರಿಯ ಜನರೂ, ಆಧುನಿಕ ರೀತಿನೀತಿಗಳೂ, ಯಂತ್ರಾವಲಂಬಿಗಳಾಗಿ ಬದುಕನ್ನೇ ಯಾಂತ್ರಿಕವಾಗಿಸಿಕೊಂಡಂತೆನಿಸಿದರೂ ನಾ ಕಂಡಂತೆ ಅಲ್ಲಿನವರೆಲ್ಲರೂ ಕ್ರೀಡಾಮನೋಭಾವದವರು, ಕ್ರಿಯಾಶೀಲರು. ಸದಾ ಒಂದಿಲ್ಲೊಂದು ಚಟುವಟಿಕೆ, ಕ್ರೀಡೆ, ಪ್ರವಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರು. ಅಗತ್ಯವಿದ್ದಾಗ ನೆರವಾಗುವ ಮಿಕ್ಕಂತೆ ತಮ್ಮಷ್ಟಕ್ಕೇ ತಾವಿರುವ  ಸುತ್ತಮುತ್ತಲಿನವರು ತೋರಿದ ಹಿತಮಿತವಾದ ಆತ್ಮೀಯತೆ ಊರನ್ನು ಮನಸ್ಸಿಗೆ ಹತ್ತಿರವಾಗಿಸಿತ್ತು. ನಾನಂತೂ ಅಲ್ಲಿದ್ದ ಬಹುಪಾಲು ದಿನಗಳನ್ನು ಭಾರತದ, ನನ್ನೂರಿನ ಕನವರಿಕೆಯಲ್ಲೇ ಕಳೆದೆನಾದರೂ ಈಗ “ಓಹ್, ಅಲ್ಲಿಯ ದಿವ್ಯ ಮೌನವನ್ನು ಇನ್ನೊಂದಷ್ಟು ಕಿವಿದುಂಬಿಕೊಳ್ಳುವ ಹಾಗಿದ್ದರೇ ” ಎಂದೆನಿಸುತ್ತದೆ.
ಬರೀ ಹತ್ತೆಂಟು ಅಂಶಗಳನ್ನಷ್ಟೇ ವಿವರಿಸಿ ಇದಿಷ್ಟೇ ಅಮೆರಿಕಾ ಎಂದರೆ ತಪ್ಪಾಗುತ್ತದೆ. ನ್ಯೂಯಾರ್ಕ್, ವಾಷಿಂಗ್ಟನ್ನಂಥ ದೊಡ್ಡ ಪಟ್ಟಣಗಳನ್ನೂ , ಅಲ್ಲಿನ ಆಡಂಬರ ಮಿಷ್ರಿತ ಆಕರ್ಷಕ ಜೀವನಕ್ರಮವನ್ನೂ ವಿವರಿಸಬಲ್ಲೆ .ಆದರೆ ಅವು ಭಾರತದ ದಿಲ್ಲಿ,ಮುಂಬೈ,ಕೊಲ್ಕೊತ್ತಾ ಅಥವಾ ಬೆಂಗಳೂರಿನ ಜನಜೀವನಕ್ಕಿಂತ ಯಾವುದೇ ವಿಧದಲ್ಲೂ ಭಿನ್ನವಾಗಿಲ್ಲ ಎಂಬುದು ನನ್ನಭಿಪ್ರಾಯ.ನಾನಿದ್ದ ಈರಿ ಒಂದು ಸುಂದರವಾದ, ಈಗಿನ್ನೂ ಅಭಿವೃದ್ಧಿಗಳೆಡೆಗೆ ತನ್ನನ್ನು ಒಡ್ಡಿಕೊಳ್ಳುತ್ತಿರುವ ಊರು.ಪ್ರತಿಯೊಬ್ಬರ ದೃಷ್ಟಿಕೋನವೂ, ಆಲೊಚನಾ ವಿಧಾನವೂ ಭಿನ್ನವಷ್ಟೇ? ಕಲಾವಿದರೂ, ಬರಹಗಾರರೂ,ವ್ಯಾಪಾರಿಗಳೂ, ವಿದ್ಯಾರ್ಥಿಗಳೂ, ಪ್ರವಾಸಿಗರೂ ತಮಗೆ ಕಂಡಂತೆ ಒಂದು ಸ್ಥಳವನ್ನು ಚಿತ್ರಿಸಬಹುದಾದರೆ ಒಬ್ಬ ಸಾಮಾನ್ಯ ಗೃಹಿಣಿಯಾಗಿ, ಒಬ್ಬ ಓದುಗಳಾಗಿ ನಾನೇಕೆ ಅಂಥದೊಂದು ಪ್ರಯತ್ನ ಮಾಡಬಾರದು ಎಂದೆನಿಸಿತು. ಹೆಚ್ಚುಕಡಿಮೆ ಒಂದುವರ್ಷದ ಅವಧಿಯಲ್ಲಿ ನಾಕಂಡ- ನೆನಪ್ಪಿದ್ದ ಕೆಲವೊಂದು ವಿಷಯಗಳಷ್ಟನ್ನೇ ಇಲ್ಲಿ ಹೇಳಿದ್ದೇನೆ.
ಮುಖ್ಯವಾಗಿ ಇದನ್ನೆಲ್ಲಾ ಗಮನಿಸಿದ ನನಗೆ, ಮನಸಿನ ಮೂಲೆಯಲ್ಲೆಲೋ ಇದ್ದ ಭಾರತದ ಬಗೆಗಿನ ಕೀಳರಿಮೆ ದೂರವಾಯ್ತು. ಅಮೆರಿಕವೇನೂ ಗಂಧರ್ವಸೀಮೆಯಲ್ಲ ,ಅಲ್ಲೂ ಅವರದೇ ಆದ ಏರುತಗ್ಗುಗಳುವೆ, ಪಾಶ್ಚಿಮಾತ್ಯವೆಂದರೇ ಬರೀ ಕೆಡುಕಷ್ಟೇ ಅಲ್ಲ ಒಳ್ಳೆಯದೂ ಇದೆ ಎಂಬುದೂ,ಹಾಗೆಯೇ ನಮ್ಮಲ್ಲೂ ನಮ್ಮದೇ ಆದ ವಿಭಿನ್ನ ಸಂಸ್ಕೃತಿ, ಸುಂದರ ಜೀವನಕ್ರಮ ಇದ್ದೇಯಿದೆ ಎಂಬುದೂ ಮನದಟ್ಟಾಯಿತು. ಈಗಂತೂ ಅಲ್ಲಿಗೂ ಇಲ್ಲಿಗೂ ಇರುವ ಮುಖ್ಯ ಅಂತರ ನಮ್ಮ ನಮ್ಮ ಕಲ್ಪನಾಭರಿತ ಅನಿಸಿಕೆಗಳಷ್ಟೇ (assumptions) ಎಂದೆನಿಸುತ್ತದೆ.

ಹಬ್ಬ ಅಂದ್ರೆ…..

ಓಂsssssss ಶುಕ್ಲಾಂ ಭರದರಂ ವಿಷ್ಣುಂ……
೧#ಯಾಕೆದ್ದೆ ಇಷ್ಟ್ ಬೇಗ, ಇನ್ನು ಮಲುಗ್ಬಾರ್ದಿತ್ತಾ,ನಾ ಅಡ್ಗೆಗೆಲ್ಲ ರೆಡಿ ಮಾಡ್ತಿದೀನಿ.
೨#ಇಲ್ಲಾsss ನಿದ್ರೆ ಮುಗೀತು, ಅಂಗ್ಳಕ್ಕೆ ನೀರ್ಹಾಕ್ಲಾ..
೧#ಇಲ್ವೇ, ನಾ ಹಾಕಾಯ್ತು, ಸ್ನಾನ ಮುಗ್ಸ್ಬಿಡು.. ಬೇಗ್ಬೇಗ ಅಡ್ಗೆ ಸ್ವಲ್ಪ ಮುಗ್ಸ್ಬಿಡಣ.
………
೨#ಇಲ್ನೋಡಿ, ಸಾಸ್ವೆಗೆ ಇಷ್ಟು ಕಾಯ್ ಸಾಕಾ… ಹು ಹು ಗಟ್ಟಿನೇ ಅರೀತೀನಿ..ಉಪ್ಪು ಆಮೇಲ್ ಹಾಕ್ತಿನಾಯ್ತಾ..
೧# ಹು ಕಣೇ, ಮರೀದೆ ಹಾಕು ಅಷ್ಟೇ, ಬೇಗ ಎಲ್ಲಾ ಅರ್ದಿಟ್ಕೊಂಡ್ಬಿಡು.. ಕರೆಂಟೊಂದ್ ಎಷ್ಟೊತ್ತಿಗ್ ಹೋಗತ್ತೋ ಏನೊ..
೨# ಸಾಸ್ವೆಗೆ, ಪಲ್ಯಗಳಿಗೆ, ಕಾಯ್ರಸಕ್ಕೆ, ಸಾರಿಗೆ ಎಲ್ಲ ಅರ್ಕೊಂಡಾಯ್ತು, ನಾ ಸೌತೇಕಾಯ್ ಕೊಚ್ಲಾ,
೧# ಈ ಕಾಫಿ ಫಿಲ್ಟರ್ರೆಲ್ಹೋಯ್ತೇ, ಇಲ್ಲೇ ಇಟ್ಟಿದ್ದೆ… ಗಡಿಬಿಡಿಗೆ ಬೇಕಾದ್ದೊಂದೂ ಕೈಗ್ಸಿಗಲ್ಲ ಅಂತಾವೆ, ಇರು, ಬ್ಯಾಡ, ಅವ್ಳು ಬಂದು ಕೊಚ್ಲಿ, ಪಾಪ, ಕೆಲ್ಸಿಲ್ಲ ಅಂದ್ರೆ ಬೇಜಾರಾಗ್ತಾಳೆ..ನೀ ಅಡ್ಗೆ ಶುರುಮಾಡು. ಸದ್ಯ ನೆನ್ನೆನೇ ಸೀತಿಂಡಿ ಎಲ್ಲ ಮಾಡಿಟ್ಟು ಇವತ್ ಸುಲ್ಭ ಆಯ್ತಲ್ವನೇ.
……
೨# ಆಯ್ತಪ್ಪ, ಪಲ್ಯ, ಸಾರು, ಕೊಸಂಬ್ರಿ, ಸಾಸ್ವೆ ಎಲ್ಲ ಆಯ್ತಲ, ನಾ ಹೋಗಿ ಸೀರೆಗೀರೆ ಉಡ್ತೀನಿನ್ನು..
೧#ಅರ್ಜೆಂಟಿಲ್ಲ ಕಣೇ, ನಿಧಾನಕ್ ರೆಡಿ ಆಗು… ಪೂಜೆ ಲೇಟು,  ಎಲ್ಲ ಬರ್ಬೇಕಲ. ರೆಡಿಯಾದವ್ಳೆ ತಿಂಡಿ ತಿನ್ಕಂಬಿಡು.
…..
xyz’s# ರೆಡಿನಾ ಎಲ್ಲ, ಅಡ್ಗೆ ಆಯ್ತಾ, ಪೂಜೆ ಆಯ್ತಾ
೧#ಹೋsss ಬನ್ನಿ ಬನ್ನಿ, ನಿಮ್ಗೋಸ್ಕರನೇ ಕಾಯ್ತಿದ್ವಿ…
xyz# ಏನೇನಾಯ್ತು ಅಡಿಗೆ, ನಾಯೇನ್ ಮಾಡ್ಲಿ ಹೇಳಮ್ಮ, ತಗೊ ಮನೆಯಿಂದ ತಂದಿದ್ ಹೂವೂ, ಕಡ್ಬೂ, ಹುಳಿ..
೨# ಹೋ! ಭರ್ಜರಿ ಮಾರ್ರೆ…
xyz# ನಾವ್ ಬಂದ್ವೀsss
3# ಹಾ, ಬನ್ನಿ ಬನ್ನಿ, ನಾವದೇ ನಿಮ್ಗೇ ಕಾಯ್ತಿದ್ವಿ, ಇನ್ ಪೂಜೆ ಶುರು ಮಾಡಣ ಅಲ್ವ… ಮಂತ್ರದ್ ಸೀಡೀಯೆಲ್ಲ ರೆಡಿ ಮಾಡ್ಕಳದ ಹಂಗಾರೆ..
xyz# ಹಾ,ಹಾ.. ಮಾಡಣ.. ಯೇ ಹಿಡ್ಯೇ, ಮನೆಯಿಂದ ಸೀಹೂರ್ಣ ತಂದಿದೀನಿ; ನಮ್ಮನೆದೊಂಚೂರ್ ಬರ್ಫಿ ಇತ್ತು… ;ನಾ ಕೃಷ್ಣಾಷ್ಟಮಿ ಉಂಡೆನೇ ತಂದೆ- ಬಳ್ಳೆ ಸೈಡಲ್ಲೆರ್ಡೆರ್ಡ್ ಹಾಕಕ್ಕಾಗತ್ತಲ್ವನೇ, ಇಲ್ಲಾಂದ್ರೆ ಸಂಜೆ ಕಾಪಿ ಜೊತೆ ತಿಂತಾರೆ ಅಲ್ವ ಯಾರಾರೂ…. ಮಗು ಎಲ್ಲೇ ಕಾಣ್ತಿಲ್ಲ..
೨# ಯಪ್ಪಾ, ಭೀಕರ ಹಬ್ಬ ಆಗ್ತುಂಟಪ ಇದ್ಯಾಕೋ ಬರ್ಬರ್ತ,  ನಾನೂ ಅತ್ತೆ ಫುಲ್ ಸಿಂಪಲ್ ಹಬ್ಬ ಅಂದ್ಕಂಡಿದ್ವಿ ಈಸಲ ಗೊತ್ತಾ..ಮಗು ತಿಂಡಿ ತಿನ್ತುಂಟು ರಿ, ಅವ್ನಪ್ಪಂಗೇ ಫುಲ್ ಅವ್ನ ನೋಡ್ಕಳೋ ಡ್ಯೂಟಿ ಇವತ್ತು.
೩# ಗೌರಿ ಪೂಜೆ ಮಾಡೋರೆಲ್ಲ ಬನ್ನೀ…
ಕ್ಯಾಸೆಟ್ ಭಟ್ರು; ಓಂ ಮಣಂ ಮಣಂ ಮಣಾಃ…. ಕೈಗೆ ನೀರು ಹಾಕಿಕೊಂಡು ಅಕ್ಷತೆ ಏರಿಸುವುದು. ಓಂ ಬ್ರಂಬ್ರಂಬ್ರಂಬ್ರಬ್ಬಬ್ಬಾಃ .. ಹೂವು ಏರಿಸುವುದು.
೨# (ಯಪ್ಪಾ, ಈ ಸೀಡಿ ಭಟ್ರು ಅದೇನ್ ಮಂತ್ರ ಹೇಳ್ತಾರೋ ಒಂದೂ ಗೊತ್ತಾಗ್ತಿಲ್ವಲ ಥೋ.. ಭಕ್ತಿ ಹೆಂಗ್ ಬರ್ತುಂಟು ಇವ್ರಿಗೆಲ್ಲ, ಸಧ್ಯ ನಂಗೊಂದು ಈ ವ್ರತಗಿತದ್ ಅಭ್ಯಾಸ ಮಾಡ್ಸ್ಲಿಲ್ವಲ ಇವ್ರೆಲ್ಲ) ಹೂ ಬಂದೇತ್ತೇ, ಮಂಗ್ಳಾರ್ತಿ ಮಾಡ್ತಿನಿ.
೧# ತಗ, ಗೌರಿ ದಾರ ಕಡ್ಗಂಡ್ ಎಲ್ರಿಗೂ ಬಾಗಿನ ಕೊಟ್ಬಿಡು..
೨#(ಅಯ್ಯೋ, ಮೂರ್ತಿಪೂಜೆಲಿ ಗುಲ್ಗಂಜಿ ನಂಬ್ಕೆನೂ ಇಲ್ದಿರೊ ನನ್ಕೈಗೂ ಗೌರೀದಾರನಾ) ಹೂ ಸರಿ ಸರಿ…
…….
#ಎಷ್ಟೆಲೆ ಹಿಡ್ಸತ್ತೆ, ಒಂದ್ ಹತ್ತೆಲೆ ಹಾಕ್ಲಾ,
#ಹದ್ನೈದ್ ಆದೀತು..
#ಮಕ್ಳೆಲ್ಲಾ ಊಟಕ್ಕೂತ್ಗಳಿ ಮೊದ್ಲು
#ಹುಡ್ಗಿರೆಲ್ಲ ಬಡುಸ್ರಮ್ಮ, ನಾವ್ ವಯ್ಸಾದವ್ರು ಕೂರ್ತಿವಿ ಮೊದ್ಲು..
#ಏ, ನೀರಿಟ್ಯನೇ, ಉಪ್ತಗಂಡೋಗು.. ಆಯ್ತ, ಆದ್ರೆ ಇಲ್ಲಿ ಕಟ್ಟೆಮೇಲಿಟ್ಟಿರದೆಲ್ಲ ಒಂದೊಂದೇ ಬಡ್ಸ್ತಾಹೋಗಿ.. ನಿಧಾನಕ್ಕಾಗ್ಲಿ, ಗಡಿಬಿಡಿ ಮಾಡ್ಬೇಡಿ ತಿನ್ನೋರಿಗೆ..
# ಗೋವಿಂದಾ, ಗೋವಿಂದ … ಎಲ್ಲ ಸಾವ್ಕಾಶಾಗ್ಲೀ..
#ಏ ನಿಂಗೆಂತ ಪಲ್ಯ ಹಾಕದಾ, ಸಾರ್ ಬಡ್ಸ ಅತ್ಗೇ,
#ಯಾಕೋ ಮರೀ, ಇನ್ನೊಂದ್ ಬೋಂಡ ಹಾಕ್ಲಾ, ಉಣ್ಣಪ ರಾಜಾ, ಸಂಕೋಚ ಮಾಡ್ಕಂಬೇಡ ಆಯ್ತಾ…
#ಹೋಳ್ಗೆ ಬರ್ಲಿ ಹೋಳ್ಗೇ
#ಪಾಯ್ಸ ಯಾರಿಗೇ, ಪಾಯ್ಸ, ಪಾಯ್ಸ,ಪಾಯ್ಸ… ಥೂ ಸುಮ್ನೆ ಬಂದೆ, ಯಾರೋಬ್ರು ಪಾಯ್ಸ ತಿನ್ನೋರಿಲ್ಲ .. ಯಾರಿಗ್ ಪಾಯ್ಸ ಬೇಕು ಕೈಎತ್ತಿ…
#ಆಹಹ, ಬಡ್ಸೋ ಚಂದ ನೋಡೇ.. ಕಪಿಗಳು.. ನಾವೆಲ್ಲ ಎಷ್ಟ್ ಹೆದ್ರುತಿದ್ವಿ .. ಈಗಿನವುಕ್ಕೆ ಬರೀ ಸಸಾರ.
#ಭಾವ, ಮೊಸ್ರಿಗೆ ಅನ್ನ ಹಾಕ್ಲಾ, ಹಾ, ಹಾ, ಉಪ್ಪಿನ್ಕಾಯ್ ತಂದೇ…
……..
೩#ಮೂರೂವರೆ ಆಯ್ತಲಾ, ಕಾಪಿ ಗಿಪೀ ಕೊಡಲ್ವನೆ ಹೆಣ್ಣೆ..
೧#ತಂದೆ, ತಂದೆ.. ಹಾಲ್ಕಾಯ್ಸಕ್ಕಿಟ್ಟಿದಾಳೆ. ಇನ್ನೈದ್ನಿಮ್ಷ..
೨# ಯಾರ್ಯಾರಿಗ್ ಕಾಫಿ ಬೇಕೋ ಕೈಯ್ಯೆತ್ತಿ.. ಟೀ ಬೇಕಾದವ್ರು ಎರ್ಡೂ ಕೈಯ್ಯೆತ್ತಿ..
೧# ಥೋ, ಎಂಥದೇ ಮರಾತಿ ನಿಂದು… ಬೋಂಡ ಉಳ್ದಿದ್ದೆಲ್ಲ ತಟ್ಟೆಲ್ ಜೋಡ್ಸು, ಉಂಡೆ, ಬರ್ಫಿ ಎಲ್ಲ ಇಡು, ಬೇಕಾದವ್ರ್ ತಿನ್ಲಿ..
…….
xyz# ಹೂ ಹೊರ್ಡದಾ ನಾವಿನ್ನು, ಬಱ್ತೀವಿ, ಬರ್ಲಾ, ಅತ್ಗೇ ಬರ್ತಿನಿ, ಬರ್ತಿನೇ ಹುಡ್ಗೀ- ಬಾ ನಮ್ಮೆನೆಗೊಂದ್ಸಲ..
೧#ಹಾ , ಹೊರ್ಟ್ರಾ… ಸರಿ, ಸರಿ, ತುಂಬ ಖುಶಿಯಾಯ್ತಪ ಎಲ್ಲ ಬಂದಿದ್ದು.. ಹಬ್ಬ ಜೋರಾಯ್ತು..
೨# ಹಾ, ಹಾ, ಸರಿ, ಸರಿ. ..
೩#ಹೊರ್ಟ್ರಾ…
……
೨#ಉಸ್ಸಪ್ಪಾ, ಅಂತೂ ಒಂದಧ್ಯಾಯ ಮುಗಿತಲಪ. ಗೌರಿ ಹಬ್ಬ ಮುಗೀತು.(ಸ್ವಲ್ಪ ಹೊತ್ ಕೂರಣ)
೩# ಅವ್ರಿದಾರಲ್ವನೇ, ಅವ್ರು ಇಲ್ಲೇ ನಮ್ಮನೆ ಹತ್ರ ಇದಾರಂತೆ, ಈಗ ಬರ್ತಾರಂತೆ.
೧# ಓ, ಭಾಳ ಅಪ್ರೂಪದವ್ರು, ಸ್ವಲ್ಪ ತಿಂಡಿ ಎಲ್ಲ ಹಾಕಿಟ್ಬಿಡಣ, ಬಂದಾಗ್ ಕೊಡಣ.
೨# (ಯಪ್ಪಾ, ಇವ್ರೇನ್ ಅತ್ತೆನೋ ಜಿಂಕೆಮರಿನೋ, ಅದೆಷ್ಟ್ ಓಡಾಡ್ತಾರಪ, ಏನಾರಾ ಮಾಡ್ಲಿ ನಾ ಎದ್ದೇಳಲ್ಲ. ನನ್ ಡ್ಯೂಟಿ ಮುಗಿತ್)
೧# ಬಾಗಿನ ಕೊಡವ್ರೆಲ್ಲ ಬಱ್ತಾರೆ, ರೆಡಿ ಮಾಡಿಟ್ಕಂಬೇಕು… ನಾಳೆ ಗಣೇಷ್ನಬ್ಬಕ್ಕೆ ಎಂತ ಮಾಡಣೇ?
೨# ಅಯ್ಯೋ, ಯಾಕಾದ್ರೂ ಬರುತ್ತಪ ಈ ಹಬ್ಬ…  ಹಬ್ಬ ಅಂದ್ರೆ ಉಸ್ಸಪ್ಪಾ!  ಆದ್ರೂ ಈ ಹಬ್ಬ ಒಂಥರಾ ಚಂದ ..
……..
ಹಬ್ಬ ಅಂದ್ರೇ ಹೊರೆಗೆಲ್ಸ. ಹಬ್ಬ ಅಂದ್ರೆ ಮನೆ ತುಂಬಾ ಗಿಜಿಗುಡೋ ಮಕ್ಳು, ಹಬ್ಬ ಅಂದ್ರೆ ವಿಪ್ರೀತ ಮಡಿ-ಹುಡಿ. ಹಬ್ಬ ಅಂದ್ರೆ ಹಳೇ ಕಂದಾಚಾರ, ಹಬ್ಬ ಅಂದ್ರೆ ಭಿನ್ನಾಬಿಪ್ರಾಯಗಳ ಜಟಾಪಟಿ..ಹಬ್ಬ ಅಂದ್ರೆ ಗಾಸಿಪ್ನ ಗುಸ-ಪಿಸ ಯಾನ, ಹಬ್ಬ ಅಂದ್ರೆ ದಿನಪೂರ್ತಿ ಗದ್ದಲ,ಗೊಂದಲ ಆದ್ರೂsss…
ಹಬ್ಬ ಅಂದ್ರೆ ಶ್ರದ್ಧೆ-ಭಕ್ತಿ, ಹಬ್ಬ ಅಂದ್ರೆ ಭಕ್ಷ್ಯ-ಭೋಜನ, ಹಬ್ಬ ಅಂದ್ರೆ ಹಿರಿಕಿರಿಯರ ಸಮಾಗಮ, ಹಬ್ಬ ಅಂದ್ರೆ ಪರಸ್ಪರ ಉಡುಗೊರೆಗಳ ಹಂಚುವ ಖುಷಿಘಳಿಗೆ,ಹಬ್ಬ ಅಂದ್ರೆ ಮಾತು,ನಗು,ಹರ್ಟೆ. ಹಬ್ಬ ಅಂದ್ರೆ ಸಂಪ್ರದಾಯ, ಹಬ್ಬ ಅಂದ್ರೆ ಸಂಭ್ರಮ, ಖುಷಿ,ಸಂತೋಷ,ನಗು.. ಹಬ್ಬ ಅಂದ್ರೆ ಕಷ್ಟ-ಸುಖಗಳ ತುಲಾಭಾರ, ಹಬ್ಬ ಅಂದ್ರೆ ಹಳೆ ನೆನಪುಗಳ ಭಂಡಾರ,ಹೊಸ ನೆನಪುಗಳ ಕಾರ್ಖಾನೆ. ಹಬ್ಬ ಅಂದ್ರೆ.. well…. its ಹಬ್ಬ.. a true celebration of families. And I love it very much. 🙂

Blasphemy- ದೈವದ ನಿಂದನೆ?

“ಎಷ್ಟೊ ಜನರು ಅವನ ಕ್ರುಪಾಕಟಾಕ್ಷಕ್ಕೆ ಪಾತ್ರರಾಗಲು ದಿನಗಟ್ಟಲೆ ಕಾಯುತಿದ್ದರು. ಅವನು ಸ್ನಾನಕ್ಕೆ ಬಳಸಿದ ನೀರೇ ಅವರಿಗೆ ಪವಿತ್ರ ತೀರ್ಥವಾಗುತಿತ್ತು.ಆ ಮೈಲಿಗೆ ನೀರು ತಮ್ಮ ರೋಗ ವಾಸಿಮಾಡುವುದೆಂಬ ನಂಬುಗೆಯಿಂದ ಜಲಭಿಕ್ಷೆಗೆ ಕೈ ಚಾಚುತಿದ್ದರು.ಅವನು ನಡೆದಾಡಿದ ನೆಲದ ಮಣ್ಣನ್ನು ಸಹ ಅತ್ಯಂತ ಪೂಜ್ಯ ಭಾವದಿಂದ ಎತ್ತಿಕೊಂಡು ಮನೆಗೊಯ್ಯುತ್ತಿದ್ದರು.ಅದನ್ನು ತಮ್ಮ ಮನೆಯ ಬಾಗಿಲುಗಳ ಹೊಸ್ತಿಲ ಮೇಲೆ ಸಿಂಪಡಿಸಿದರೆ ಸರ್ವ ದಿಕ್ಕಿನ ರಕ್ಷಣೆ ಖಚಿತವೆಂದು ನಂಬಿದ್ದರು.” 
   ಇಲ್ಲ. ಇದಾವುದೋ ಪುರಾಣದ ದೇವರ ಕಥೆಯಲ್ಲ. ಇಲ್ಲೆ ಪಕ್ಕದ ಪಾಕಿಸ್ಥಾನದಲ್ಲಿ, ಈಗೊಂದೆರದು ದಶಕಗಳ ಹಿಂದಿನ ಮಾತು. ಸೂಫಿ ಪರಂಪರೆಯ ಒಂದು ಪೀಟದ ಅಧಿಪತಿ ತನ್ನನ್ನು ದೈವಾಂಷನೆಂದು ನಂಬಿದ ಜನರ ಮುಗ್ಧತೆಯನ್ನು ಕೊಳ್ಳೆಹೊಡೆಯುತ್ತಾ. ಧರ್ಮವನ್ನೂ, ದೇವರನ್ನೂ ತನ್ನ ಅಸ್ತ್ರಗಳಂತೆ  ಬಳಸುತ್ತಾ ಅಟ್ಟಹಾಸ ಮೆರೆದ ಕಥೆ. ತನ್ನ ಎಲ್ಲಾ ಅನಾಚಾರಗಳಿಗೂ, ಬಡವರಿಂದ ಮಾಡುವ ಸುಲಿಗೆಗಳಿಗೂ ದೇವರ ಆದೇಶವೆಂಬ ರೂಪ ಕೊಡುತ್ತಾ ಧಾರ್ಮಿಕ ಶ್ರದ್ಧೆಯ ಹೆಸರಿನಿಂದ ಜನರಲ್ಲಿ ತನ್ನೆಡೆಗೆ,ತನ್ನ ಮನೆತನದೆಡೆಗೆ ಭಯ-ಭಕ್ತಿಯನ್ನುಣಿಸಿ ಘಟಿಸುವ ಪ್ರತೀ ಒಳ್ಳೆಯ ಕಾರ್ಯಕ್ಕೂ ತಾನು ದೇವರಲ್ಲಿ ಮಾಡಿದ ಶಿಫರಸ್ಸೇ ಕಾರಣ ಎಂಬ ನಂಬಿಕೆ ಹುಟಿಸುತ್ತಾ ಸುತ್ತಲಿನ ರಾಜಕೀಯವನ್ನೂ,ವ್ಯಾಪಾರವಹಿವಾಟುಗಳನ್ನೂ ತನ್ನ ಸುತ್ತಮುತ್ತಲ ಪ್ರತಿಯೊಂದು ಆಗುಹೋಗುಗಳನ್ನೂ ತನ್ನ ನಿಯಂತ್ರಣದಲ್ಲಿರಿಸಿಕೋಂಡ ಸರ್ವಾಧಿಕಾರಿಯೊಬ್ಬನ ಕಥೆ.
    ಇಂಥಾ ದುರಾತ್ಮನ ಪತ್ನಿಯಾಗಿ ಅವನ ಸಾಮ್ರಾಜ್ಯಕ್ಕೆ ಕಾಲಿಡುವ ಈ ಕಥೆಯ ಧುರಂತ ನಾಯಕಿ ‘ಹೀರ್’ ತನ್ನ ಪತಿಯಲ್ಲಿ ಕ್ರೂರ ಮೃಗವನ್ನು ಬಹು ಬೇಗನೆ ಗುರುತಿಸುತ್ತಾಳೆ. ಪತಿಯೆಂದರೆ ದೇವರಂತೆ,ಅದರಲ್ಲೂ ತನ್ನ ಪತಿ ಸಾಕ್ಷಾತ್ ದೈವಾಂಶ ಸಂಭೂತನೆಂಬ ನಂಬಿಕೆಯಿಂದ ಆತ ನೀಡುವ ಎಲ್ಲಾ ಕೊಟಲೆಗಳನ್ನೂ ಸಹಿಸುತ್ತಾಳೆ. ದೇವರ ಹೆಸರಿನಿಂದ  ತನ್ನ ಹವೇಲಿಯ ಹೊರಗೆ ಮುಗ್ಧ ಜನರೂ , ಹವೇಲಿಯ ಒಳಗೆ ತಾನೂ ತನ್ನಂತ ಅಸಹಾಯಕ ಹೆಣ್ಣೂಮಕಳೂ ದಿನಂಪ್ರತಿ ಶೋಷಣೆಗೊಳಗಾಗುವುದನ್ನು ನೋಡಿ ಕನಲುತ್ತಾಳೆ. ಚಿಕ್ಕ ಚಿಕ್ಕ ತಪ್ಪುಗಳಿಗೂ ಶಿಕ್ಶೆಗೊಳಗಾಗುತ್ತಾ ಸಂಪೂರ್ಣ ಸ್ವಾತಂತ್ರ್ಯರಾಹಿತ್ಯ ಪರ್ದಾ ಪದ್ದತಿಯಲ್ಲಿ ನರಕಸದೃಷ ಬಾಳನ್ನು ನಡೆಸುತಾಳೆ.
ಎಷ್ಟೇ ಕಷ್ಟಗಳು ಬಂದರೂ ಹೀರ್’ಳಿಗಾಗಲೀ ಇನ್ನಾರಿಗಾಗಲೀ ಈ ಕ್ರೂರ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಬೇಕೆನಿಸುವುದಿಲ್ಲ.
  ತನ್ನಮೇಲಾಗುವ ಎಲ್ಲಾ ಅತ್ಯಾಚಾರಗಳನ್ನೂ, ಪತಿಯ ಕಾಮತೃಷೆಗೆ ಬಲಿಯಾಗುವ ಹೆಣ್ಣುಮಕ್ಕಳ ಮಾರಣಹೋಮವನ್ನೂ ತಡೆಯಲು ಹೀರಳು ದೇವರ ಮೊರೆಹೋಗುವುದಲ್ಲದೆ ಇನ್ನೇನು ಮಡಲಾಗದೇಹೋಗುತ್ತಳೆ. ಹೆಣ್ಣುಬಾಕ ಪತಿ ಸ್ವಂತ ಮಗಳೆಡೆಗೇ ಕೈಚಾಚಿದಾಗಲೂ ಆತನ ವಿಕೃತಿಗಳ ಪರಿಣಾಮವಾಗಿ ಆತನ ಗಣ್ಯ ಸ್ನೇಹಿತರಿಗೆ ತನ್ನನ್ನು ಬೆಲೆವೆಣ್ಣೆಂದು ಪರಿಚಯಿಸಿದಾಗಲೂ ದುಃಖ್ಖದಿಂದ ದೇವರೆಡೆಗೆ ಮುಖಮಾಡುವುದೊಂದೇ ಸಾಧ್ಯವಾಯ್ತವಳಿಗೆ. ಕಡೆಗೆ ದೈವಾಂಷ ಸಂಭೂತನ ಸಾವಿಗಾಗಿ ಎದುರು ನೋಡುವ ಹೀರ್ ಪತಿಯ ಸಾವಿನನಂತರ ಸಿಗುವ ಸ್ವಾತಂತ್ರ್ಯದ ಸದುಪಯೋಗಪಡಿಸಿಕೋಂಡು ತನ್ನ ಸುತ್ತಲ ಜನರ ಅಜ್ಞಾನವನ್ನು ಹೋಗಲಾಡಿಸಲು ತನ್ನದೇ ವಿಧಾನಗಳಿಂದ ಪ್ರಯತ್ನಿಸುವ ಅನೂಹ್ಯ ಸಾಹಸಗಾಥೆಯೇ “ತೆಹ್ಮಿನಾ ದುರ್ರಾನಿ”ಯವರ ಕೃತಿ ‘blasphemy’ಯ ಕನ್ನಡಾನುವಾದ “ಪೀಠಾಧಿಪತಿಯ ಪತ್ನಿ”(-ರಾಹು).
  ಧರ್ಮವೆಂಬುದು ಅಪೀಮಿನಂತೆ, ಒಮ್ಮೆ ಅದನ್ನುಂಡರೆ ಮುಗಿಯಿತು. ಧರ್ಮದ  ಹೆಸರಿನಲ್ಲಿ ನಡೆಸುವ ಎಲ್ಲಾ ಚಟುವಟಿಕೆಗಳೂ ಸಮರ್ಥನೀಯವೆನಿಸುತ್ತದೆ. ಕಷ್ಟಗಳು ದೇವರೊಡ್ಡುವ ಪರೀಕ್ಷೆಯೆಂದೂ ಅವುಗಳಿಂದ ಪಾರಾಗಲು ದೇವದೂತರನ್ನು ಒಲಿಸಿಕೊಳ್ಳುವುದೊಂದೇ ಮಾರ್ಗವೆಂದೂ ನಂಬಿಸಲಾಗುತ್ತದೆ ಎಂಬುದನ್ನು ತೆಹ್ಮಿನಾರು ತಮ್ಮ ಕೃತಿಯಲ್ಲಿ ಸಮರ್ಥವಾಗಿ ನಿರೂಪಿಸಿದ್ದಾರೆ. ಇದನ್ನು ಕಾಲ,ದೇಶಗಳ ಚೌಕಟ್ಟಿನೊಳಗಿಡದೇ ಒಂದು ಜನಾಂಗದ ಆಚರಣೆಯಷ್ಟೇ ಎಂದು ಭಾವಿಸದೇ ವೀಕ್ಷಿಸುವುದು ಅಗತ್ಯವಾಗಿದೆ.
    ಧರ್ಮಸುಧಾರಕರೆಂಬ/ಪ್ರಚಾರಕರೆಂಬ ಸೋಗಿನಲ್ಲಿ ಅಮಾಯಕರನ್ನು ಸುಲಿಯುವ, ಧರ್ಮದ ಹೆಸರಿನಲ್ಲಿ ಅಂಧಶ್ರದ್ಧೆ, ಮೌಢ್ಯವನ್ನು ಬಿತ್ತುವ ಜನರೂ,ಎಲ್ಲ ಜಾತಿ-ಧರ್ಮಗಳ ಮೂಲ ಉದ್ದೇಶ ಮನುಷ್ಯನ ಚಿತ್ತಸ್ವಾಸ್ಥ್ಯ ,ಸಹಬಾಳ್ವೆ- ಸಹಜೀವನ ಎಂಬುದನ್ನು ಮರೆತು ಕಂದಾಚಾರಗಳನ್ನೂ,ನೈತಿಕ ಮೌಲ್ಯಗಳ ಹೆಸರಿನಲ್ಲಿ ದಬ್ಬಾಳಿಕೆಯನ್ನೂ ಹೇರುತ್ತಿರುವವರೂ, ಅಸಹಾಯಕರಾಗಿ, ದಲಿತ/ಶೋಷಿತರನ್ನು ಕಾಲ್ಕಸವಾಗಿಸಿ ಮೆರೆಯುತ್ತಿರುವವರೂ ನಮ್ಮ ಸುತ್ತಲೂ ತುಂಬಿರುವರು. 
   ಈ ಎಲ್ಲಾ ಗೋಜಲುಗಳಲ್ಲೂ ಮುಖ್ಯವಾಗಿ ನೋವುಣ್ಣುವುದು ಸ್ತ್ರೀಯೇ . ಜಾತಿ, ಧರ್ಮ, ಪುರಾತನ ಸಂಸ್ಕೃತಿ ಇವೆಲ್ಲವುಗಳಿಗಿಂತ ದೊಡ್ಡದು ಮಾನವತೆಯೊಂದೇ ಆಗಿದೆ. ಪರಸ್ಪರ ಸಹಕಾರ ಹಾಗೂ ಸಹಮತದಿಂದ ಬಾಳುವುದು ಸಾಧ್ಯವಾದಲ್ಲಿ ಜಾತಿ ಧರ್ಮದ ಭಯವೂ, ಅಗತ್ಯವೂ ಇರುವುದಿಲ್ಲ ಎಂಬುದನ್ನು ಅರಿತಷ್ಟೂ ನಾವು ಮನುಷ್ಯರಾಗುತ್ತೇವೆ ಎನಿಸುತ್ತದೆ.